ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಕೃತ ಅಗ್ನಿ ಸುರಕ್ಷಾ ನೀಲನಕ್ಷೆ ಬಿಡುಗಡೆ

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಯಾಂಡ್ ಕಾರ್ಲ್‌ಟನ್ ಸಂಸ್ಥೆಯು ‘ಬೆಂಗಳೂರು ಕೇಂದ್ರೀಕೃತ ಅಗ್ನಿ ಸುರಕ್ಷಾ ನೀಲನಕ್ಷೆ’ ಯೋಜನಾ ವರದಿ ಸಿದ್ಧಪಡಿಸಿದೆ. ಅದನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಉದಯ್ ವಿಜಯನ್, ‘ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆಯ ಸಹಭಾಗಿತ್ವದಲ್ಲಿ ಅಧ್ಯಯನ ಮಾಡಿ, 5 ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ವರದಿ ರಚಿಸಲಾಗಿದೆ. ಶೀಘ್ರದಲ್ಲಿ ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದರು.

ಯೋಜನೆಯನ್ನು ‘2018ರಿಂದ 2020’ ಹಾಗೂ ‘2021ರಿಂದ 2023’ ಎಂದು ಹಂತಗಳಾಗಿ ವಿಭಜಿಸಲಾಗಿದೆ. ಮೊದಲ ಹಂತದ ಭಾಗವಾಗಿ ವರದಿ ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದ ಕಾಲಮಾನಕ್ಕೆ ತಕ್ಕಂತೆ ಪರಿಷ್ಕೃತ ವರದಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದರು.

ಅಗ್ನಿ ದುರಂತಗಳನ್ನು ತಕ್ಷಣವೇ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಹೀಗಾಗಿ, ಐದು ವರ್ಷಗಳಲ್ಲಿ ಶೇ 50ರಷ್ಟು ದುರಂತಗಳಿಗೆ ಕಡಿವಾಣ ಹಾಕಿ, ಯಾವುದೇ ಸಾವು ಸಂಭವಿಸದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

‘ಕಟ್ಟಡ ಮಾಲೀಕರು, ನಿವಾಸಿಗಳು, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ವಿಭಾಗ, ನಗರ ಆಡಳಿತ, ಉದ್ಯಮ ಮತ್ತು ನಾಗರಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ವರದಿ ಸಿದ್ಧಪಡಿಸಿದ್ದೇವೆ. ಅಪಾರ್ಟ್‌ಮೆಂಟ್ ಸಮುಚ್ಚಯಗಳು, ಮಾಲ್‌ಗಳು, ಚಿತ್ರಮಂದಿರಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಹೆಚ್ಚು ಜನ ಸೇರುವಂತಹ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಅತ್ಯಂತ ಪ್ರಮುಖ ವಿಷಯ. ಈ ಸಂಬಂಧ ನಿರ್ದಿಷ್ಟ ಮಾರ್ಗಸೂಚಿ ಇಲ್ಲ. ಹೀಗಾಗಿ, ಈ ಕಾರ್ಯಕ್ಕೆ ಮುಂದಾದೆವು’ ಎಂದು ವಿವರಿಸಿದರು.

ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದ ವಾಣಿಜ್ಯ ಹಾಗೂ ವಸತಿ ಕಟ್ಟಡಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಪ್ರತ್ಯೇಕ ನೀತಿಗಳನ್ನು ರೂಪಿಸಬೇಕು ಎಂದು ಸಂಸ್ಥೆಯ ಸದಸ್ಯ ಸುಮಿತ್ ಕನ್ಹಾ ಒತ್ತಾಯಿಸಿದರು.

ವರದಿಯಲ್ಲಿ ಸೂಚಿಸಿರುವ ಪ್ರಮುಖ ಅಂಶಗಳು

* ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಕಾಯ್ದೆಗಳ ತಿದ್ದುಪಡಿ

* ಅಗ್ನಿ ಸುರಕ್ಷತಾ ವ್ಯವಸ್ಥೆಯ ಆಧುನೀಕರಣ

* ಪಾಲುದಾರರ ಜತೆಗೂಡಿ ಸಾರ್ವಜನಿಕರಲ್ಲಿ ಜಾಗೃತಿ

* ಸುರಕ್ಷತಾ ಕ್ರಮಗಳ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ

* ಬಿಡಿಎ, ಬಿಬಿಎಂಪಿ, ಎನ್‌ಡಿಆರ್‌ಎಫ್, ಖಾಸಗಿ ಉದ್ಯಮಗಳು, ಕಟ್ಟಡ ಮಾಲೀಕರು, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಬೆಸ್ಕಾಂ ಹಾಗೂ ಸಾರ್ವಜನಿಕರ ನಡುವೆ ಸಮನ್ವಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT