ಚಿಕ್ಕಬಳ್ಳಾಪುರ: ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಟಿಪ್ಪು ಸುಲ್ತಾನ್ ಅವರನ್ನು ದೇಶದ್ರೋಹಿಯನ್ನಾಗಿ ಮಾಡಿದ್ದಾರೆ. ಅದೇ ಅಂದು ಬ್ರಿಟಿಷರ ಪರವಾಗಿದ್ದವರು ಇಂದು ಶಾಸಕ, ಸಂಸದರಾಗಿದ್ದಾರೆ ಎಂದು ಎಸ್‌ಎಫ್‌ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ಎಸ್‌ಎಫ್‌ಐ ರಾಜ್ಯದ ಮಟ್ಟದ 16ನೇ ಸಮ್ಮೇಳನದ ಎರಡನೇ ದಿನವಾದ ಶುಕ್ರವಾರದ ಅಧಿವೇಶನದ ಉದ್ಘಾಟಿಸಿ ಅವರು ಮಾತನಾಡಿದರು.
ಟಿಪ್ಪು ವಂಶಸ್ಥರು ಇಂದು ಆಟೊ ಮೂಲಕ ಜೀವನ ನಡೆಸುತ್ತಿದ್ದಾರೆ. ಆದರೆ ಪರ ಇದ್ದವರು ಜನಪ್ರತಿನಿಧಿಗಳಾಗಿದ್ದಾರೆ. ಇಂತಹದ್ದೇ ಅನೇಕ ಮಾದರಿಗಳು ನಮ್ಮಲ್ಲಿವೆ ಎಂದರು.
ಇಸ್ರೇಲ್ ನಡೆಸುತ್ತಿರುವ ಅಮಾನವೀಯ ದಾಳಿಯನ್ನು ನಮ್ಮ ದೇಶದ ರಾಜಕಾರಣ ಸಮರ್ಥಿಸಿಕೊಳ್ಳುತ್ತಿದೆ. ಸಂಭ್ರಮಿಸುತ್ತಿದೆ. ಪ್ಯಾಲೆಸ್ಟೇನ್ ಮೂಲನಿವಾಸಿಗಳನ್ನು ಅತಂತ್ರರನ್ನಾಗಿ ಮಾಡಲಾಗುತ್ತಿದೆ. ಅವರ ಅಸ್ತಿತ್ವವನ್ನು ಕಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವವರು ನಿಜ ಎಂದು ನಂಬುತ್ತಾರೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ಯಾವುದನ್ನೂ ಪ್ರಶ್ನೆ ಮಾಡದ ರೀತಿಯಲ್ಲಿ ಇದ್ದಾರೆ ಎಂದು ಹೇಳಿದರು.
ಬಂಡವಾಳಶಾಹಿಗಳು ಬಲಿಷ್ಠರಾಗುತ್ತಿದ್ದಾರೆ. ನಮ್ಮ ಸಮಯ ಮತ್ತು ಶ್ರಮವನ್ನು ಕದಿಯುತ್ತಿದ್ದಾರೆ. ಯುವ ಸಮುದಾಯವು ಸಾಮಾಜಿಕ ಮಾಧ್ಯಮಗಳಿಗೆ ಸಮಯಕೊಡುವುದಕ್ಕಿಂತ ವಿದ್ಯಾರ್ಥಿ ಚಳವಳಿಯನ್ನು ಬಲಗೊಳಿಸಿ ಎಂದು ಕಿವಿಮಾತು ಹೇಳಿದರು.
ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇಂದು ಎಡ ವಿದ್ಯಾರ್ಥಿ ಸಂಘಟನೆಗಳು ಬೆಳೆಯುತ್ತಿವೆ. ಅಂದರೆ ಜಗತ್ತಿಗೆ ಎಡಚಳವಳಿಗಳು ಬೇಕಿದೆ. ವಿದ್ಯಾರ್ಥಿ ಸಮೂಹಕ್ಕೆ ರಾಜಕೀಯ ಚಿಂತನೆ ಇಲ್ಲವಾಗಿದೆ. ನ್ಯಾಯ ಮತ್ತು ಸೂಕ್ಷ್ಮತೆ ಇಲ್ಲದ ರಾಜಕಾರಣಿಗಳ ಹಿಂಬಾಲಕರಾಗುತ್ತಿದ್ದಾರೆ. ಅವೈಜ್ಞಾನಿಕ ವಾದಗಳನ್ನು ವಿದ್ಯಾರ್ಥಿಗಳು ವಿರೋಧಿಸಬೇಕು ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಸರ್ದಾರ್ ಚಾಂದ್ ಪಾಷ ಮಾತನಾಡಿ, ಒಬ್ಬ ಶಿಕ್ಷಕ, ಕವಿ ಚಳವಳಿಯಿಂದ ಜನರ ನೋವಿನಿಂದ ಹುಟ್ಟುತ್ತಾನೆ. 1980ರಲ್ಲಿ ನಾನು ಪಿಯುಸಿ ಓದುವಾಗ ನನ್ನ ಗೆಳೆಯರು 40ರಿಂದ 50 ಕಿ.ಮೀ ನಡೆದು ಬರುತ್ತಿದ್ದರು. ಅವರಿಗಾಗಿ ನಾವು ಬಸ್ ತಡೆದು ಪ್ರತಿಭಟನೆ ಮಾಡಿದಾಗ ನಮಗೆ ₹ 15ಕ್ಕೆ ಬಸ್‌ಪಾಸ್ ನೀಡಿದರು. ಇದು ಸಾಧ್ಯವಾಗಿದ್ದು ವಿದ್ಯಾರ್ಥಿ ಚಳವಳಿಯಿಂದ. ಆದ್ದರಿಂದ ನಾವು ಗಟ್ಟಿಯಾಗಿ ಚಳವಳಿಗಳನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.
ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ್ ಮಾತನಾಡಿ, ‘ಉನ್ನತ ಶಿಕ್ಷಣವು ನಮ್ಮ ಸಾಂವಿಧಾನಿಕ ಹಕ್ಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟಗಳನ್ನು ರೂಪಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಎಸ್‌ಎಫ್‌ಐ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ್ ನಾರಾಯಣ್, ಸಮಿತಿ ಸದಸ್ಯರಾದ ಆದರ್ಶ ಎಂ.ಸಜ್ಜಿ, ಕಾರ್ಯದರ್ಶಿ ಭೀಮನಗೌಡ, ಸುಜಾತ, ರಮೇಶ್, ಗ್ಯಾನೇಶ ಕಡಗದ, ವಿಜಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.