ಶಾಲೆ ಅಂದ ಹೆಚ್ಚಿಸಿದ ಹವ್ಯಾಸಿ ತಂಡ

7
ಬೆಂಗಳೂರಿನ ‘ಟೀಮ್ ಡಿಒಎಚ್’ ಮತ್ತು ‘ಲೈಕನ್ ರೈಡರ್ಸ್‌’ ತಂಡದ ಸದಸ್ಯರ ವಿಶಿಷ್ಟ ಸೇವೆ

ಶಾಲೆ ಅಂದ ಹೆಚ್ಚಿಸಿದ ಹವ್ಯಾಸಿ ತಂಡ

Published:
Updated:
Deccan Herald

ಶಿಡ್ಲಘಟ್ಟ: ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಬಣ್ಣ ಬಳಿದು ಅಂದಗೊಳಿಸಿದ ಬೆಂಗಳೂರಿನ ‘ಟೀಮ್ ಡಿಒಎಚ್’ ಮತ್ತು ‘ಲೈಕನ್ ರೈಡರ್ಸ್‌’ ಎಂಬ ಹವ್ಯಾಸಿ ಬುಲೆಟ್‌ ಬೈಕ್‌ ಓಡಿಸುವ ಗುಂಪಿನ ಸದಸ್ಯರನ್ನು ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು.

ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಒಎಚ್ ಗ್ರೂಪ್‌ ಗೌತಮ್ ಅವರು, ಕೇವಲ ಬೈಕ್ ರೈಡಿಂಗ್, ಜಾಲಿ ಮೂಡ್‌ನಲ್ಲಿದ್ದ ಯುವಕರ ಗುಂಪಿಗೆ ಸರ್ಕಾರಿ ಶಾಲೆಗಳಲ್ಲಿ ಸೇವೆ ಮಾಡುವ ಮನಸ್ಸಾಯಿತು. ಈ ಶಾಲೆಯ ಶಿಕ್ಷಕ ವರ್ಗ ಸೇವೆಗೆ ಸಹಕರಿಸಿದರು. ಇಲ್ಲಿನ ವಾತಾವರಣ ನೋಡಿ ಖುಷಿಯಾಗಿ, ಮತ್ತಷ್ಟು ಶೈಕ್ಷಣಿಕ ಸೇವೆ ಮಾಡುವ ಪ್ರೇರಣೆ ದೊರೆತಿದೆ ಎಂದರು.

ಡಿಒಎಚ್ ಗ್ರೂಪ್‌ ಸದಸ್ಯ ಗೌರವ್ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ಸಮಯಪಾಲನೆ ಅಂಶಗಳಿಗೆ ಒತ್ತು ಕೊಟ್ಟರೆ ಕಲಿಕೆಯು ಸುಲಭವಾಗುತ್ತದೆ. ಕಲಿಕಾಸಕ್ತಿ ಜೊತೆಗೆ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು’ ಎಂದರು.

ಲೈಕನ್ ರೈಡರ್ಸ್‌ ಸದಸ್ಯ ಶಬರಿ ಮಾತನಾಡಿ, ‘ನಮ್ಮ ತಂಡದ ಸದಸ್ಯರೆಲ್ಲರೂ ಸೇರಿ ಶಾಲೆಗೆ ಸ್ವತಃ ಬಣ್ಣ ಬಳಿದು ಅಂದ ಹೆಚ್ಚಿಸಿದ್ದಲ್ಲದೆ, ಸುಮಾರು ₹ 30 ಸಾವಿರ ವೆಚ್ಚದಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿ, ಕ್ರೀಡೋಪಕರಣ ನೀಡಿದ್ದೇವೆ. ಇನ್ನು ಮುಂದೆ ಶೈಕ್ಷಣಿಕ ಸೇವೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ ಅವರು ಕ್ರೀಡೆಗಳಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಜಗದೀಶ್ ಮಕ್ಕಳಿಗೆ ಪೆನ್ಸಿಲ್ ಮತ್ತು ಪೆನ್‌ಗಳನ್ನು ವಿತರಿಸಿದರು. ಟೀಮ್ ಡಿಒಎಚ್ ಮತ್ತು ಲೈಕನ್ ರೈಡರ್ಸ್‌ ತಂಡದ ವತಿಯಿಂದ ಶಾಲೆಗೆ ಕ್ರೀಡೋಪಕರಣಗಳು, ಮಕ್ಕಳಿಗೆ ಟೀಶರ್ಟ್‌, ಅಂಗನವಾಡಿಗೆ ಡೆಸ್ಕ್‌, ಲೇಖನ ಸಾಮಗ್ರಿಗಳನ್ನು, ಹಾಲು ಉತ್ಪಾದಕರ ಸಹಕಾರ ಸಂಘದಿಂದ ಶಾಲೆಗೆ ಸ್ಟೀಲ್ ಅಲ್ಮೆರಾ ಮತ್ತು ಅಂಗನವಾಡಿ ಮಕ್ಕಳಿಗೆ ಕುರ್ಚಿ, ವಾಟರ್ ಬಾಟಲ್, ಲೇಖನ ಪರಿಕರಗಳನ್ನು ವಿತರಿಸಲಾಯಿತು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಪ್ರಮಾಣಪತ್ರ ವಿತರಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಭಾಗ್ಯಮ್ಮ, ಎಸ್.ಡಿ.ದೇವರಾಜು, ಎಂಪಿಸಿಎಸ್ ಅಧ್ಯಕ್ಷ ವೆಂಕಟೇಗೌಡ, ನಿರ್ದೇಶಕ ಪಿಳ್ಳಪ್ಪ, ನಾಗರಾಜು, ದೊಡ್ಡಮುನಿವೆಂಕಟಶೆಟ್ಟಿ, ಚಿಕ್ಕಮುನಿವೆಂಕಟಶೆಟ್ಟಿ, ಎಸ್‌ಡಿಎಂಸಿ ಸದಸ್ಯೆ ಸಾವಿತ್ರಮ್ಮ, ಕಲಾವತಿ, ಎನ್.ಪಿ.ನಾಗರಾಜಪ್ಪ, ಶಿಕ್ಷಕ ಬೈರಾರೆಡ್ಡಿ, ಮುಖ್ಯಶಿಕ್ಷಕಿ ಉಮಾದೇವಿ, ಅಂಗನವಾಡಿ ಕಾರ್ಯಕರ್ತೆ ಜಯಂತಿ, ಮಂಜುಳಮ್ಮ, ಗ್ರಾಮಸ್ಥರು, ಪೋಷಕರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !