ಬಂಗಾರಪೇಟೆ: ಪಟ್ಟಣದ ಹೊರವಲಯದ ಲಕ್ಷ್ಮಿಪುರ ಗ್ರಾಮದ ವಿವೇಕಾನಂದ ಶಾಲೆಯ ಆಡಳಿತ ಮಂಡಳಿ ಮತ್ತು ಕಟ್ಟಡ ಮಾಲೀಕರ ನಡುವೆ ನಡೆದಿರುವ ಹಣಕಾಸು ವ್ಯವಹಾರದ ಜಟಾಪಟಿಯಿಂದ ಶಾಲೆಯ ನೂರಾರು ಮಕ್ಕಳು ಶುಕ್ರವಾರ ಶಾಲೆಯ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ರಸ್ತೆಯಲ್ಲಿ ಕುಳಿತುಕೊಳ್ಳಬೇಕಾಯಿತು.
ಶಾಲೆಯ ಕಾರ್ಯದರ್ಶಿ ಶ್ರೀನಿವಾಸ್ ಮತ್ತು ಕಟ್ಟಡ ಮಾಲೀಕ ಸತ್ಯನಾರಾಯಣ ನಡುವೆ ಹಣಕಾಸು ವ್ಯವಹಾರ ಇದೆ. ಗುರುವಾರ ಶಾಲೆಯ ಆವರಣ ಪ್ರವೇಶಿಸಿದ ಸತ್ಯನಾರಾಯಣ ಮತ್ತು ಸಹಚರರು ಶಾಲೆಯ ನಾಮಫಲಕಕ್ಕೆ ಬಣ್ಣ ಬಳಿದು, ಖಾಸಗಿ ಸ್ವತ್ತು ಎಂದು ಬರೆದರು. ಮಕ್ಕಳು ಪ್ರವೇಶಿಸದಂತೆ ವ್ಯವಸ್ಥೆ ಮಾಡಿದರು. ಶಾಲೆಯ ಆವರಣದಲ್ಲಿ ಟ್ರಾಕ್ಟರ್ ಇರಿಸಿ, ಎಮ್ಮೆ ಕಟ್ಟಿದರು.
ಈ ಸಂಬಂಧವಾಗಿ ಶ್ರೀನಿವಾಸ್ ಮತ್ತು ಸತ್ಯನಾರಾಯಣ ಪ್ರತ್ಯೇಕವಾಗಿ ದೂರುಗಳನ್ನು ಪೊಲೀಸರಿಗೆ ನೀಡಿದರು. ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬೆಳಿಗ್ಗೆ ಶಾಲೆಗೆ ಬಂದ ಮಕ್ಕಳು ಬೀಗ ಹಾಕಿರುವುದನ್ನು ಕಂಡರು. ವಿಷಯ ತಿಳಿದು ನೂರಾರು ಪೋಷಕರು ಸಹ ಶಾಲೆಯ ಬಳಿಗೆ ಬಂದರು ಆಡಳಿತ ಮಂಡಳಿಗೆ ಸಹಾನುಭೂತಿ ವ್ಯಕ್ತಪಡಿಸಿದರು.
ಸಿವಿಲ್ ವ್ಯವಹಾರದಲ್ಲಿ ಪೊಲೀಸರು ಅನಗತ್ಯವಾಗಿ ಮೂಗು ತೂರಿಸಿ, ವಿವಾದ ಮತ್ತಷ್ಟು ಹೆಚ್ಚಲು ಕಾರಣವಾಗಿದ್ದಾರೆ ಎಂದು ಪೋಷಕರು ಆರೋಪಿಸಿದರು. ಸರ್ಕಲ್ ಇನ್‌ಸ್ಪೆಕ್ಟರ್ ಜೊತೆಯಲ್ಲಿ ವಾಗ್ವಾದ ನಡೆಸಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಚಂದ್ರಮೌಳೇಶ್ವರ , ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಸ್ಥಳಕ್ಕೆ ಬಂದು ಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆದರು.
ಶಾಲೆ ಪ್ರಾರಂಭವಾಗುವುದು 28 ನೇ ತಾರೀಕಿನಿಂದ. ಅಲ್ಲಿಯವರೆವಿಗೂ ಶಾಲೆಗೆ ಮಕ್ಕಳು ಬರದಂತೆ ತಿಳಿಸಬೇಕು ಎಂದು ಕಾರ್ಯದರ್ಶಿ ಶ್ರೀನಿವಾಸ್ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿ, ಶಾಲೆಯ ಪ್ರಾರಂಭದೊಳಗೆ ಸಮಸ್ಯೆ ಇತ್ಯರ್ಥ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿ ಮಾಡಿಕೊಡಬೇಕು ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.