ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಪ್ರಾಂಶುಪಾಲರ ವಜಾಕ್ಕೆ ವಿದ್ಯಾರ್ಥಿಗಳ ಆಗ್ರಹ

Last Updated 30 ನವೆಂಬರ್ 2021, 4:55 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರಿಯಾದ ಮೂಲ ಸವಲತ್ತುಗಳಿಲ್ಲ ಹಾಗೂ ಪ್ರಾಂಶುಪಾಲರ ಹಾಗೂ ಸಿಬ್ಬಂದಿಯ ನಡುವೆ ಹೊಂದಾಣಿಕೆಯಿಲ್ಲದ ಕಾರಣ 10 ಗಂಟೆಗೆ ಶುರುವಾಗಬೇಕಾದ ತರಗತಿಗಳು ಹನ್ನೊಂದು ಗಂಟೆಯಾದರೂ ತೆರೆಯುವುದಿಲ್ಲ. ಹಾಗಾಗಿ ಕೂಡಲೇ ಪ್ರಾಂಶುಪಾಲರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದರು.

ಕಾಲೇಜಿನೊಳಗಿರುವ ಶೌಚಾಲಯಗಳು ದುರ್ವಾಸನೆ ಬೀರುತ್ತಿದ್ದು, ಸ್ವಚ್ಛಗೊಳಿಸಿ ವರ್ಷಗಳೇ ಆಗಿವೆ. ಕೇಳಿದರೆ ನೀರಿಲ್ಲ ಎನ್ನುತ್ತಾರೆ. ಕಾಲೇಜಿನಲ್ಲಿ ಜಿಮ್ ಇದ್ದರೂ ಬಳಕೆಯಾಗುತ್ತಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರಿದ್ದರೂ ಪ್ರಯೋಜನವಿಲ್ಲ. ಸಭಾಂಗಣದಲ್ಲಿ ನಾಯಿ ಸತ್ತು ದುರ್ವಾಸನೆ ಬೀರುತ್ತಿದ್ದರೂ ಸ್ವಚ್ಛಗೊಳಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಕೆಟ್ಟಿದ್ದು, ದುರಸ್ತಿಯಾಗಿಲ್ಲ. ಕಾಲೇಜಿನಲ್ಲಿ ಅವ್ಯವಸ್ಥೆಗಳಿದ್ದರೂ ಸಕಾಲದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ಶಾಸಕರೇ ಅಧ್ಯಕ್ಷರಾಗಿರುವ ಕಾಲೇಜು ಅಭಿವೃದ್ಧಿ ಸಮಿತಿ ಹೆಸರಿಗಿದೆಯಾದರೂ ಈವರೆಗೂ ಸಭೆ ನಡೆಸಿಲ್ಲ. ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕವಿದೆಯಾದರೂ ಯಾವುದೇ ಪ್ರಯೋಜನವಿಲ್ಲ ಎಂಬಂತಾಗಿದೆ. ಕೂಡಲೇ ಪ್ರಾಂಶುಪಾಲರನ್ನು ವಜಾಗೊಳಿಸುವುದು ಸೇರಿದಂತೆ ಕಾಲೇಜಿಗೆ ಅಗತ್ಯವಿರುವ ಮೂಲ ಸವಲತ್ತು ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಈ ಬಗ್ಗೆ ಪ್ರಾಂಶುಪಾಲರನ್ನು ವಿಚಾರಿಸಿದರೆ ಕಾಲೇಜಿನಲ್ಲಿ ಸಮಸ್ಯೆ ಇರುವುದು ನಿಜ. ಒಂದೆರಡು ತಿಂಗಳಲ್ಲಿ ಎಲ್ಲವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ನಗರಠಾಣೆ ಪಿಎಸ್‌ಐ ಸತೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ವಿದ್ಯಾರ್ಥಿಗಳಾದ ಮಹೇಂದ್ರ, ಪ್ರಕಾಶ್, ಕಾರ್ತಿಕ್, ಸುಧಾಕರ, ಅಶೋಕ್, ಶೇಖರ್, ಅಫ್ನನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT