ಶುಕ್ರವಾರ, ಏಪ್ರಿಲ್ 23, 2021
32 °C
ಸಂತೆ ಜಾಗದಲ್ಲಿನ ಕಸ ತೆರವಿಗೆ ವ್ಯಾಪಾರಿಗಳ ಒತ್ತಾಯ

ಶಿಡ್ಲಘಟ್ಟ: ಸ್ವಚ್ಛತೆ ಕೊರತೆಯಿಂದ ವ್ಯಾಪಾರ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಎಂದಿನಂತೆ ಸೇರಿದ್ದ ಸಂತೆಗೆ ತೆರಳಿದ ನಗರಸಭೆ ಪರಿಸರ ಅಭಿಯಂತರ ದಿಲೀಪ್ ಮತ್ತು ಸಿಬ್ಬಂದಿ ಹಾಗೂ ಪೊಲೀಸರು ಸಂತೆಯನ್ನು ನಿಲ್ಲಿಸುವಂತೆ ಜನರಿಗೆ ತಿಳುವಳಿಕೆ ಮೂಡಿಸಿದರು.

ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಜನಸಂದಣಿ ಸೇರಿಸಬಾರದೆಂದು ಸರ್ಕಾರದ ಆದೇಶವಿರುವುದರಿಂದ ಸಂತೆಯಲ್ಲಿ ಅರಿವು ಮೂಡಿಸುವ ಕರಪತ್ರ ನೀಡಿದ ಅಧಿಕಾರಿಗಳು ಕುರಿಗಳನ್ನು ತಂದ ರೈತರನ್ನು ಮನವೊಲಿಸಿ ವಾಪಸ್ ಕಳುಹಿಸಿದರು. ಆದರೆ, ತರಕಾರಿಗಳನ್ನು ತಂದಿದ್ದ ರೈತರು ಮತ್ತು ವ್ಯಾಪಾರಿಗಳು, ‘ನಾಳೆ ಮುನಿದ್ಯಾವರ ಕಾರ್ಯ ಇರುವ ಕಾರಣ ಎರಡರಿಂದ ಮೂರು ಗಂಟೆ ಅವಧಿ ಸಂತೆ ನಡೆಸಲು ಅವಕಾಶ ನೀಡಬೇಕೆಂದು’ ಮನವಿ ಮಾಡಿದರು. ಹೆಚ್ಚು ಜನರು ಸೇರಬಾರದು ಎಂದು ಜನರಲ್ಲಿ ನಗರಸಭೆ ಸಿಬ್ಬಂದಿ ತಿಳಿಹೇಳಿದರು.

‘ಕೆಲವು ಅಂಗಡಿಗಳವರು, ನಗರಸಭೆಯ ಸಿಬ್ಬಂದಿ ಜಾಗೃತಿಗಾಗಿ ಕೇವಲ ಕರಪತ್ರ ಹಂಚುತ್ತಾರೆ. ಕನಿಷ್ಠ ಅದರಲ್ಲಿರುವ ಸಂಗತಿಗಳನ್ನು ಅವರೂ ಪಾಲಿಸಬೇಕಲ್ಲ. ಕಸ, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುತ್ತದೆ. ತ್ಯಾಜ್ಯವನ್ನು ವಿಲೇವಾರಿ ಮಾಡುವವರಿಗೆ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲದ ಕಾರಣ ಅವರು ಕೆಲಸ ಮಾಡುತ್ತಿಲ್ಲವೆಂದು ಹೇಳುತ್ತಾರೆ. ಒಟ್ಟಾರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ’ ಎಂದು ಹೇಳಿದರು.

ಸಂತೆ ನಡೆಯುವ ಆಸುಪಾಸಿನಲ್ಲಿ ತ್ಯಾಜ್ಯ ವಿಲೇವಾರಿ ಆಗದಿರುವುದು, ಕರೋನಾ ಸೋಂಕಿನ ಕುರಿತಾದ ಆತಂಕದಿಂದಾಗಿ ಜನರು ಹೆಚ್ಚಾಗಿ ಸಂತೆಯ ಬಳಿ ಸುಳಿಯದ ಕಾರಣ ಬಿಸಿಲಿನಲ್ಲಿ ಸಂತೆ ಭಣಗುಟ್ಟುತ್ತಿತ್ತು.

ಬಸ್ ನಿಲ್ದಾಣದ ಬಳಿ ತಳ್ಳುವ ಗಾಡಿಗಳಲ್ಲಿ ಹಣ್ಣುಗಳನ್ನು ಮಾರುವವರು, ರಾಶಿ ರಾಶಿ ತ್ಯಾಜ್ಯ ಬಿದ್ದಿದೆ. ನಗರಸಭೆಯವರು ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರೆ, ಸಂತೆಯಲ್ಲಿ ಹಾದು ಹೋಗುವ ಚರಂಡಿಗೆ ಫಾಗಿಂಗ್ ಅಥವಾ ಬ್ಲೀಚಿಂಗ್ ಪೌಡರ್ ಕೂಡ ಹಾಕಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದ ಬಳಿಯ ಕಾಲುವೆಯಂತೂ ತ್ಯಾಜ್ಯದ ಗುಂಡಿಯಾಗಿದೆ. ಅದನ್ನು ಸ್ವಚ್ಛಗೊಳಿಸುವುದಾಗಲೀ, ಫಾಗಿಂಗ್ ಮಾಡುವುದಾಗಲೀ ನಗರಸಭೆಯವರು ಮಾಡುತ್ತಿಲ್ಲ. ಸಂಕ್ರಾಮಿಕ ರೋಗ ಹರಡಲು ಎಲ್ಲಾ ಅನುಕೂಲಗಳನ್ನೂ ನಗರಸಭೆಯವರೇ ಮಾಡಿಕೊಟ್ಟಂತಿದೆ ಎನ್ನುತ್ತಾರೆ ಆಟೋ ಚಾಲಕರು.

ತಾಲ್ಲೂಕು ಮಟ್ಟದ ಸಂತೆ ಅಂದರೆ ಎಷ್ಟು ಅಚ್ಚುಕಟ್ಟಾಗಿರಬೇಕು. ಆದರೆ ಶಿಡ್ಲಘಟ್ಟದ ಸಂತೆ ಅಂದರೆ ಮೂಗುಮುಚ್ಚಿಕೊಂಡು ಓಡಾಡುವ ವಾತಾವರಣವಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ದೇವರಾಜ್. 

ಗಲೀಜು ಮತ್ತು ವಾಸನೆಯ ನಡುವೆಯೇ ತರಕಾರಿ, ಸೊಪ್ಪುಗಳನ್ನು ಮಾರಾಟ ಮಾಡಬೇಕು. ಬಿಸಿಲು ಸಹ ತಲೆಯನ್ನು ಸುಡುತ್ತಿರುತ್ತದೆ ಎನ್ನುತ್ತಾರೆ ಸೊಪ್ಪು ಮಾರುವ ನಾರಾಯಣಮ್ಮ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು