ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಶಿವನ ಸ್ಮರಣೆ, ರಾತ್ರಿಯಿಡಿ ಜಾಗರಣೆ

ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಭೋಗ ನಂದೀಶ್ವರ ದೇಗುಲದತ್ತ ಭಕ್ತರ ದಂಡು
Last Updated 21 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಹಾ ಶಿವರಾತ್ರಿ ಪ್ರಯುಕ್ತ ಶುಕ್ರವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು. ಶಿವರಾತ್ರಿ ಉಪವಾಸ ನಿರತರು ದೇವಸ್ಥಾನಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದ ದೃಶ್ಯಗಳು ಗೋಚರಿಸಿದವು.

ತಾಲ್ಲೂಕಿನ ನಂದಿಯಲ್ಲಿರುವ ಭೋಗ ನಂದೀಶ್ವರ ಸ್ವಾಮಿ, ನಂದಿ ಗಿರಿಧಾಮದ ಮೇಲಿರುವ ಭೋಗ ನಂದೀಶ್ವರ, ಎಂ.ಜಿ.ರಸ್ತೆಯಲ್ಲಿರುವ ಮರುಳ ಸಿದ್ದೇಶ್ವರ, ಪಾಪಾಗ್ನಿ ಮಠ, ಕೃಷ್ಣ ಚಿತ್ರಮಂದಿರ ರಸ್ತೆಯಲ್ಲಿರುವ ಪ್ರಸನ್ನೇಶ್ವರ ದೇವಸ್ಥಾನ, ಭುವನೇಶ್ವರಿ ವೃತ್ತದಲ್ಲಿರುವ ಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದದ್ದು ಕಂಡುಬಂತು. ಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದ ಜತೆಗೆ ಹೂವು, ಬಿಲ್ವಪತ್ರೆ, ಎಲೆ­ಗಳಿಂದ ವಿಶೇಷ ಅರ್ಚನೆ ಮಾಡಲಾಗುತ್ತಿತ್ತು.

ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬಂದರು. ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಜತೆಗೆ ರಾತ್ರಿ ಜಾಗರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಏಕವಾರ ಅಭಿಷೇಕ ಹಾಗೂ ಹೋಮ ಹವನಗಳು ಜತೆಗೆ ರಾತ್ರಿ 7ಕ್ಕೆ ಹಂಸ ವಾಹನೋತ್ಸವ, ಬಳಿಕ 10ರ ವರೆಗೆ ಒಂದನೇ ಯಾಮದ ಮಹನ್ಯಾಸ ಪೂರ್ವಕ ಏಕಾದಶವಾರ ರುದ್ರಾಭಿಷೇಕ, ರಾತ್ರಿ 9ಕ್ಕೆ ಕಾಶಿಯಾತ್ರೆ, ಜತೆಗೆ ಶಿವಕಥೆ, ಹರಿಕಥೆ ಹಾಡುಗಾರಿಕೆ ಮತ್ತು ಭಜನೆ, ರಾತ್ರಿ 10 ರಿಂದ 12ರ ವರೆಗೆ ಎರಡನೇ ಯಾಮದ ಮಹನ್ಯಾಸ ಪೂರ್ವಕ ಏಕಾದಶವಾರ ರುದ್ರಾಭಿಷೇಕ ಸೇವೆ ನಡೆದವು. ರಾತ್ರಿ 10.30 ರಿಂದ 12 ರವರೆಗೆ ತುಲಾ ಲಗ್ನದಲ್ಲಿ ಗಿರಿಜಾಂಬ ಮತ್ತು ಭೋಗ ನಂದೀಶ್ವರ ಸ್ವಾಮಿ ಕಲ್ಯಾಣೋತ್ಸವ ನೆರವೇರಿತು.

ಅಖಂಡ ಭಜನೆ: ನಗರದ ವಾಪಸಂದ್ರದಲ್ಲಿರುವ ನಿಡುಮಾಮಿಡಿ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಶಿವಪೂಜೆ ನೆರೆವೇರಿಸಿದರು. ನಿಡುಮಾಮಿಡಿ ಶಿಕ್ಷಣ ಸಂಸ್ಥೆ ವತಿಯಿಂದ ‘ಶಿವೋತ್ಸವ’ ಎಂಬ ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ರಾತ್ರಿಯಿಡಿ ಅಖಂಡ ಭಜನೆ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಜಾಗರಣೆ: ನಗರದ ಅನೇಕ ದೇವಾಲಯಗಳಲ್ಲಿ ಶುಕ್ರವಾರ ರಾತ್ರಿಯಿಡಿ ಶಿವರಾತ್ರಿ ಜಾಗರಣೆ ನಡೆಯಿತು. ಭೋಗ ನಂದೀಶ್ವರ ದೇವಸ್ಥಾನಕ್ಕಂತೂ ಭಕ್ತರ ದಂಡು ಪ್ರವಾಹೋಪಾದಿಯಲ್ಲಿ ಹರಿದು ಬಂದಿತ್ತು. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಚಿಂತಾಮಣಿ, ಶಿಡ್ಲಘಟ್ಟ, ಬೆಂಗಳೂರು ಮಾತ್ರವಲ್ಲದೆ ನೆರೆ ಆಂಧ್ರಪ್ರದೇಶದಿಂದ ಕೂಡ ಭಕ್ತರ ದಂಡು ಬಂದಿತ್ತು. ರಾತ್ರಿ ಶಿವನಾಮ ಸ್ಮರಣೆ ಮಾಡುವುದು, ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತರು ಜಾಗರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT