ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿನ ಇಬ್ಬರು ಮುಖಂಡರ ನಡುವಿನ ತಿಕ್ಕಾಟದಿಂದ ಕೈ ಕಾರ್ಯಕರ್ತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದರೂ ಸ್ಥಳೀಯ ‘ಕೈ’ ಕಾರ್ಯಕರ್ತರಿಗೆ ಅಧಿಕಾರದ ಭಾಗ್ಯವಿಲ್ಲ!

ಇದಕ್ಕೆ ಮುಖ್ಯ ಕಾರಣ ಮುಖಂಡರಾದ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ನಡುವಿನ ಮುಸುಕಿನ ಗುದ್ದಾಟ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದೆ. ತಾವೂ ಸಹ ನಿಗಮ ಮಂಡಳಿಗಳಲ್ಲಿ, ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದ ನಾಮನಿರ್ದೇಶನ ಹುದ್ದೆಗಳಲ್ಲಿ ನೇಮಕ ಆಗಬಹುದು ಎನ್ನುವ ಆಸೆ ಹೊತ್ತಿರುವ ಸ್ಥಳೀಯ ಮುಖಂಡರ ಆಸೆ ಮಾತ್ರ ಈಡೇರಿಲ್ಲ.

ಯಾವ ಬಣವನ್ನು ವಿಶ್ವಾಸಕ್ಕೆ ಪಡೆಯಬೇಕು. ಯಾರ ಪ್ರಭಾವ ಜೋರಾಗಿದೆ ಎನ್ನುವುದೇ ಚರ್ಚೆಯಲ್ಲಿ ಇದೆ. ಈ ಇಬ್ಬರು ಕಾಂಗ್ರೆಸ್ ಮುಖಂಡರ ನಡುವಿನ ಹಗ್ಗ ಜಗ್ಗಾಟದಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮೂಲ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ.

ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಪಾಂಡವರು ಕೃಷ್ಣನನ್ನು, ಕೌರವರು ಯಾದವ ಸೈನ್ಯವನ್ನು ತಮ್ಮೊಂದಿಗೆ ಸೆಳೆದುಕೊಂಡಂತೆ ಶಿಡ್ಲಘಟ್ಟದ ಕಾಂಗ್ರೆಸ್ ಪರಿಸ್ಥಿತಿಯಿದೆ. ರಾಜೀವ್ ಗೌಡ ಅವರು ಕಾಂಗ್ರೆಸ್ ಭವನವನ್ನು ಹಾಗೂ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದರೆ, ಮಾಜಿ ಸಚಿವ ಹಾಗೂ ಹಿರಿಯ ನಾಯಕ ವಿ.ಮುನಿಯಪ್ಪ ಅವರು ಪುಟ್ಟು ಆಂಜಿನಪ್ಪ ಮೇಲೆ ಒಲವು ತೋರುತ್ತಿದ್ದಾರೆ. ಆರು ಬಾರಿ ಶಾಸಕರಾಗಿ 2 ಬಾರಿ ಸಚಿವರಾಗಿದ್ದ ಮುನಿಯಪ್ಪ ಅವರು ಈಗ ಸಕ್ರಿಯ ರಾಜಕೀಯದಲ್ಲಿ ಇಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಈ ಇಬ್ಬರು ನಾಯಕರನ್ನು ಸಂತೈಸುವ ಸವಾಲು ಇದೆ. ಈಚೆಗೆ ಹಲವು ಕಾಮಗಾರಿಗಳ ಉದ್ಘಾಟನೆಗೆ ಶಿಡ್ಲಘಟ್ಟಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರ ವರ್ತನೆಯನ್ನು ಪ್ರಸ್ತಾಪಿಸಿದ್ದರು. ಅದಕ್ಕಾಗಿ ಈಗ ಕಾರ್ಯಕ್ರಮಕ್ಕೆ ಯಾರನ್ನೂ ಕರೆದಿಲ್ಲ ಎಂದು ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಗೇ ಈ ಇಬ್ಬರ ಮುಖಂಡರ ನಡವಳಿಕೆ ಬೇಸರ ತರಿಸಿರುವಾಗ, ಇನ್ನು ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ವಿವರಿಸಲು ಸಾಧ್ಯವಾಗದಂತಿದೆ.

ಈ ಹಿಂದೆ ಎರಡೂ ಬಣಗಳು ಬೀದಿ ರಂಪಾಟ ಸಹ ನಡೆಸಿದ್ದವು. ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ನಡೆದ ಈ ಜಗಳ ಶಿಡ್ಲಘಟ್ಟ ಕಾಂಗ್ರೆಸ್ನ ಬೇಗುದಿಯನ್ನು ಬಹಿರಂಗಗೊಳಿಸಿತ್ತು.

ಪುಟ್ಟು ಆಂಜಿನಪ್ಪ ಈ ಹಿಂದಿನಿಂದಲೂ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದವರು. 2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದವರು. ಎರಡೂ ಬಾರಿಯೂ ಟಿಕೆಟ್ ಕೈ ತಪ್ಪಿತು. ಈ ಎರಡೂ ಚುನಾವಣೆಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರು. 2023ರಲ್ಲಿ ಜೆಡಿಎಸ್ನ ಬಿ.ಎನ್.ರವಿಕುಮಾರ್ ಅವರಿಗೆ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದರು.

ಪುಟ್ಟು ಆಂಜನಪ್ಪ ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದಾಗಲೂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಚುನಾವಣೆ ಮುಗಿದ ನಂತರ ಉಚ್ಚಾಟನೆ ಆದೇಶ ವಾಪಸ್ ಪಡೆಯಲಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸೋಲು ಅನುಭವಿಸಿರುವ ರಾಜೀವ್ ಗೌಡ, ತಮ್ಮ ಪತ್ನಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

ಕಾಂಗ್ರೆಸ್ ಪಾಳಯದಲ್ಲಿನ ಒಡಕು, ಭಿನ್ನಾಭಿಪ್ರಾಯ, ಹಿಡಿತಕ್ಕಾಗಿ ಪ್ರಯತ್ನದ ಕಾರಣದಿಂದಲೇ ನಗರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿ ಕೆಲ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಬೆಂಬಲಿಸಿದರು ಎನ್ನುವ ಮಾತುಗಳಿವೆ.

ಇಬ್ಬರೂ ಮುಖಂಡರ ಸ್ವಪ್ರತಿಷ್ಠೆಯು ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕ್ಕಿಂತ ಆಘಾತ ಮಾಡುತ್ತಿದೆ ಎನ್ನುತ್ತಾರೆ ಕಾರ್ಯಕರ್ತರು.

‘ಕೈ’ ಹಿಡಿಯುವರೇ ರವಿಕುಮಾರ್? ಮತ್ತೊಂದು ಕಡೆ ಶಿಡ್ಲಘಟ್ಟದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಅಂತೆ ಕಂತೆಗಳು ಸುದ್ದಿ ಕ್ಷೇತ್ರದಲ್ಲಿ ಹರಡಿದೆ. ರವಿಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಉತ್ತಮ ಸಂಬಂಧ ಸಹ ಹೊಂದಿದ್ದಾರೆ. ಜಾತಿ ಮತಬ್ಯಾಂಕ್ ಇತ್ಯಾದಿ ಲೆಕ್ಕಾಚಾರಗಳನ್ನು ನೋಡಿದರೂ ಕಾಂಗ್ರೆಸ್ಗೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಇಡುಗಂಟಿನ ಮತಗಳಿವೆ. ಇಬ್ಬರ ನಡುವಿನ ತಿಕ್ಕಾಟ ಮೂರನೇಯವರಿಗೆ ಅನುಕೂಲ ತರಲಿದೆಯೇ ಎನ್ನುವ ವಿಶ್ಲೇಷಣೆಯೂ ಇದೆ. ಒಂದು ವೇಳೆ ಶಾಸಕ ರವಿಕುಮಾರ್ ಕಾಂಗ್ರೆಸ್ಗೆ ಕಾಲಿಟ್ಟರೆ ಕ್ಷೇತ್ರದಲ್ಲಿ ರಾಜಕೀಯ ‘ಆಟ’ಗಳೇ ಅದಲು ಬದಲಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.