ಶನಿವಾರ, ನವೆಂಬರ್ 28, 2020
19 °C
ಬಾಗೇಪಲ್ಲಿ: ಅವೈಜ್ಞಾನಿಕ ಒಳಚರಂಡಿ ನಿರ್ಮಾಣ

ಬಾಗೇಪಲ್ಲಿ: ಅವೈಜ್ಞಾನಿಕ ಕಾಮಗಾರಿ, ರಸ್ತೆಯಲ್ಲೇ ಹರಿಯುವ ಚರಂಡಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಕೊತ್ತಪಲ್ಲಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಾಣದಿಂದ 10 ದಿನಗಳಿಂದ ಚರಂಡಿ ಮಲಮೂತ್ರದ ನೀರು ರಸ್ತೆಯೆಲ್ಲೇ ಹರಿಯುತ್ತಿದೆ. ಮತ್ತೊಂದಡೆ ಕೊತ್ತಪಲ್ಲಿ ಗ್ರಾಮದಲ್ಲಿ ಸಮರ್ಪಕವಾದ ಚರಂಡಿಗಳ ವ್ಯವಸ್ಥೆ ಇಲ್ಲದೆ, ಚರಂಡಿ ನೀರು ಮನೆಗಳ ಮುಂದೆ ಹಾಗೂ ರಸ್ತೆಗಳ ಮೇಲೆ ಹರಿಯುತ್ತಿದೆ.

‘ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಕೊರೊನಾ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಿರ್ಮಾಣವಾಗಿದ್ದರೂ, ಸಂಬಂಧಪಟ್ಟ ಪುರಸಭೆ ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ನಿವಾಸಿಗಳು ಆರೋಪಿಸುತ್ತಾರೆ.

ಕೊತ್ತಪಲ್ಲಿ ಗ್ರಾಮದ ಪಕ್ಕದ ಕೆಲ ಮನೆಗಳು ಪುರಸಭಾ ವ್ಯಾಪ್ತಿಗೆ ಸೇರಿಕೊಂಡಿದೆ. ಉಳಿದಂತೆ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಆದರೆ ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿಸುವ ಮಾರ್ಗದಲ್ಲಿ ಮದೀನಾ ಮಸೀದಿಯ ಸ್ವಲ್ಪ ದೂರದಲ್ಲಿ, ಒಳಚರಂಡಿ ವ್ಯವಸ್ಥೆ ಹಾಗೂ ಗುಂಡಿಗಳನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. ನೀರು ಸರಾಗವಾಗಿ ಹರಿಯುವಂತೆ ಮಾಡಿಲ್ಲ. ಕಳೆದ 10 ದಿನಗಳಿಂದ ಗುಂಡಿಗಳಲ್ಲಿ ಚರಂಡಿ ನೀರು ತುಂಬಿ ರಸ್ತೆಯೆಲ್ಲಾ ಹಾಗೂ ಕಾಲುವೆ ಮಾದರಿಯಲ್ಲಿ ಹರಿಯುತ್ತಿದೆ. ಚರಂಡಿ ನೀರಿನ ಜೊತೆ ಮಲಮೂತ್ರದ ನೀರು ರಸ್ತೆಯಲ್ಲಿನ ಗುಂಡಿಗಳಲ್ಲಿ ಶೇಖರಣೆ ಆಗಿದೆ.

ರಸ್ತೆಯ ಮೇಲಿನ ಕೊಳಕು ನೀರಿನ ಮೇಲೆ ಪಟ್ಟಣದ ನಿವಾಸಿಗಳು ಹಾಗೂ ಕೊತ್ತಪಲ್ಲಿ ಗ್ರಾಮಸ್ಥರು ನಡೆಯುತ್ತಿದ್ದಾರೆ. ಚರಂಡಿ, ಮಲಮೂತ್ರದ ನೀರು ದುರ್ನಾತ ಬೀರುತ್ತಿದೆ. ಇದರಿಂದ ಜನರು ಮೂಗು ಮುಚ್ಚಿಕೊಂಡು ನಡೆಯುತ್ತಿದ್ದಾರೆ. ಜನರು ಗಲೀಜು ನೀರನ್ನು ತುಳಿದುಕೊಂಡು ಸಂಚರಿಸುವಂತೆ ಆಗಿದೆ. ಇದೇ ರಸ್ತೆಯಲ್ಲಿ ಅಪ್ಪಯ್ಯ, ತಿರುಮಲ ಶುದ್ಧ ಕುಡಿಯುವ ನೀರಿನ ಘಟಕಗಳು ಇದೆ. ಪಟ್ಟಣದ ಜನರು ದ್ವಿಚಕ್ರ ವಾಹನಗಳಲ್ಲಿ ಶುದ್ಧ ನೀರು ತರಲು ಕ್ಯಾನುಗಳಲ್ಲಿ ತುಂಬಿಸಿಕೊಂಡು ಬರಲು ಸಂಚರಿಸುತ್ತಿದ್ದಾರೆ. ಕನಿಷ್ಠ ದ್ವಿಚಕ್ರ ವಾಹನಗಳು ಸಂಚರಿಸಲು ಆಗುತ್ತಿಲ್ಲ.

‘ಪಟ್ಟಣದಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಯೋಜನೆ ಮಾಡಿದ್ದಾರೆ. ಕಳಪೆ ಪೈಪುಗಳು, ಗುಂಡಿಗಳನ್ನು ಮಾಡಲಾಗಿದೆ. ಎತ್ತರದಿಂದ ನೀರು ಹರಿಸುವುದು ಬಿಟ್ಟು, ತಗ್ಗಿನಿಂದ ಎತ್ತರ ಪ್ರದೇಶಕ್ಕೆ ಸಂಪರ್ಕ ಕೊಟ್ಟರೇ ನೀರು ಹರಿಯುವುದೇ?’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

‘ಅಧಿಕಾರಿ ಹಾಗೂ ಎಂಜಿನಿಯರ್‌ಗಳ ದಿವ್ಯ ನಿರ್ಲಕ್ಷ್ಯವೇ ಆಗಿದೆ. 10 ದಿನಗಳಿಂದ ಒಳಚರಂಡಿ ಪೈಪು ಹೊಡೆದು ಚರಂಡಿ, ಮೂತ್ರ ನೀರು ರಸ್ತೆಗೆ ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ’ ಎಂದು ಸ್ಥಳೀಯ ನಿವಾಸಿ ಬಿ.ಎನ್.ರವಿಚಂದ್ರ ದೂರಿದರು.

‘ಕೊತ್ತಪಲ್ಲಿ ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ, ಚರಂಡಿ ನೀರು ರಸ್ತೆ ಹಾಗೂ ಮನೆಗಳ ಮುಂದೆ ಹರಿಯುತ್ತಿದೆ. ಗುಂಡಿಗಳಲ್ಲಿ ಶೇಖರಣೆ ಆಗಿದೆ. ಸೊಳ್ಳೆಗಳು ಅವಾಸ ಸ್ಥಾನವಾಗಿವೆ. ಪಟ್ಟಣದ ಸ್ವಚ್ಛತೆಗೆ ಪುರಸಭೆಗೆ ಸರ್ಕಾರದಿಂದ ಕೋಟ್ಯಂತರ ಹಣ ಅನುದಾನ ಬರುತ್ತದೆ. ಆದರೆ ಚರಂಡಿಗಳು ಇಲ್ಲದ ಕಡೆ ಚರಂಡಿಗಳನ್ನು ನಿರ್ಮಿಸಬೇಕಾದ ಪುರಸಭೆ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಶಾಮೀಲಾಗಿ, ಚರಂಡಿಗಳು ಇರುವ ಕಡೆಗಳಲ್ಲಿ ಚರಂಡಿಗಳನ್ನು ಮಾಡಿ ಸರ್ಕಾರದ ಲಕ್ಷಾಂತರ ಹಣ ದುರ್ಬಳಕೆ ಆಗುತ್ತಿದೆ’ ಎಂದು ನಿವಾಸಿಗಳು ಆರೋಪಿಸಿದ್ದಾರೆ.

‘ನಮ್ಮ ಖಾಲಿ ನಿವೇಶನದಲ್ಲಿ ಇದೀಗ ಮನೆ ಕಟ್ಟಬೇಕಾಗಿದೆ. ಚರಂಡಿಗಳು ಇಲ್ಲದಿರುವುದರಿಂದ ನಿವೇಶನದಲ್ಲಿ ಊರಿನ ಚರಂಡಿ ನೀರು ಶೇಖರಣೆ ಆಗಿದೆ. ಚರಂಡಿ ವ್ಯವಸ್ಥೆ ಮಾಡುವಂತೆ ಹಾಗೂ ಸಂಗ್ರಹಿಸಿದ ನೀರು ಸ್ವಚ್ಛಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಅಧಿಕಾರಿಗಳು ಚರಂಡಿ ವ್ಯವಸ್ಥೆ ಮಾಡಬೇಕು ಹಾಗೂ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು’ ಎಂದು ನಿವಾಸಿ ಸೋಮಶೇಖರ ರೆಡ್ಡಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು