ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ| ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಎಳ್ಳುನೀರು

ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗುಡಿಬಂಡೆಯ‌ಲ್ಲಿ ಬೀಗ; ಉಳಿದ ಕಡೆಗಳಲ್ಲಿ ಕಾಟಾಚಾರದ ನಡಿಗೆ
Last Updated 13 ಮಾರ್ಚ್ 2023, 4:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಡವರು, ಕೂಲಿ ಕಾರ್ಮಿಕರು, ಹಮಾಲಿಗಳು, ನಿರ್ಗತಿಕರು, ಅಸಂಘಟಿತ ವಲಯದ ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳ ಹಸಿವು ನೀಗಿಸಲು ಆರಂಭವಾದ ಇಂದಿರಾ ಕ್ಯಾಂಟೀನ್‌ಗಳಿಗೆ ಜಿಲ್ಲೆಯಲ್ಲಿ ಎಳ್ಳು ನೀರು ಬಿಡುವ ಹಂತ ತಲುಪಿವೆ.

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ, ರೇಷ್ಮೆನಗರಿ ಶಿಡ್ಲಘಟ್ಟ ಹಾಗೂ ಗುಡಿಬಂಡೆಯಲ್ಲಿ ಕ್ಯಾಂಟೀನ್‌ಗಳು ಮುಚ್ಚಿವೆ. ಚಿಂತಾಮಣಿ,
ಗೌರಿಬಿದನೂರಿನಲ್ಲಿ ಕುಂಟುತ್ತ ಸಾಗುತ್ತಿವೆ. ಬಾಗೇಪಲ್ಲಿಯಲ್ಲಿ ಇಂದಿಗೂ ಆರಂಭವೇ ಆಗಿಲ್ಲ. ಈಗ ನಡೆಯುತ್ತಿರುವ ಕಡೆಗಳಲ್ಲಿಯೂ ಆಗೊಮ್ಮೆ ಈಗೊಮ್ಮೆ ವಾರಗಟ್ಟಲೆ ಬೀಗ ಹಾಕಲಾಗುತ್ತಿದೆ.

ಹಸಿವಿನಿಂದ ಯಾರೂ ಬಳಲಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ 2017–18ರಲ್ಲಿ ಯೋಜನೆ
ಜಾರಿಗೊಳಿಸಿತ್ತು. ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಾಹಾರಕ್ಕೆ ₹5, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹10 ನಿಗದಿಗೊಳಿಸಲಾಗಿತ್ತು. ‌

ಚಿಕ್ಕಬಳ್ಳಾಪುರ ಎಪಿಎಂಸಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಬೀಗ ಹಾಕಲಾಗಿದೆ. ಎಪಿಎಂಸಿಯಲ್ಲಿ ಹಮಾಲಿಗಳು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಅಪಾರ ಜನದಟ್ಟಣೆ ಇರುತ್ತದೆ. ಇಂತಹ ಕಡೆಗಳಲ್ಲಿ ಅಗತ್ಯವಾಗಿದ್ದ ಇಂದಿರಾ ಕ್ಯಾಂಟೀನ್‌ಗಳನ್ನೇ ಮುಚ್ಚಲಾಗಿದೆ.

ಸರ್ಕಾರ ಸಮರ್ಪಕವಾಗಿ ಬಿಲ್‌ಗಳನ್ನು ‌ನೀಡುತ್ತಿಲ್ಲ. ಗುತ್ತಿಗೆ ಪಡೆದವರು ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸಕಾಲಕ್ಕೆ ವೇತನ ಸಹ ನೀಡುತ್ತಿಲ್ಲ. ಬಿಲ್‌ಗಳು ಬಾರದ ಹಿನ್ನೆಲೆಯಲ್ಲಿ ಬಾಗಿಲು ಹಾಕಲಾಗಿದೆ ಎನ್ನುತ್ತಾರೆ ಸಿಬ್ಬಂದಿ.

ವಿದ್ಯುತ್ ಬಿಲ್ ಬಾಕಿ, ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡದಿರುವುದು, ಸಮರ್ಪಕವಾಗಿ ಆಹಾರ ಪದಾರ್ಥಗಳು ಪೂರೈಕೆ ಇಲ್ಲದಿರುವುದು ಹೀಗೆ ನಾನಾ ಕಾರಣದಿಂದ ಕ್ಯಾಂಟೀನ್‌ಗಳು ಮುಚ್ಚಿವೆ. ಮುಚ್ಚುತ್ತಲೂ ಇವೆ.

ಕೊರೊನಾ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಬಡವರ ಕಾಮಧೇನುವಾಗಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಭಿಕ್ಷುಕರು, ಹೊರರಾಜ್ಯಗಳ ಕೂಲಿ ಕಾರ್ಮಿಕರು, ವಾಹನ ಚಾಲಕರ ಹಸಿವು ನೀಗಿಸಿತ್ತು. ಬೇರೆ ಎಲ್ಲಿಯೂ ಊಟ ಸಿಗದೆ ಹಸಿವಿನಿಂದ ತತ್ತರಿಸುತ್ತಿದ್ದ ಸಂದರ್ಭದಲ್ಲಿ ಊಟ, ತಿಂಡಿ ದೊರೆಯುತ್ತಿತ್ತು.

ಹೀಗೆ ಸರ್ಕಾರದ ಅಸಡ್ಡೆಯ ಕಾರಣದಿಂದ ಬಡವರ ಪರವಾಗಿದ್ದ ಯೋಜನೆಯೊಂದು ಪೂರ್ಣವಾಗಿ ಹಳ್ಳ ಹಿಡಿಯುತ್ತಿದೆ.

ಇಂದಿಗೂ ಆರಂಭವೇ ಇಲ್ಲ

ಬಾಗೇಪಲ್ಲಿ: ಬಾಗೇಪಲ್ಲಿಯಲ್ಲಿ ಸ್ಥಳದ ‌ಗೊಂದಲದ ಕಾರಣ ಇಂದಿರಾ ಕ್ಯಾಂಟೀನ್ ಇಂದಿಗೂ ಆರಂಭವಾಗಿಯೇ ಇಲ್ಲ. ಪಟ್ಟಣದ ಸಂತೇಮೈದಾನದಲ್ಲಿ ಕ್ಯಾಂಟೀನ್ ನಿರ್ಮಾಣ ಹಂತದಲ್ಲಿ ಇತ್ತು. ಪಕ್ಕದಲ್ಲಿಯೇ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿದೆ. ಆದ್ದರಿಂದ ಇಲ್ಲಿ ಕ್ಯಾಂಟೀನ್ ಬೇಡ ಎನ್ನುವ ಅಭಿಪ್ರಾಯ ಕೇಳಿ ಬಂದಿತು.

ಡಾ.ಎಚ್.ಎನ್.ವೃತ್ತದಲ್ಲಿ ಜನರಿಗೆ ಹೋಗಿ ಬರಲು ತೊಂದರೆ ಆಗುತ್ತದೆ ಎಂದು ಕೃಷಿ ಕೂಲಿಕಾರ್ಮಿಕರ ಸಂಘಟನೆಗಳು, ಸಿಪಿಎಂ ಪಕ್ಷದ ಮುಖಂಡರು ಪ್ರತಿಭಟಿಸಿದ್ದರು. ತಾಲ್ಲೂಕು ಪಂಚಾಯಿತಿ ಆವರಣದ ಖಾಲಿ ಜಾಗದಲ್ಲಿ ನಿರ್ಮಾಣಕ್ಕೆ ಒತ್ತಾಯಿಸಿದ್ದರು.

ಆದರೆ ತಾಲ್ಲೂಕು ಪಂಚಾಯಿತಿ ಆವರಣದ ಜಾಗದಲ್ಲಿ ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕು ಎನ್ನುವ ಒತ್ತಾಯ ದಲಿತ ಸಂಘಟನೆಯದ್ದಾಗಿತ್ತು. ತಾಲ್ಲೂಕು ಕಚೇರಿ ಪಕ್ಕದ ಅಂಬೇಡ್ಕರ್ ಪುತ್ಥಳಿಯ ಸ್ಥಳದಲ್ಲಿ ಭವನ ಮಾಡಬೇಕು ಎಂದು ಮತ್ತೊಂದು ದಲಿತ ಸಂಘಟನೆ ಒತ್ತಾಯಿಸಿತ್ತು. ಸಂಘಟನೆಗಳ ನಡುವೆ ಸಮನ್ವಯದ ಕೊರತೆಯಿಂದ ಅಂಬೇಡ್ಕರ್ ಭವನವೂ ನಿರ್ಮಾಣ ಆಗಿಲ್ಲ. ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಇಂದಿರಾ ಕ್ಯಾಂಟೀನೂ ಇಲ್ಲ.

ಇತ್ತ ಸಂತೇ ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕ್ಯಾಂಟೀನ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಿಮೆಂಟ್ ಕಲ್ಲುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಸೂಕ್ತ ನಿರ್ವಹಣೆ ಕೊರತೆಯಿಂದ ಕಟ್ಟಡಕ್ಕೆ ಬಳಕೆಗೆ ತಂದ ಗಾಜುಗಳು ಪುಡಿಯಾಗಿವೆ. ಸುತ್ತಲೂ ಮುಳ್ಳು ಹಾಗೂ ಕಳೆ ಗಿಡಗಳು ಬೆಳೆದಿವೆ.

ತೆವಳುತ್ತಿದೆ ಕ್ಯಾಂಟೀನ್

ಗೌರಿಬಿದನೂರು: ‌ನಗರದ ಇಂದಿರಾ ಕ್ಯಾಂಟೀನ್ ಇತ್ತೀಚಿನ ‌ಕೆಲವು ದಿನಗಳಿಂದ ಸ್ಥಗಿತಗೊಂಡಿತ್ತು. ಮತ್ತೆ ಇದೀಗ ಆರಂಭವಾಗಿದೆ. ನೆಪ ಮಾತ್ರಕ್ಕೆ ನಾಗರಿಕರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆ ನೀಡುತ್ತಿದ್ದಾರೆ. ಇಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ನಿತ್ಯ ಬೆಳಿಗ್ಗೆ 50 ಮಂದಿಗೆ ತಿಂಡಿ ಹಾಗೂ ಮಧ್ಯಾಹ್ನ 50 ಮಂದಿಗೆ ಊಟ ನೀಡುತ್ತಿದ್ದೇವೆ. ಗುತ್ತಿಗೆದಾರರು ಅಗತ್ಯ ಆಹಾರ ಸಾಮಗ್ರಿಗಳನ್ನು ಸಕಾಲದಲ್ಲಿ ನೀಡುತ್ತಿಲ್ಲ. ಜತೆಗೆ ನಗರದಲ್ಲಿ ಇಬ್ಬರು ಸಮಾಜ ಸೇವಕರು ಮಧ್ಯಾಹ್ನದ ಊಟವನ್ನು ಉಚಿತವಾಗಿ ನೀಡುತ್ತಿದ್ದಾರೆ. ಜನರು ಎಲ್ಲರೂ ಅತ್ತ ಮುಗಿ ಬೀಳುತ್ತಿದ್ದಾರೆ ಎನ್ನುತ್ತಾರೆ ಕ್ಯಾಂಟೀನ್ ವ್ಯವಸ್ಥಾಪಕ ಬಾಬು.

ರೇಷ್ಮೆ ನಗರದಲ್ಲಿಯೂ ಬೀಗ

ಶಿಡ್ಲಘಟ್ಟ: ನಗರದ ಹೊರವಲಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದಾಗ ಜನರಿಂದ ಅಪಸ್ವರ ಕೇಳಿ ಬಂದಿತ್ತು. ಊರಿನ ಹೊರಗೆ ಕ್ಯಾಂಟೀನ್ ಮಾಡುವ ಬದಲಿಗೆ ಊರ ಮಧ್ಯದಲ್ಲಿ, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಾಡಿ ಎಂದಿದ್ದರು. ಆದರೆ, ಯಾರ ಮಾತಿಗೂ ಕಿವಿಗೊಡದೆ ಚಿಕ್ಕಬಳ್ಳಾಪುರ ರಸ್ತೆಯ ರೇಷ್ಮೆ ವಿಸ್ತರಣಾಧಿಕಾರಿ ಕಚೇರಿ ಪಕ್ಕದಲ್ಲಿ ತೆರೆದಿದ್ದ ‌ಕ್ಯಾಂಟೀನ್‌ಗೆ ಇದೀಗ ಬೀಗ ಜಡಿಯಲಾಗಿದೆ.

ಈ ಹಿಂದೆ ಟೆಂಡರ್ ಪಡೆದಿದ್ದವರು, ಸರ್ಕಾರದಿಂದ ಸಮರ್ಪಕವಾಗಿ ಬಿಲ್ ಹಣ ಸಿಗದಿದ್ದರಿಂದ ಕೆಲಸಗಾರರಿಗೆ ಸಂಬಳ ಕೊಡದೆ, ಗುಣಮಟ್ಟ ಕಾಯ್ದುಕೊಳ್ಳಲಾಗದೆ ಬೀಗ ಜಡಿದಿದ್ದರು. ಇದೀಗ ಒಂದು ತಿಂಗಳ ಹಿಂದಷ್ಟೇ ಮತ್ತೊಬ್ಬರು ಟೆಂಡರ್ ಪಡೆದಿದ್ದಾರೆ. ಅಲ್ಲಿ ಕೆಲಸಕ್ಕೆ ಕುಟುಂಬವೊಂದನ್ನು ಇರಿಸಿದ್ದದ್ದರು. ಅವರಲ್ಲಿ ಒಬ್ಬರು ಮೃತಪಟ್ಟ ಕಾರಣದಿಂದ ಬೀಗ ಹಾಕಲಾಗಿದೆ.

ಚಿಂತಾಮಣಿ: ಬಡವರ ತುತ್ತಿಗೆ ಕನ್ನ

ಚಿಂತಾಮಣಿ: ನಗರದ ಎಪಿಎಂಸಿ ಆವರಣದಲ್ಲಿ ತೆರೆದಿದ್ದ ಇಂದಿರಾ ಕ್ಯಾಂಟೀನ್ ಬಡವರ ಪಾಲಿಗೆ ಅಕ್ಷಯ ಪಾತ್ರೆಯಾಗಿತ್ತು. ಕಳೆದ ಒಂದು ವರ್ಷದಿಂದ ನೆಪ ಮಾತ್ರಕ್ಕೆ ತೆರೆಯಲಾಗುತ್ತಿದೆ. ಇತ್ತೀಚೆಗೆ ಮುಚ್ಚುವ ಹಂತಕ್ಕೆ ತಲುಪಿದೆ.

2019ರ ಫೆಬ್ರುವರಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಉತ್ತಮವಾಗಿ ನಡೆಯುತ್ತಿತ್ತು. ಎಪಿಎಂಸಿ ಆವರಣದಲ್ಲಿ ಕ್ಯಾಂಟೀನ್ ತೆರೆದಿರುವುದರಿಂದ ಮಾರುಕಟ್ಟೆಗೆ ಬರುವ ರೈತರು, ಕೂಲಿ ಕಾರ್ಮಿಕರು, ಹಮಾಲಿಗಳಿಗೆ ಅನುಕೂಲವಾಗಿತ್ತು.

ನಗರದ ಕ್ಯಾಂಟೀನ್ ನಲ್ಲಿ ಪ್ರತಿನಿತ್ಯ ಗರಿಷ್ಠ 650 ಜನರಿಗೆ ಅವಕಾಶವಿದೆ. ವಾರದ ಸಂತೆ ಹಾಗೂ ವಿವಿಧ ಆಹಾರ ಪದಾರ್ಥಗಳ ಹರಾಜು ನಡೆಯುವ ದಿನಗಳಲ್ಲಿ ಗರಿಷ್ಠ ಜನರು ಊಟ ಮಾಡುತ್ತಾರೆ. ಉಳಿದ ದಿನಗಳಲ್ಲಿ ಬೆಳಿಗ್ಗೆ ಸುಮಾರು 300, ಮಧ್ಯಾಹ್ನ 100ರಿಂದ 150, ರಾತ್ರಿ 50 ಊಟ ಜನರು ಊಟ ಮಾಡುತ್ತಾರೆ ಎಂದು ಸಿಬ್ಬಂದಿ ಹೇಳುತ್ತಾರೆ.

ಗುಣಮಟ್ಟದ ಹಾಗೂ ರುಚಿಕರ ಆಹಾರ ದೊರಕದ ಕಾರಣ ಬಹುತೇಕರು ಇಂದಿರಾ ಕ್ಯಾಂಟಿನ್‌ನತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕ್ಯಾಂಟೀನ್‌ನಲ್ಲಿ ಇಬ್ಬರು ಅಡಿಗೆಯವರು ಇದ್ದಾರೆ. ಯಾವುದೇ ರೀತಿಯ ಆಹಾರ ಪದಾರ್ಥಗಳ ಸಂಗ್ರಹವೇ ಇಲ್ಲ.

ನಿತ್ಯ ಅಂಗಡಿಯಲ್ಲಿ ಸಾಮಗ್ರಿಗಳನ್ನು ತಂದು ಅಡುಗೆ ಮಾಡಬೇಕಿದೆ. ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯ ಕುರಿತು ಇಲ್ಲಿನ ಅಡುಗೆ ಸಿಬ್ಬಂದಿಗೆ ಮಾಹಿತಿ ಇಲ್ಲ.

ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಇಲ್ಲ. ಗುತ್ತಿಗೆ ಪಡೆದಿರುವ ಸಂಸ್ಥೆಗೆ ಕಳೆದ ಆಗಸ್ಟ್ ತಿಂಗಳಿನಿಂದಲೂ ಬಾಕಿ ಪಾವತಿ ಆಗಿಲ್ಲ. ಕ್ಯಾಂಟೀನ್‌ನಲ್ಲಿ ರುಚಿ, ಶುಚಿ ಆಹಾರ ದೊರಕುತ್ತಿಲ್ಲ. ಪರಿಣಾಮ ಸಾರ್ವಜನಿಕರು ಅತ್ತ ಸುಳಿಯುತ್ತಿಲ್ಲ. ಇದು ಪರೋಕ್ಷವಾಗಿ ಗುತ್ತಿಗೆದಾರರಿಗೆ ಹಣ ಮಾಡುವ ಅವಕಾಶವಾಗಿದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ರಮೇಶ್.

‌‌ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗುತ್ತಿಲ್ಲ: ನವಫೈಯಾಜ್ ಎಂಬ ಕಂಪನಿ ಜಿಲ್ಲೆಯ ಎಲ್ಲ ಕ್ಯಾಂಟೀನುಗಳನ್ನು ಗುತ್ತಿಗೆ ಪಡೆದಿದೆ. ದಿಲೀಪ್ ಎಂಬುವವರು ಅವರಿಂದ ಉಪ ಗುತ್ತಿಗೆಯಾಗಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಸರ್ಕಾರದಿಂದ ಕಾಲ ಕಾಲಕ್ಕೆ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಲಕ್ಷಾಂತರ ರೂಪಾಯಿ ಬಾಕಿ ಬರಬೇಕಾಗಿದೆ. ಕೆಲಸಗಾರರ ವೇತನ, ಆಹಾರ ಪದಾರ್ಥಗಳ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ ಎಂಬುದು ಗುತ್ತಿಗೆದಾರರ ಅಳಲಾಗಿದೆ.

ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಯಾರು ಇಂದಿರಾ ಕ್ಯಾಂಟೀನ್ ಬಗ್ಗೆ ಅಷ್ಟಾಗಿ ಗಮನಹರಿಸುವುದಿಲ್ಲ. ಇದನ್ನೇ ಅವಕಾಶವಾಗಿ ಬಳಸಿಕೊಳ್ಳುವ ಗುತ್ತಿಗೆದಾರರು ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆಯುತ್ತಾರೆ. ಅನುದಾನವಿಲ್ಲ, ನಾವು ಕೈಯಿಂದ ಖರ್ಚು ಮಾಡುತ್ತಿದ್ದೇವೆ ಎಂದು ಕೇವಲ ಅನ್ನ ಸಾಂಬಾರ್ ಮಾತ್ರ ಕೊಡುತ್ತಾರೆ. ಹೀಗಾಗಿ ಕ್ಯಾಂಟೀನ್ ನಲ್ಲಿ ಗರಿಷ್ಠ ಮಧ್ಯಾಹ್ನ 20, ರಾತ್ರಿ 10 ಜನ ಊಟ ಮಾಡಬಹುದು. ಬಿಲ್ಲುಗಳಲ್ಲಿ ಮಧ್ಯಾಹ್ನ 300-400, ರಾತ್ರಿ 100-150 ಜನರು ಊಟ ಮಾಡಿದಂತೆ ತೋರಿಸುತ್ತಾರೆ ಎಂದು ಹಮಾಲಿ ಮುಖಂಡರು ಆರೋಪಿಸುತ್ತಾರೆ.

ಗುಡಿಬಂಡೆಯಲ್ಲೂ ಬಂದ್

ಗುಡಿಬಂಡೆ: ಗುಡಿಬಂಡೆಯಲ್ಲಿಯೂ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿದೆ. ಪತ್ರಿಕೆಗಳಲ್ಲಿ ಸುದ್ದಿಗಳಾದಾಗ ಅಥವಾ ಯಾರಾದರೂ ಪ್ರಶ್ನಿಸಿದರೆ ಕೆಲವು ದಿನ ಬಾಗಿಲು ತೆರೆದು ಮತ್ತೆ ಮುಚ್ಚಲಾಗುತ್ತದೆ.

ತಾಲ್ಲೂಕು ಕಚೇರಿ ಆವರಣದಲ್ಲಿ ಕ್ಯಾಂಟೀನ್ ಇದೆ. ಬಸ್‌ ನಿಲ್ದಾಣಕ್ಕೂ ಹತ್ತಿರವಾಗಿದ್ದರಿಂದ ಸರ್ಕಾರಿ ಕಚೇರಿಗಳಿಗೆ ಬರುವವರು, ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳು, ಸಂತೆ ಮತ್ತು ತರಕಾರಿ ಮಾರುಕಟ್ಟೆಗೆ ಬರುತ್ತಿದ್ದ ರೈತರು, ಆಟೊ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ಬಡ ಮಧ್ಯಮ ವರ್ಗದ ಜನರು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಈ ಕ್ಯಾಂಟೀನ್‌ ಬಾಗಿಲು ಮುಚ್ಚಿದೆ.

ಬಡವರಿಗೆ ದೊರೆಯದ ಯೋಜನೆ

ಬಡವರಿಗೆ ಕಡಿಮೆ ದರದಲ್ಲಿ ತಿಂಡಿ, ಊಟ ಸಿಗಲು ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆ ಮಾಡಿತ್ತು. ತಾಲ್ಲೂಕು ಆಡಳಿತದ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಪಟ್ಟಣದಲ್ಲಿ ಸಂತೆ ಮೈದಾನದಲ್ಲಿ ಅಥವಾ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಮಾಡಿಲ್ಲ. ಜನಸಾಮಾನ್ಯರಿಗೆ, ಬಡವರಿಗೆ ಸಿಗಬೇಕಾದ ಯೋಜನೆ ಜಾರಿಯಾಗಿಲ್ಲ.

ದೇವಿಕುಂಟೆ ಗಂಗಪ್ಪ, ನಾಗರಿಕ, ಬಾಗೇಪಲ್ಲಿ

ಸಂಬಂಧಿಸಿದವರು ಕ್ರಮವಹಿಸಲಿ

ಗುತ್ತಿಗೆದಾರರು ಮತ್ತು ಅಧಿಕಾರಿಗಳು ಎಚ್ಚೆತ್ತು ಕೂಡಲೇ ಕ್ಯಾಂಟೀನ್‌ ಪುನರಾರಂಭಿಸಬೇಕು. ನಿತ್ಯವೂ ನಡೆಯಬೇಕು. ಈ ಬಗ್ಗೆ ಸಂಬಂಧಿಸಿದವರು ಕ್ರಮವಹಿಸಬೇಕು.

ಜಿ.ವಿ.ಗಂಗಪ್ಪ, ದಸಂಸ ಮುಖಂಡ, ಗುಡಿಬಂಡೆ

ಮೇಲ್ವಿಚಾರಣೆ ನಮ್ಮ ಕರ್ತವ್ಯ

ಜಿಲ್ಲಾಧಿಕಾರಿ ಟೆಂಡರ್ ಮೂಲಕ ಗುತ್ತಿಗೆದಾರರನ್ನು ನೇಮಿಸುತ್ತಾರೆ. ಅವರಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗುತ್ತದೆ. ಕ್ಯಾಂಟೀನ್‌ನಲ್ಲಿ ದೊರೆಯುವ ಸೌಲಭ್ಯಗಳು, ಆಹಾರದ ಗುಣಮಟ್ಟದ ಮೇಲ್ವಿಚಾರಣೆ ಮಾತ್ರ ನಗರಸಭೆಯ ಕರ್ತವ್ಯವಾಗಿದೆ.

ಆರತಿ. ಆರೋಗ್ಯಾಧಿಕಾರಿ, ನಗರಸಭೆ, ಚಿಂತಾಮಣಿ

ಹದಗೆಟ್ಟ ಆಹಾರದ ಗುಣಮಟ್ಟ

ಆರಂಭದಲ್ಲಿ ಚೆನ್ನಾಗಿ ನಡೆಯುತ್ತಿತ್ತು. ಊಟ ಮತ್ತು ತಿಂಡಿಯ ಗುಣಮಟ್ಟ ತೀರ ಹದಗೆಟ್ಟಿರುವುದರಿಂದ ಇತ್ತೀಚೆಗೆ ಯಾರು ಕ್ಯಾಂಟೀನ್ ಕಡೆಗೆ ಸುಳಿಯುವುದಿಲ್ಲ. ನಮಗೆ ಹಣ ನೀಡುತ್ತಿಲ್ಲ ಎಂದು ಕ್ಯಾಂಟೀನ್‌ನವರು ಹೇಳುತ್ತಾರೆ. ಬಡವರಿಗೆ ತುಂಬಾ ತೊಂದರೆಯಾಗಿದೆ.

ಮುನಿಯಪ್ಪ, ರಾಮಾಂಜಿನಪ್ಪ, ಕೂಲಿ ಕಾರ್ಮಿಕರು, ಚಿಂತಾಮಣಿ

(ಡಿ.ಎಂ.ಕುರ್ಕೆ ಪ್ರಶಾಂತ್, ಪಿ.ಎಸ್.ರಾಜೇಶ್, ಎಂ.ರಾಮಕೃಷ್ಣಪ್ಪ, ಜೆ. ವೆಂಕಟರಾಯಪ್ಪ ಡಿ.ಜಿ.ಮಲ್ಲಿಕಾರ್ಜುನ್, ಎ.ಎಸ್.ಜಗನ್ನಾಥ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT