ಶಿಡ್ಲಘಟ್ಟ: ಬಹುತೇಕ ನಗರಗಳನ್ನು ರಾಜರು, ಪಾಳೇಗಾರರು ತಮ್ಮ ದೂರದೃಷ್ಟಿಯಿಂದ ಕಟ್ಟಿದ್ದರೆ, ಶಿಡ್ಲಘಟ್ಟವನ್ನು ಕಟ್ಟಿದ್ದು ಮಾತ್ರ ವೀರಮಹಿಳೆ ಹಲಸೂರಮ್ಮ.

ಕರ್ನಾಟಕದ ಇತಿಹಾಸವನ್ನು ಶಾಸನ, ಬಕೈರು, ಕೈಫಿಯತ್ತು ಮುಂತಾದ ಮೂಲಗಳಿಂದ ರಚಿಸಿರುವ ಬಿ.ಎಲ್.ರೈಸ್, ಹಯವದನರಾವ್ ಮುಂತಾದ ಇತಿಹಾಸಜ್ಞರು, ಶಿಡ್ಲಘಟ್ಟವನ್ನು ಕ್ರಿ.ಶ 1526ರಲ್ಲಿ ಕಟ್ಟಿಸಿದ ಮಹಾತಾಯಿ ಹಲಸೂರಮ್ಮ ತನ್ನ ಮಾವ ಸಿಡ್ಲಗೌಡನ ಹೆಸರಿನಿಂದ ‘ಸಿಡ್ಲಘಟ್ಟ’ ಎಂದು ಕರೆದಳು ಎಂದು ದಾಖಲಿಸಿದ್ದಾರೆ. ಈ ಇತಿಹಾಸದ ಆಧಾರದ ಪ್ರಕಾರ ಶಿಡ್ಲಘಟ್ಟ ಸ್ಥಾಪನೆಯಾಗಿ 500 ವರ್ಷಗಳು ಸಂದಿವೆ. ಐದು ಶತಮಾನಗಳ ಇತಿಹಾಸವನ್ನು ತನ್ನೊಡಲಿನಲ್ಲಿ ಶಿಡ್ಲಘಟ್ಟ ಇರಿಸಿಕೊಂಡಿದೆ.

ಅವರು ದಾಖಲಿಸಿರುವ ಶಿಡ್ಲಘಟ್ಟದ ಸ್ಥಳ ಐತಿಹ್ಯದ ಪ್ರಕಾರ ಕ್ರಿ.ಶ. 1514ರಲ್ಲಿ ಉಜ್ಜನಿ ಮೂಲದ ಕೆಂಪೇಗೌಡ ವೆಲ್ಲೂರಿನ ಕದನದಲ್ಲಿ ನಿಧನನಾದ. ಗರ್ಭಿಣಿಯಾಗಿದ್ದ ಆತನ ಮಡದಿ ಹಲಸೂರಮ್ಮ ಅಬ್ಲೂಡಿನಲ್ಲಿ ಕೋಟೆ ಕಟ್ಟಿ, ಸುತ್ತಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡು ಆಳತೊಡಗಿದಳು. ಕ್ರಿ.ಶ. 1514ರಲ್ಲಿ ಹಲಸೂರಮ್ಮ ಶಿವನೇಗೌಡ ಎಂಬ ಮಗನಿಗೆ ಜನ್ಮವಿತ್ತಳು. ಕ್ರಿ.ಶ. 1526ರಲ್ಲಿ ವ್ಯವಸ್ಥಿತವಾಗಿ ಊರನ್ನು ಕಟ್ಟಿಸಿದ ಆ ತಾಯಿ ತನ್ನ ಶಿವನೇಗೌಡನನ್ನು 1529ರಲ್ಲಿ ಪಟ್ಟದ ಮೇಲೆ ಕೂರಿಸಿದಳು. ಶಿವನೇಗೌಡ 47 ವರ್ಷ ಈ ಊರನ್ನು ಆಳಿದನು. ಹಾಗಾಗಿ ಈ ಊರಿಗೆ ಶಿವನಾಬ್ದಿ ಎಂಬ ಹೆಸರೂ ಇತ್ತಾದರೂ ಸಿಡ್ಲಘಟ್ಟ ಎಂಬ ಹೆಸರೇ ಹೆಚ್ಚು ಪ್ರಚಲಿತವಾಯಿತು ಎಂಬುದಾಗಿ ತಿಳಿಸಿದ್ದಾರೆ.

ಶಿಡ್ಲಘಟ್ಟದ ನೈರುತ್ಯಕ್ಕಿರುವ ‘ಅಮ್ಮನಕೆರೆ’ಯನ್ನು ಹಲಸೂರಮ್ಮನು, ಆಗ್ನೇಯ ದಿಕ್ಕಿನಲ್ಲಿರುವ ‘ಗೌಡನಕೆರೆ’ಯನ್ನು ಶಿವನೇಗೌಡನು ಕಟ್ಟಿಸಿದರು. ಅಮ್ಮನಕೆರೆಯ ಅಚ್ಚುಕಟ್ಟಿನಲ್ಲಿ ಈಗಲೂ ಶಿವನೇಗೌಡ ಮತ್ತು ಆತನ ಧರ್ಮಪತ್ನಿಯ, ಚಾವಣಿಗೆ ಹೊದಿಸಿರುವ ಸಮಾಧಿಗಳನ್ನು ಕಾಣಬಹುದು.

ಈ ನಗರ ಹದಿನೇಳನೇ ಶತಮಾನದಲ್ಲಿ ಮರಾಠರ, ನಂತರ ವಿಜಾಪುರ ಸುಲ್ತಾನರ ಮತ್ತು ಮೊಗಲರ ಆಳ್ವಿಕೆಗೆ ಒಳಪಟ್ಟಿತ್ತು. 1679ರಲ್ಲಿ ಇದನ್ನು ವಶಪಡಿಸಿಕೊಂಡ ಮರಾಠರು 1691ರಲ್ಲಿ ಚಿಕ್ಕಬಳ್ಳಾಪುರದ ಪಾಳೇಗಾರ ಅಣ್ಣಯ್ಯಗೌಡನಿಗೆ ಮಾರಿದರು. ಇದನ್ನು 1762ರಲ್ಲಿ ಹೈದರ್ ಅಲಿಯು ವಶಪಡಿಸಿಕೊಂಡನು.

1799ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ತಮ್ಮ ಸರ್ವೇಕ್ಷಣಾ ಕಾರ್ಯದಲ್ಲಿ ಶಿಡ್ಲಘಟ್ಟಕ್ಕೂ ಬಂದಿದ್ದರು. ಬುಕನನ್, ಜನ ಸಾಮಾನ್ಯರು ಈ ಊರನ್ನು ‘ಸಿಲಗುಟ್ಟ’ ಎನ್ನುವರೆಂದೇ ದಾಖಲಿಸಿದ್ದಾರೆ. ಇಂದಿಗೂ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ‘ಶಿಡ್ಲಘಟ್ಟ’, ‘ಸಿಲಗಟ್ಟ’ ವಾಗಿಯೇ ಇದೆ. ಮುಸ್ಲಿಮರಿಗೂ ಸಹ ಇದು ‘ಸಿಲಗಟ್ಟ’ವೇ. ‘ಅವ್ನು ಸಿಲಗಟ್ಟ ಮೆಣಸ್ಕಾಯಿ ಇದ್ದಂಗೆ’ ಅನ್ನುವ ಗಾದೆ ಇದನ್ನೇ ಹೇಳುತ್ತದೆ. ಹಾಗೆಯೆ ಇಲ್ಲಿನ ಮೆಣಸಿನಕಾಯಿ ಎಷ್ಟು ಖಾರದ್ದು ಎಂದು ತಿಳಿಸುತ್ತದೆ.

‘ಸಿಲಗುಟ್ಟ ಪಟ್ಟಣದಲ್ಲಿ 500 ಮನೆಗಳಿವೆ. ಅದರಲ್ಲಿ ಕೆಲವರು ನೇಕಾರರಿದ್ದಾರೆ. ಇದು ಮುಂಚೆ ನಾರಾಯಣ ಎಂಬ ಪಾಳೇಗಾರನ ವಂಶಸ್ಥರಿಗೆ ಸೇರಿದ್ದ ಪ್ರದೇಶ. ಇದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಲ್ಲಿ ಎರಡು ಸುಂದರವಾದ ಕೆರೆಗಳಿವೆ. ಕೆರೆಗಳ ಅಂಚಿನಲ್ಲಿ ಉದ್ಯಾನಗಳಿವೆ. ಕೃಷಿಯನ್ನೇ ನಂಬಿರುವ ಮೊರಸು ಅಥವಾ ಒಕ್ಕಲಿಗರು, ನಗರ್ತರು, ಮುಸಲ್ಮಾನರು, ಸಾದರು, ಬ್ರಾಹ್ಮಣರು, ಶೈವರು, ತೆಲುಗು ಮಾತನಾಡುವ ಬಣಜಿಗರು, ಸಾತಾನಿಗಳು ಇಲ್ಲಿ ವಾಸವಾಗಿದ್ದಾರೆ’ ಎಂದು ಬುಕನನ್ 1800ರ ಇಸವಿಯಲ್ಲಿನ ಚಿತ್ರಣವನ್ನು ನೀಡಿರುವರು.

ಗಾಂಧೀಜಿ ಭೇಟಿ: 1936ರಲ್ಲಿ ಹರಿಜನ ನಿಧಿ ಸಂಗ್ರಹಣೆಗಾಗಿ ಗಾಂಧೀಜಿ ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ಹೋಗುವಾಗ ಮಾರ್ಗದಲ್ಲಿ ಶಿಡ್ಲಘಟ್ಟಕ್ಕೆ ಬಂದಿದ್ದರು. ಶಿಡ್ಲಘಟ್ಟದ ಪುರಸಭೆ ಉಪಾಧ್ಯಕ್ಷರಾಗಿದ್ದ ಬಿ.ವಿರೂಪಾಕ್ಷಪ್ಪನವರು ಆಗಿನ ಕಾಲದ ಒಂದು ಸವರನ್ (8 ಗ್ರಾಂ) ತೂಕದ ಒಂದು ರೂಗಳ ನೂರು ಬೆಳ್ಳಿ ನಾಣ್ಯಗಳ ಗಂಟನ್ನು ಬಿ.ವಿರೂಪಾಕ್ಷಪ್ಪನವರು ಕೊಟ್ಟು, ಶಿಡ್ಲಘಟ್ಟದ ಪುರಸಭೆಯಿಂದ ಮಾನಪತ್ರವನ್ನು ಗಾಂಧೀಜಿಗೆ ಅರ್ಪಿಸಿದ್ದರು.

ಸ್ವಾತಂತ್ರ್ಯ ಚಳವಳಿ: 1947 ರಲ್ಲಿ ‘ಜವಾಬ್ದಾರಿ ಸರ್ಕಾರಕ್ಕಾಗಿ’ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪೋಲೀಸರು ನಡೆಸಿದ ಗೋಲಿಬಾರಿನಲ್ಲಿ ಭಕ್ತರಹಳ್ಳಿಯ ನಾರಾಯಣಪ್ಪನವರ ವೆಂಕಟರಮಣಪ್ಪ ಮತ್ತು ಕುಂಬಾರ ದೊಡ್ಡ ನಾರಾಯಣ ಎಂಬ ಇಬ್ಬರು ದೇಶಭಕ್ತರು ವೀರಮರಣವನ್ನಿಪ್ಪಿದರು. ಹೆಚ್ಚು ಪಾಲು ಮಂದಿ ಜೈಲುಪಾಲಾಗಿದ್ದರು.

1953ರಲ್ಲಿನ ಜನಸಂಖ್ಯೆ: ಮೈಸೂರು ಸಂಸ್ಥಾನದ ಪುರಸಭೆಗಳ ಕೈಪಿಡಿ 1953ರಲ್ಲಿನ ಮಾಹಿತಿಯ ಪ್ರಕಾರ ಆಗಿನ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಟೌನ್ ಮುನಿಸಿಪಾಲಿಟಿಯಲ್ಲಿನ ಜನಸಂಖ್ಯೆ 9,229, ಅಧ್ಯಕ್ಷ ಬಿ.ವಿರೂಪಾಕ್ಷಪ್ಪ, ಸಿಬ್ಬಂದಿ ಸಂಖ್ಯೆ 32. ಆಗ ಟೌನಿನಲ್ಲಿ ನೀರಿಗಾಗಿ ನಲ್ಲಿಗಳ ವ್ಯವಸ್ಥೆಯಿರಲಿಲ್ಲ. ವಿದ್ಯುದ್ದೀಪದ ಸೌಕರ್ಯವಿದ್ದು 150 ಬೀದಿ ದೀಪಗಳಿದ್ದವು. ಇಲ್ಲಿ ಎರಡು ಸಾವಿರ ಮನೆಗಳಿದ್ದವು ಎಂದು ಕೈಪಿಡಿಯಲ್ಲಿ ಮುದ್ರಿತವಾಗಿದೆ.

ಶಿಡ್ಲಘಟ್ಟ ಕ್ಷೇತ್ರದ ಶಾಸಕರು: ಸ್ವಾತಂತ್ರ್ಯಾ ನಂತರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 16 ಚುನಾವಣೆ ನಡೆದಿವೆ. 11 ಬಾರಿ ಕಾಂಗ್ರೆಸ್, ಜನತಾ ಪಕ್ಷ ಒಂದು ಬಾರಿ, ಜಾತ್ಯತೀತ ಜನತಾ ದಳ 3 ಬಾರಿ ಗೆಲುವು ಸಾಧಿಸಿದ್ದರೆ, ಒಮ್ಮೆ ಮಾತ್ರ ಪಕ್ಷೇತರ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದಾರೆ. ಒಟ್ಟು 8 ಮಂದಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

2011ರ ಜನಗಣತಿಯ ಪ್ರಕಾರ ಶಿಡ್ಲಘಟ್ಟದ ಜನಸಂಖ್ಯೆ 51,159 ಮತ್ತು ಮನೆಗಳ ಸಂಖ್ಯೆ 12,850.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-16-993033914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.