ಬುಧವಾರ, ನವೆಂಬರ್ 13, 2019
17 °C
ಎ.ಜೆ.ಸದಾಶಿವ ಆಯೋಗ ವರದಿ ಹೋರಾಟ ಸಮನ್ವಯ ಸಮಿತಿ ಮುಖಂಡರ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯ

ಸದಾಶಿವ ವರದಿ ಜಾರಿಗೆ ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಅನುಮೋದಿಸಿ, ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಎ.ಜೆ.ಸದಾಶಿವ ಆಯೋಗ ವರದಿ ಹೋರಾಟ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ.ವೈ.ಬೆಣ್ಣೂರು ಒತ್ತಾಸಿದರು.

ನಗರದ ಗುರುವಾರ ನಡೆದ ಸಮಿತಿಯ ಸ್ಥಳೀಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕವಾಗಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅನೇಕ ವರ್ಷಗಳಾಗಿವೆ. ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸುವಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ರಾಜಕೀಯ ಒತ್ತಡಕ್ಕೆ ಮಣಿದು ವರದಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಕೆಲ ಜನಪ್ರತಿನಿಧಿಗಳು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ವರದಿ ಜಾರಿಗೆ ಅಡ್ಡಗಾಲು ಹಾಕುತ್ತಿರುವುದು ತೀವ್ರ ಖಂಡನೀಯ. ಬಿಜೆಪಿ ನೀತಿ ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಿರುವ ಅವರ ವಿರುದ್ಧ ಶಿಸ್ತುಕ್ರಮಕ್ಕಾಗಿ ಬಿಜೆಪಿ ವರಿಷ್ಠರಿಗೆ ದೂರು ನೀಡಲಾಗುವುದು’ ಎಂದು ಹೇಳಿದರು.

ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೋಡಿಗೆಹಳ್ಳಿ ಮಾತನಾಡಿ, ‘ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸದಾಶಿವ ಆಯೋಗ ವರದಿ ಜಾರಿಗೆ ಎರಡು ತಿಂಗಳ ಗಡುವು ಪಡೆದಿದ್ದರು. ಬಳಿಕ ಅವರೂ ಅಸಡ್ಡೆ ತೋರಿದರು’ ಎಂದು ತಿಳಿಸಿದರು.

‘ಶೋಷಿತರಿಗೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಸಾಕಾರವಾಗಲು ಸಂವಿಧಾನಬದ್ಧವಾಗಿ ಮೂಲಭೂತ ಹಕ್ಕು ನೀಡಲಾಗಿದೆ. ಆದರೆ ಅದು ಈ ಎಲ್ಲ ಉಪಜಾತಿಗಳ ನಡುವೆ ಇನ್ನೂ ಸರಿಯಾಗಿ ಹಂಚಿಕೆಯಾಗಿಲ್ಲ’ ಎಂದು ಬೇಸರಿಸಿದರು.

ಘಟಕದ ಉಪಾಧ್ಯಕ್ಷ ಅಶೋಕ್ ಕಟ್ಟಿ, ಜಗದೀಶ್, ನಲ್ಲಕದಿರೇನಹಳ್ಳಿ ಗಂಗಪ್ಪ, ಶಿಡ್ಲಘಟ್ಟ ನಾಗೇಶ್, ಲಕ್ಷ್ಮಣ್, ಮುರಳಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)