ಶಿಡ್ಲಘಟ್ಟ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಕೆಲವು ದಿನಗಳ ಹಿಂದೆ ಪ್ರಕಟಿಸಿದ್ದ ಶಾಸಕ ವಿ.ಮುನಿಯಪ್ಪ, ಈಗ ಎಡಿಬಿ ಟ್ರಸ್ಟ್ ಅಧ್ಯಕ್ಷ ರಾಜೀವ್ ಗೌಡ ‘ಕೈ’ ಹಿಡಿದಿದ್ದಾರೆ. ಇದೇ ಮುನಿಯಪ್ಪ ಎರಡು ದಿನಗಳ ಹಿಂದೆ ಕಾಂಗ್ರೆಸ್ ಟಿಕೆಟ್‌ನ ಮತ್ತೊಬ್ಬ ಆಕಾಂಕ್ಷಿ ಎಸ್ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಪುಟ್ಟು ಆಂಜಿನಪ್ಪ ಅವರ ಜತೆಯೂ ಕೈ ಜೋಡಿಸಿದ್ದರು.
ಶಾಸಕ ವಿ.ಮುನಿಯಪ್ಪ ಅವರ ನಡೆ ಕಾಂಗ್ರೆಸ್ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ. ಒಂದು ದಿನ ಒಬ್ಬರ ಪರವಾಗಿ ನಿಲುವು ತಾಳುತ್ತಿರುವುದರಿಂದ ‘ನಾಯಕತ್ವ’ದ ಗೊಂದಲ ಸಹ ಮೂಡಿದೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಸಹ ಪ್ರಯತ್ನಿಸಿದ್ದರು. ವಯೋಸಹಜ ಕಾರಣ ಮುನಿಯಪ್ಪ ಸ್ಪರ್ಧಿಸುತ್ತಿಲ್ಲ. ಅದಕ್ಕೆ ಪೂರವಾಗಿ ಮೊದಲ ಪಟ್ಟಿಯಲ್ಲಿ ಶಾಸಕ ವಿ.ಮುನಿಯಪ್ಪ
ಹೆಸರೂ ಇಲ್ಲ.
ಕಳೆದ ತಿಂಗಳು ಇದ್ದಕ್ಕಿದ್ದ ಹಾಗೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತಮ್ಮ ಮಗ ಶಶಿಧರ್ ಕೂಡ ಸ್ಪರ್ಧಿಸುವುದಿಲ್ಲ ಎಂದು ಮುನಿಯಪ್ಪ ಹೇಳಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಹೆಸರನ್ನು ಸೂಚಿಸಿ ಅವರನ್ನು ಬೆಂಬಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದರು. ಅವರ ಆಯ್ಕೆಯನ್ನು ಕೆಲವು ಕಾಂಗ್ರೆಸ್ ಮುಖಂಡರು ವಿರೋಧಿಸಿದ್ದರು.
ಬೆಂಗಳೂರಿನ ಜಕ್ಕೂರಿನ ಹೋಟೆಲ್‌ವೊಂದರಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ದಾರೆ. ಶಾಸಕ ವಿ.ಮುನಿಯಪ್ಪ, ಅವರ ಮಗ ಶಶಿಧರ್ ಇಬ್ಬರೂ ಎಬಿಡಿ ಟ್ರಸ್ಟ್ ಅಧ್ಯಕ್ಷ ರಾಜೀವ್ ಗೌಡ ಅವರು ಅಭ್ಯರ್ಥಿಯಾಗಲಿ, ಬೆಂಬಲಿಸುತ್ತೇವೆ ಎಂದು ಹೇಳುವ ಮೂಲಕ ಹೊಸ ತಿರುವು ನೀಡಿದ್ದಾರೆ. ಈ ಸಭೆಯಲ್ಲಿ ಸೇರಿದ್ದ ವಿ.ಮುನಿಯಪ್ಪ ಅವರ ಬೆಂಬಲಿಗರೂ ಕೂಡ ತೀರ್ಮಾನಕ್ಕೆ ಅನುಮೋದಿಸಿದ್ದಾರೆ.
ಶಶಿಧರ್ ಈ ವಿಚಾರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಮತ್ತು ಮೇಲೂರು ಮುರಳಿ ಅವರ ಮೂಲಕ ಪ್ರಕಟಿಸಿದ್ದಾರೆ. ಶಾಸಕ ವಿ.ಮುನಿಯಪ್ಪ ಕೂಡ ಒಪ್ಪಿಗೆ
ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಗೌಡ, ಶಾಸಕರು ಹಾಗೂ ಅವರ ಮಗ ನೀಡುವ ನಿರ್ದೇಶನದ ಮೇರೆಗೆ ಚುನಾವಣೆ ಎದುರಿಸುತ್ತೇನೆ. ಅವರ ಅನುಮತಿ ಪಡೆಯದೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಈಗ ಕಾಂಗ್ರೆಸ್ ನಲ್ಲಿರುವುದು ಒಂದೇ ಬಣ. ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇನೆ. ಯಾವ ಮುಖಂಡರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಶನಿವಾರ ಶಶಿಧರ್ ಅವರ ಎಂನಿಯರಿಂಗ್ ಕಾಲೇಜಿನಲ್ಲಿ ಪೂರ್ವಭಾವಿ ಸಭೆ ಸಹ ನಡೆಸಲಾಗಿತ್ತು. ಅಲ್ಲಿ ಭಾಗವಹಿಸಿದ್ದ ಅವರ ಬೆಂಬಲಿಗರೊಂದಿಗೆ ಶಶಿಧರ್, ರಾಜೀವ್ ಗೌಡ ಅವರನ್ನು ಬೆಂಬಲಿಸುವುದು ಸೂಕ್ತ ಎಂದಿದ್ದರು.
ಎಸ್.ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಪುಟ್ಟು ಆಂಜಿನಪ್ಪ ಅವರ ತೋಟದ ಮನೆಗೆ ಶಾಸಕ ವಿ.ಮುನಿಯಪ್ಪ ಮತ್ತು ಆಂಜಿನಪ್ಪ ಭೇಟಿ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿ.ಮುನಿಯಪ್ಪ ಅವರು ಪುಟ್ಟು ಆಂಜಿನಪ್ಪ ಅವರನ್ನು ಬೆಂಬಲಿಸಬಹುದು ಎಂಬ ಊಹಾಪೋಹ ಸಹ ಇತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಪುಟ್ಟು ಆಂಜಿನಪ್ಪ ಸ್ಪರ್ಧಿಸಿ ಹತ್ತು ಸಾವಿರದಷ್ಟು ಮತ ಪಡೆದಿದ್ದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಶಾಸಕ ವಿ.ಮುನಿಯಪ್ಪ ದಿನಕ್ಕೊಂದು ನಡೆಯನ್ನು ಅನುರಿಸುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಈ ಹಿಂದೆ ವೀಕ್ಷಕರಿಗೆ ಟಿಕೆಟ್ ಕೋರಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಮುನಿಯಪ್ಪ ಮತ್ತು ರಾಜೀವ್ ಗೌಡ ಬೆಂಬಲಿಗರು ಪರಸ್ಪರ ತೀವ್ರ ವಾಗ್ವಾದ ನಡೆಸಿದ್ದರು.
ಅಂದು ಆಮಿಷ; ಇಂದು ಆಲಿಂಗನ: ‘ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಿಟ್ಟು ಕೊಡಲು ನನಗೆ ರಾಜೀವ್ ಗೌಡ ₹ 30 ಕೋಟಿ ಆಮಿಷ ಒಡ್ಡಿದ್ದರು’ ಎಂದು ಶಾಸಕ ವಿ.ಮುನಿಯಪ್ಪ ಈ ಹಿಂದೆ ಆರೋಪಿಸಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಇದೀಗ ಅದೇ ರಾಜೀವ್ ಗೌಡರನ್ನು ವಿ.ಮುನಿಯಪ್ಪ ಮತ್ತು ಅವರ ಪುತ್ರ ಶಶಿಧರ್ ಬೆಂಬಲಿಸುವ ಮೂಲಕ ಶಾಸಕ ವಿ.ಮುನಿಯಪ್ಪ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.