ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ನೆರವಿಗೆ ಧಾವಿಸಿದ ಸರ್ಕಾರ: 1,000 ಟನ್ ದ್ರಾಕ್ಷಿ ಸಾಗಣೆ

ಒಂದು ವಾರದಲ್ಲಿ ಒಂಬತ್ತು ರಾಜ್ಯಗಳ ಮಾರುಕಟ್ಟೆಗಳಿಗೆ ಹಣ್ಣು ಸಾಗಣೆ
Last Updated 5 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ದ್ರಾಕ್ಷಿ ಕಟಾವು ಚುರುಕುಗೊಂಡಿದ್ದು, ಈವರೆಗೆ ವಿವಿಧ ರಾಜ್ಯಗಳ ಮಾರುಕಟ್ಟೆಗಳಿಗೆ ಸುಮಾರು 1,000 ಟನ್ ದ್ರಾಕ್ಷಿ ಸಾಗಣೆಯಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದ ದ್ರಾಕ್ಷಿ ಬೆಳೆಗಾರರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡಲು ಆರಂಭಿಸಿದ್ದಾರೆ.

ಕೊರೊನಾ ಭೀತಿಯ ಬೆನ್ನಲ್ಲೇ ಜಾರಿಗೆ ಬಂದ ಕಟ್ಟುನಿಟ್ಟಿನ ಲಾಕ್‌ಡೌನ್‌ ಪರಿಣಾಮ ದೇಶದಾದ್ಯಂತ ಸರಕು ಸಾಗಣೆ ವ್ಯವಸ್ಥೆ ಅಸ್ತವ್ಯಸ್ಥಗೊಂಡು, ಹೊರಗಿನ ಮಾರುಕಟ್ಟೆಗಳಿಗೆ ಜಿಲ್ಲೆಯ ದ್ರಾಕ್ಷಿ ಸಾಗಿಸಲಾಗದೆ ಖರೀದಿದಾರರು ದ್ರಾಕ್ಷಿ ಖರೀದಿಸುವುದನ್ನೇ ಕೈ ಬಿಟ್ಟಿದ್ದರು.

ಪರಿಣಾಮ, ಕಟಾವಿಗೆ ಬಂದ ಮಾಗಿದ ಫಸಲನ್ನು ಖರೀದಿಸುವವರಿಲ್ಲದೆ ಬೆಳೆಗಾರರು ಕಂಗೆಟ್ಟು ಹೋಗಿದ್ದರು. ಕೆಲ ರೈತರು ಬೇಸತ್ತು ದ್ರಾಕ್ಷಿ ಕಟಾವು ಮಾಡಿ ತಿಪ್ಪೆಗೆ ಕೂಡ ಸುರಿಯಲು ಆರಂಭಿಸಿದ್ದರು.

ದ್ರಾಕ್ಷಿ ಬೆಳೆಗಾರರ ಈ ಸಂಕಷ್ಟ ಕುರಿತು ‘ಪ್ರಜಾವಾಣಿ’ ಮಾರ್ಚ್ 29 ರಂದು ‘ಜಿಲ್ಲೆಯಲ್ಲಿ ತಿಪ್ಪೆ ಸೇರುತ್ತಿದೆ ದ್ರಾಕ್ಷಿ’ ಎಂಬ ವಿಶೇಷ ವರದಿಯ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.

ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮಾರ್ಚ್‌ 30 ರಿಂದ ಜಿಲ್ಲೆಯಲ್ಲಿ ದ್ರಾಕ್ಷಿ ಸಾಗಾಟದ ವಾಹನಗಳಿಗೆ ಅನುಮತಿ ಪತ್ರ ನೀಡಲು ಕ್ರಮಕೈಗೊಂಡಿತ್ತು. ಜತೆಗೆ ಇತ್ತೀಚೆಗೆ ತೋಟಗಾರಿಕೆ ಸಚಿವರೇ ಜಿಲ್ಲೆಗೆ ಬಂದು ಹಣ್ಣು ಬೆಳೆಗಾರರ ಹಿತ ಕಾಯುವ ಭರವಸೆ ನೀಡಿದ್ದರು.

ಮಾರ್ಚ್‌ 30 ರಿಂದ ಏಪ್ರಿಲ್ 5ರ ವರೆಗೆ ಜಿಲ್ಲೆಯಿಂದ ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ, ಒಡಿಶಾ ಸೇರಿದಂತೆ ಒಂಬತ್ತು ರಾಜ್ಯಗಳಿಗೆ ಮತ್ತು ನಮ್ಮ ರಾಜ್ಯದ ನಾಲ್ಕು ನಗರಗಳ ಮಾರುಕಟ್ಟೆಗಳಿಗೆ ಪರವಾನಗಿ ಪಡೆದ 130 ವಾಹನಗಳ ಮೂಲಕ 1,006 ಟನ್ ದ್ರಾಕ್ಷಿ ಸಾಗಿಸಲಾಗಿದೆ.

ಜಿಲ್ಲೆಯಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ದ್ವೈವಾರ್ಷಿಕ ಬೆಳೆಯಾದ ಬೆಂಗಳೂರು ಬ್ಲೂ (ಕಪ್ಪು ದ್ರಾಕ್ಷಿ) ಮತ್ತು ದಿಲ್‌ಕುಷ್‌, ಬೀಜ ರಹಿತ ಶರತ್, ಕೃಷ್ಣಾ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಸದ್ಯ 2,500 ಎಕರೆಯಲ್ಲಿ ಅಂದಾಜು 40 ಸಾವಿರ ಟನ್ ದ್ರಾಕ್ಷಿ ಕಟಾವಿಗೆ ಬಂದಿದೆ.

ಲಾಕ್‌ಡೌನ್‌ನಿಂದಾಗಿ ದ್ರಾಕ್ಷಿ ಕಟಾವು ಮಾಡಲಾಗದೆ ಹತಾಶೆಗೊಂಡಿದ್ದ ರೈತರಿಗೆ ಇದೀಗ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಕೈಗೊಂಡ ಕ್ರಮಗಳು ‘ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ’ ಎನ್ನುವಂತಾಗಿವೆ.

ಪಟ್ಟಿ..
ಜಿಲ್ಲೆಯಲ್ಲಿ ಪರವಾನಗಿ ಪಡೆದ ವಾಹನಗಳು, ದ್ರಾಕ್ಷಿ ಸಾಗಾಟದ ವಿವರ
ಮಾರುಕಟ್ಟೆ;ವಾಹನಗಳು;ಪ್ರಮಾಣ (ಟನ್‌)


ತಮಿಳುನಾಡು;30;213

ಕೇರಳ;22;176

ಬೆಂಗಳೂರು;26;210

ಆಂಧ್ರಪ್ರದೇಶ;16;85

ಒಡಿಶಾ;9;77

ಪಶ್ಚಿಮ ಬಂಗಾಳ;15;120

ತೆಲಂಗಾಣ;4;38

ಪುದುಚೇರಿ;4;41

ರಾಜಸ್ಥಾನ;1;12

ಜಮ್ಮುಕಾಶ್ಮೀರ;1;12

ಮೈಸೂರು;2,16

ಮಂಗಳೂರು;1;6

ಹಾಸನ;1;6
ಒಟ್ಟು;130;1,006

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT