ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ಸುಗ್ಗಿ ಆಚರಣೆಗೆ ಸಜ್ಜು

ಉತ್ತಮ ಮಳೆ– ಬೆಳೆ, ರೈತರಲ್ಲಿ ಈ ಬಾರಿ ಹರ್ಷ; ಕೊರೊನಾ ಭೀತಿಯಲ್ಲೂ ಸಂಭ್ರಮ
Last Updated 14 ಜನವರಿ 2021, 2:20 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಈ ವರ್ಷ ಉತ್ತಮ ಮಳೆ ಬೆಳೆಯಾಗಿದ್ದು, ಸಡಗರ ಸಂಭ್ರಮದಿಂದ ಸುಗ್ಗಿಯ ಹಬ್ಬ ಸಂಕ್ರಾಂತಿಗೆ ಸಿದ್ಧತೆ ನಡೆದಿದೆ. 10 ತಿಂಗಳಿನಿಂದ ಕಾಡುತ್ತಿದ್ದ ಕೋವಿಡ್-19 ಸಹ ಕ್ಷೀಣಿಸಿದೆ. ಅಸ್ವಸ್ಥಗೊಂಡಿದ್ದ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಗ್ರಾಮೀಣ ಸೊಗಡಿನ ಸಂಕ್ರಾಂತಿ ಸಂಭ್ರಮ ಜನತೆಯಲ್ಲಿ ಎದ್ದು ಕಾಣುತ್ತಿದೆ.

ಹಬ್ಬದ ಮುನ್ನಾ ದಿನವಾದ ಬುಧವಾರ ಪೂಜಾ ಸಾಮಗ್ರಿಗಳನ್ನು ಖರೀದಿಸಲು ನಗರದ ಮಾರುಕಟ್ಟೆಯಲ್ಲಿ ಜನಸಂದಣಿ ಇತ್ತು. ಐ.ಡಿ.ಎಸ್.ಎಂ.ಟಿ ಕಾಂಪ್ಲೆಕ್ಸ್, ಜೋಡಿ ರಸ್ತೆ , ಗುರುಭವನದ ಮುಂಭಾಗ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಜನಜಂಗುಳಿಯೇ ಕಂಡುಬಂತು. ಹೂ.ಹಣ್ಣು, ಕಬ್ಬಿನ ಜಲ್ಲೆ, ಎಳ್ಳು ಬೆಲ್ಲ, ಕಡಲೆಕಾಯಿ, ಅವರೆಕಾಯಿ ಅಧಿಕವಾಗಿ ಮಾರಾಟವಾಗುತ್ತಿದ್ದ ದೃಶ್ಯಸಾಮಾನ್ಯವಾಗಿತ್ತು.

‘ಹಿಂದೆ ಸಂಕ್ರಾಂತಿ ಬಂತೆಂದರೆ ಸುಗ್ಗಿಯ ಜತೆಗೆ ಹಿಗ್ಗೂ ಬರುತ್ತಿತ್ತು. ರೈತರ ಮುಖದಲ್ಲಿ ನಗೆ, ಸಂಭ್ರಮ ಚೆಲ್ಲುತ್ತಿತ್ತು. ಮಂದಹಾಸ ಬೀರುತ್ತಾ ನಗುಮೊಗದಿಂದ ಸುಗ್ಗಿಯ ಸಂಕ್ರಾಂತಿಯನ್ನು ಆಚರಿಸುತ್ತಿದ್ದರು. ಈ ಬಾರಿ ರೈತರ ಮುಖದಲ್ಲೂ ಸ್ವಲ್ಪ ಸಂತಸ ಕಾಣುತ್ತಿದೆ. ಈ ವರ್ಷ ಸಮಾಧಾನಕರವಾಗಿ ಹಬ್ಬದ ಆಚರಣೆ ಮಾಡಲು ಮುಂದಾಗಿದ್ದಾರೆ’ ಎನ್ನುತ್ತಾರೆ ರೈತ ಮುಖಂಡ ರಘುನಾಥರೆಡ್ಡಿ.

‘ಸಂಕ್ರಾಂತಿ ಬಂತೆಂದರೆ ಸುಗ್ಗಿ ಎಂದು ಹಿಗ್ಗುತ್ತಿದ್ದರು. ಬೆಳೆಯನ್ನು ಒಕ್ಕಣೆ ಮಾಡಿ ಬೇಕಾದಷ್ಟು ದವಸಧಾನ್ಯವನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಮಾರಿ ಹಣ ಜೇಬಿಗಿಳಿಸುವುದು ಸಂಕ್ರಾಂತಿಯಿಂದ ಸಿಗುವ ಶುಭ ಸಂಕೇತವೆಂದು ನಂಬಿ ಆಚರಣೆ ಮಾಡುತ್ತಿದ್ದರು. ಮನೆಯಲ್ಲಿ ಧಾನ್ಯವನ್ನು ತುಂಬಿಕೊಂಡಿದ್ದರೆ ಅವರ ಹಿಗ್ಗಿಗೆ ಪಾರವೇ ಇರುತ್ತಿರಲಿಲ್ಲ. ದನಗಳ ಕಿಚ್ಚು ಹಾರಿಸಿ ಖುಷಿಪಡುತ್ತಿದ್ದರು. ಮನೆ ಮಂದಿಯೆಲ್ಲ ಸಡಗರ ಸಂಭ್ರಮದಲ್ಲಿ ಮಿಂದು ತೇಲುತ್ತಿದ್ದರು. ಇತ್ತೀಚೆಗೆ ಆ ಸಂಭ್ರಮ ಮರೆಯಾಗುತ್ತಿದೆ’ ಎಂದು ಅವರು ವಿಷಾದಿಸಿದರು.

‘ಮಳೆ, ಬೆಳೆಯಿಲ್ಲದೆ, ಬೆಳೆದ ಬೆಳೆಗಳ ಉತ್ಪನ್ನಗಳಿಗೆ ಬೆಲೆ ಇಲ್ಲದೆ ತೀವ್ರ ಸಂಕಷ್ಟದಿಂದ ಒದ್ದಾಡುತ್ತಿರುವ ರೈತರಿಗೆ ಯಾಕಾದರೂ ಸಂಕ್ರಾಂತಿ ಬಂದಿತೊ ಎನ್ನುವಂತಾಗಿತ್ತು. ಸುಗ್ಗಿಯೇ ಇಲ್ಲದ ಮೇಲೆ ಹಬ್ಬವಾದರೂ ಏಕೆ ಎಂಬ ಪ್ರಶ್ನೆ ಕಾಡುತ್ತಿತ್ತು. ಈ ಬಾರಿ ಬದಲಾವಣೆಯಾಗಿದ್ದು ರೈತರು ಖುಷಿಯಿಂದ ಹಬ್ಬ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ’ ಎಂದು ರೈತ ಮುನಿಯಪ್ಪ ಹೇಳಿದರು.

‘ಈ ವರ್ಷ ಬೆಳೆಗಳಿಗೆ ಅಗತ್ಯವಾದ ಮಳೆಯಾಗಿದ್ದು ಬೆಳೆಗಳು ಉತ್ತಮವಾಗಿ ಬೆಳೆದಿದ್ದರು. ರೈತರು ಸುಗ್ಗಿಯಲ್ಲಿ ತಮ್ಮ ಉತ್ಪನ್ನಗಳನ್ನು ಮನೆ ತುಂಬಿಸಿಕೊಂಡಿದ್ದಾರೆ. ಕಳೆದ 3-4 ವರ್ಷಗಳಿಂದ ಚಿಂತಾಕ್ರಾಂತರಾಗಿದ್ದ ರೈತ ಸಮೂಹ ಈ ವರ್ಷ ಲಗುಬಗೆಯಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ಪ್ರಗತಿಪರ ರೈತ ಶಿವಾನಂದ.

ಈ ವರ್ಷ ಕೊರೊನಾ ಸೋಂಕಿನ ಭಯ ಜನರನ್ನು ಕಾಡುತ್ತಿದೆ. ಆರ್ಥಿಕ ಸಂಕಷ್ಟದಿಂದ ಜನರಲ್ಲಿ ಹಬ್ಬದ ವಸ್ತುಗಳ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದರೂ ಹಬ್ಬಕ್ಕಾಗಿ ಖರೀದಿ ಜೋರಾಗಿಯೇ ಇದೆ. ಹಳ್ಳಿ ನಗರ ಮತ್ತು ಪಟ್ಟಣಗಳ ಎನ್ನದೆ ಎಲ್ಲರಲ್ಲೂ ಹಬ್ಬದ ವಾತಾವರಣ ಕಂಡು ಬರುತ್ತಿದೆ. ರಸ್ತೆಗಳ ಅಂಚಿನಲ್ಲಿ ಕಬ್ಬಿನ ಜಲ್ಲೆಗಳ ರಾಶಿ, ಹೂವಿನ ಮತ್ತು ಹಣ್ಣುಗಳ ರಾಶಿಗಳು ಕಾಣುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT