ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಯೋಗಿ ಮಾನ್‌ಧನ್ ರದ್ದಿಗೆ ಆಗ್ರಹ

ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಕಾರ್ಯಕರ್ತೆಯರಿಂದ ಜಿಲ್ಲಾ ಪಂಚಾಯಿತಿ ಚಲೋ ನಡೆಸಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ
Last Updated 17 ಅಕ್ಟೋಬರ್ 2019, 10:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು ಎಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಕಾರ್ಯಕರ್ತೆಯರು ಗುರುವಾರ ನಗರದಲ್ಲಿ ಜಿಲ್ಲಾ ಪಂಚಾಯಿತಿ ಚಲೋ ನಡೆಸಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ನಗರದ ಜಿಲ್ಲಾ ಗ್ರಂಥಾಲಯದಿಂದ ಜಿಲ್ಲಾಡಳಿತ ಭವನದ ವರೆಗೆ ಪಾದಯಾತ್ರೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎಂ. ಮುನಿಕೃಷ್ಣ, ‘ಕೇಂದ್ರ ಸರ್ಕಾರ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆ ರದ್ದು ಮಾಡಿ, ಈ ಹಿಂದೆ ನೀಡಿದ ಭರವಸೆಯಂತೆ ಎಲ್ಐಸಿ ಮೂಲಕವೇ ಪಿಂಚಣಿ ಹಣ ನೀಡಬೇಕು. ಕಳೆದ ಐದು ತಿಂಗಳಿಂದ ಬಿಸಿಯೂಟ ನೌಕರರಿಗೆ ರಾಜ್ಯ ಸರ್ಕಾರ ವೇತನ ನೀಡಿಲ್ಲ. ಇದರಿಂದ ನೌಕರರು ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಗೆ 18 ರಿಂದ 40 ವರ್ಷದ ಒಳಗಿನ ವಯೋಮಾನದವರು ಮಾತ್ರ ಅರ್ಹರಾಗುತ್ತಾರೆ. ಆದರೆ, ಅನೇಕ ಬಿಸಿಯೂಟ ನೌಕರರು ಸುಮಾರು 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಸಾಕಷ್ಟು ಮಹಿಳೆಯರು 40 ವರ್ಷದ ದಾಟಿದವರಿದ್ದಾರೆ. ಇದರಿಂದಾಗಿ ಅವರಿಗೆ ಅನ್ಯಾಯವಾಗುತ್ತದೆ’ ಎಂದು ಹೇಳಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಸಿಯೂಟ ನೌಕರರಿಗೆ ಕಳೆದ 17 ವರ್ಷಗಳಿಂದ ಸರಿಯಾದ ವೇತನ, ಪಿಂಚಣಿ ಇತರೆ ಸೌಲಭ್ಯಗಳನ್ನು ನೀಡದೆ ಮೋಸ ಮಾಡುತ್ತಿವೆ. ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎಂಬ ಬೇಡಿಕೆ ಈಡೇರಿಸಿಲ್ಲ’ ಎಂದರು.

‘ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಬಿಸಿಯೂಟ ನೌಕರರಾಗಿ ದುಡಿಯುತ್ತಿದ್ದಾರೆ. ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ತಿಂಗಳಿಗೆ ಸುಮಾರು ₹2,700 ವೇತನ ಬಿಟ್ಟರೆ ಯಾವುದೇ ಸೌಲಭ್ಯಗಳಿಲ್ಲ. ಸದ್ಯ ನಿವೃತ್ತಿ ಅಂಚಿನಲ್ಲಿರುವವರಿಗೆ ಈ ಯೋಜನೆಯಿಂದ ಅನ್ಯಾಯವಾಗಲಿದೆ’ ಎಂದು ತಿಳಿಸಿದರು.

ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್‌.ಮಂಜುಳಾ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮಗೆ ಯಾವುದೇ ಸೌಲಭ್ಯ, ಆರ್ಥಿಕ ಭದ್ರತೆ ನೀಡದೆ ಕಡೆಗಣಿಸಿವೆ. ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಿದೆ. ಆದರೆ ಮಕ್ಕಳಿಗೆ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುವ ಬಿಸಿಯೂಟ ನೌಕರರ ಬಗ್ಗೆ ಕಾಳಜಿ ವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಡುಗೆಗೆ ಬಳಸುವ ತರಕಾರಿಗಳ ಬೆಲೆ ಹೆಚ್ಚಳವಾಗುತ್ತಿದೆ. ಆದರೆ ಅಡುಗೆ ಮಾಡುವವರ ವೇತನ ಹೆಚ್ಚಳವಾಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಜೀವನ ಸಾಗಿಸುವುದು ದುಸ್ತರವಾಗಿದೆ. ಈ ಹಿಂದೆ ನಾವು ಅನೇಕ ಹೋರಾಟಗಳು ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರೂ ನಮಗೆ ಯಾವುದೇ ರೀತಿಯ ನ್ಯಾಯ ಸಿಗಲಿಲ್ಲ‘ ಎಂದು ಆರೋಪಿಸಿದರು.

ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮುನಿಲಕ್ಷಮ್ಮ ,ಮುಸ್ತಾಪ್, ಖಚಾಂಚಿ ರಾಜಮ್ಮ, ಚಿಂತಾಮಣಿ ತಾಲ್ಲೂಕು ಘಟಕದ ಅಧ್ಯಕ್ಷೆ ನೀಲಮ್ಮ, ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷೆ ಅಮರಾವತಿ, ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷೆ ಗಂಗರತ್ನಮ್ಮ, ಗೌರಿಬಿದನೂರು ತಾಲ್ಲೂಕು ಘಟಕದ ಅಧ್ಯಕ್ಷೆ ನರಸಮ್ಮ, ಮುಖಂಡರಾದ ಭಾರತಿ, ಉಮಾ, ಪ್ರಮೀಳ, ವೆಂಕಟರತ್ನಮ್ಮ, ಲಕ್ಷಮ್ಮ, ಕದಿರಮ್ಮ, ಮಂಜುಳಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT