ಗುರುವಾರ , ಅಕ್ಟೋಬರ್ 22, 2020
22 °C
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಅರಿವು ರಥಕ್ಕೆ ಚಾಲನೆ

ಆರೋಗ್ಯಕರ ಜೀವನಕ್ಕೆ ಆತ್ಮಸ್ಥೈರ್ಯ ಮುಖ್ಯ: ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಮನುಷ್ಯನು ಆರೋಗ್ಯಕರವಾದ ಜೀವನ ನಡೆಸಬೇಕೆಂದರೆ ಅವನಿಗೆ ಆತ್ಮಸ್ಥೈರ್ಯ ತುಂಬುವಂತಹ ಮನಸ್ಸು ಮುಖ್ಯವಾಗಿರುತ್ತದೆ. ನಿತ್ಯದ ಜೀವನ ಜಂಜಾಟದಲ್ಲಿ ಒತ್ತಡಗಳು ಸರ್ವೇಸಾಮಾನ್ಯ ಆದರೆ ಆತ್ಮಸ್ಥೈರ್ಯ ಕಳೆದುಕೊಳ್ಳುವಂತಹ ಕೆಲಸ ಯಾರೂ ಸಹ ಮಾಡಬಾರದು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಹೇಳಿದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಜಿಲ್ಲಾ ಘಟಕ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಅರಿವು ರಥಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.

‘ದಿನ ನಿತ್ಯದ ಜೀವನ ಶೈಲಿಯಲ್ಲಿ ಹಲವಾರು ರೀತಿಯ ತೊಂದರೆಗಳು ಎದುರಾಗುತ್ತವೆ. ಅವುಗಳ ವಿರುದ್ಧ ನಾವು ಹೋರಾಡಿ ಜಯಿಸಬೇಕಿರುತ್ತದೆ. ಆದರೆ, ಹಲವಾರು ಜನರು ಮೂಡನಂಬಿಕೆ, ಅನಕ್ಷರತೆಯಿಂದ ಮಾನಸಿಕವಾಗಿ ತೊಂದರೆಗೀಡಾಗುತ್ತಿದ್ದಾರೆ’ ಎಂದು ತಿಳಿಸಿದರು. 

‘ಕೊರೊನಾದಂತಹ ಮಹಾಮಾರಿಯಿಂದ ಕಳೆದ 7 ತಿಂಗಳಿನಿಂದ ಹಲವಾರು ಜನರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಆದ್ದರಿಂದ ಅಂತಹವರಿಗೆ ಈ ಕಾರ್ಯಕ್ರಮ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಬೇಕು. ಆ ಮೂಲಕ ಅವರಲ್ಲಿ ಸದೃಢ ಮನೋಭಾವನೆಯನ್ನು ಬೆಳೆಸುವಂತಹ ಕರ್ತವ್ಯ ನಮ್ಮದಾಗಿದೆ’ ಎಂದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಮಾತನಾಡಿ, ‘ಮಾನಸಿಕ ಕಾಯಿಲೆಗೆ ಅತೀ ಹೆಚ್ಚಾಗಿ ಅನಕ್ಷರಸ್ಥರು, ಬಡವರು ಹಾಗೂ ಮೂಡನಂಬಿಕೆಗಳನ್ನು ಪಾಲಿಸುವವರೇ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಮಾನಸಿಕ ಒತ್ತಡದಿಂದ ಆ ವ್ಯಕ್ತಿಗಳು ಹುಚ್ಚರಾಗುತ್ತಿದ್ದಾರೆ. ಮನೋವೈದ್ಯರು ಅಂತಹವರನ್ನು ಗುರುತಿಸಿ ಸಮಾಲೋಚನೆ ನಡೆಸಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಮಾನಸಿಕ ತಜ್ಞ ಕಿಶೋರ್ ಮಾತನಾಡಿ, ‘ಮಾನಸಿಕ ಖಿನ್ನತೆ, ಮಾನಸಿಕ ಅಸಮತೋಲನ ಉಂಟು ಮಾಡಿ ಮೈಕೈನೋವು, ತಲೆನೋವು, ಸುಸ್ತು, ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತದೆ. ಈ ಬಗ್ಗೆ ಜನಸಾಮಾನ್ಯರಿಗೆ ಅರಿವು ಇರುವುದಿಲ್ಲ. ಇಂತಹ ಸಮಸ್ಯೆಗೆ ಗುರಿಯಾದವರಿಗೆ ಆತ್ಮಸಮಾಲೋಚನೆ ಹೆಚ್ಚು ಪರಿಣಾಮಕಾರಿಯಾಗಿ ಸಹಾಯಮಾಡುತ್ತದೆ’ ಎಂದು ತಿಳಿಸಿದರು.

‘ಮಾನಸಿಕ ಒತ್ತಡಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆಯನ್ನು ನೀಡಿದರೆ ಖಂಡಿತ ಗುಣಪಡಿಸಬಹುದು. ಈ ಸಮಸ್ಯೆಗಳನ್ನು ಹೋಗಲಾಡಿಸಲು ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಡಿದೆ. ಈ ಬಾರಿ ಎಲ್ಲರಿಗೂ ‘ಮಾನಸಿಕ ಆರೋಗ್ಯ: ಹೆಚ್ಚಿನ ಹೂಡಿಕೆ-ಚಿಕಿತ್ಸೆಗೆ ಹೆಚ್ಚಿನ ಅವಕಾಶ’ ಎಂಬ ಘೋಷವಾಕ್ಯದ ಅಡಿಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ’ ಎಂದರು.

ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ನಟರಾಜ್, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ (ವಿಶೇಷ ನ್ಯಾಯಾಲಯ) ಬಿ.ಸಿ. ಭಾನುಮತಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ಎನ್.ರೂಪಾ, ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್, ವಕೀಲರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಮಹೇಶ್, ಮನೋವೈದ್ಯ ನವೀನ್ ಉಪಸ್ಥಿತರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು