ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ

₹2.30 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
Last Updated 19 ಜನವರಿ 2020, 14:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆಯಿಂದ ಕೈಗಾರಿಕೆಗಳ ಸ್ಥಾಪನೆಗೆ ಹಿನ್ನಡೆಯಾಗಿದೆ. ಎಚ್‌.ಎನ್.ವ್ಯಾಲಿ ನೀರು ಕೆರೆಗಳಿಗೆ ಹರಿಯುತ್ತಿದ್ದಂತೆ ಕೈಗಾರಿಕೆಗಳ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ದಿಬ್ಬೂರು ಗ್ರಾಮದಲ್ಲಿ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಕುರಿತು ಈಗಾಗಲೇ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಜಿಲ್ಲೆಯ ಕೈಗಾರಿಕೆಗಳ ಸ್ಥಾಪನೆಗೆ ಸ್ಪಂದನೆ ಸಿಗಲಿದೆ. ಕ್ಷೇತ್ರದಲ್ಲಿ ಸರ್ಕಾರಿ ಜಮೀನು ಪತ್ತೆ ಮಾಡಿ ಕನಿಷ್ಠ 200 ಎಕರೆಯಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತದೆ. ಫೆಬ್ರುವರಿ ಒಳಗೆ ಕಂದವಾರ ಕೆರೆಗೆ ಎಚ್.ಎನ್.ವ್ಯಾಲಿ ನೀರು ಬರಲಿದೆ’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ ಈವರೆಗೆ ಸುಮಾರು 200 ಕಿ.ಮೀ ರಸ್ತೆಯನ್ನು ಅಭಿವೃದ್ದಿಪಡಿಸಲಾಗಿದೆ. ಇನ್ನೂ ಶೇ20 ರಿಂದ 30 ರಷ್ಟು ರಸ್ತೆ ಕಾಮಗಾರಿಗಳು ಬಾಕಿ ಇವೆ. ಪ್ರತಿ ಕಿ.ಮೀ ₹1 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಮಾದರಿಯಲ್ಲಿ ಗುಣಮಟ್ಟದ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮಾಡಬೇಕಾದ ಕಾರ್ಯಗಳೂ ಸಾಕಷ್ಟಿವೆ. ಮುಂದಿನ ಮೂರುವರೆ ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ಜನರ ವಿಶ್ವಾಸ ಉಳಿಸಿಕೊಳ್ಳುತ್ತೇನೆ’ ಎಂದರು.

‘ಮುಖ್ಯವಾಗಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ಕೊಡಲಾಗಿದೆ. ಈಗಾಗಲೇ ಕೋಲಾರಕ್ಕೆ ಕೆ.ಸಿ ವ್ಯಾಲಿ ಯೋಜನೆಯಿಂದ ನೀರು ಹರಿದು ಆ ಭಾಗದ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಪ್ರತಿ ಕೆರೆಯನ್ನು ತುಂಬಿಸುವ ಕೆಲಸ ಮಾಡಲಾಗಿದೆ. ಅದೇ ರೀತಿ ಜಿಲ್ಲೆ ಎಲ್ಲ ಕೆರೆಗಳಿಗೆ ಎಚ್‌.ಎನ್ ವ್ಯಾಲಿ ನೀರು ಹರಿಸಲಾಗುವುದು. ಕಂದವಾರ ಕೆರೆಗೆ ನೀರು ಹರಿಯುವ ಸಂದರ್ಭದಲ್ಲಿ ಕೆರೆಯ ಬಳಿ ಎರಡು ದಿನ ಜಲಜಾತ್ರೆ ಹಾಗೂ ಜನಪದ ಜಾತ್ರೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ’ ಎಂದು ಹೇಳಿದರು.

‘ದಿಬ್ಬೂರಿನಲ್ಲಿ ಕೆಲವರು ರಾಜಕೀಯ ಒಣ ಪ್ರತಿಷ್ಠೆ ಪ್ರದರ್ಶಿಸುತ್ತಿದ್ದಾರೆ. ಅದು ಸರಿಯಲ್ಲ. ರಾಜಕಾರಣ ಚುನಾವಣೆಗೆ ಮುಗಿಯಬೇಕು. ಆದರೆ ಕೆಲವರು ದಿನ 24 ಗಂಟೆ ಕಾಲ ರಾಜಕಾರಣ ಮಾಡಲು ಹೊರಟಿದ್ದಾರೆ. ದೇವಾಲಯದ ಮುಂದೆ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಸರಿಯಲ್ಲ. ಎಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು ಎಂಬ ಪ್ರಜ್ಞೆ ಅವರಿಗೆ ಬೇಡವೆ? ರಾಜಕೀಯ ಒಣ ಪ್ರತಿಷ್ಠೆ ಪ್ರದರ್ಶಿಸುವರ ಬಗ್ಗೆ ನಾವು ಎಚ್ಚರಿಕೆ ವಹಿಸಿ ಮುಂದಿನ ಮೂರು ವರ್ಷದಲ್ಲಿ ಅವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಎಂಜಿಆರ್‌ವೈ ಯೋಜನೆಯಡಿ ₹1.40 ಕೋಟಿ ವೆಚ್ಚದಲ್ಲಿ ರಾಷ್ಟೀಯ ಹೆದ್ದಾರಿ 7 ರಿಂದ ಅಬ್ಲೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡವಿಗೊಲ್ಲವಾರಹಳ್ಳಿ ಮತ್ತು ₹90 ಲಕ್ಷ ವೆಚ್ಚದ ದಿಬ್ಬೂರು–-ಅಜ್ಜಕದಿರೇನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ದಿಬ್ಬೂರು ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ನಾರಾಯಣಸ್ವಾಮಿ, ನಾಗೇಶ್, ಮರುಳಕುಂಟೆ ಕೃಷ್ಣಮೂರ್ತಿ, ಮೋಹನ್, ಪ್ರಸಾದ್, ರಾಮಪ್ಪ, ವೆಂಕಟನಾರಾಯಣಪ್ಪ, ಕೃಷ್ಣಾರೆಡ್ಡಿ, ಗರಿಗರೆಡ್ಡಿ, ಮಂಚನಬಲೆ ಶ್ರೀ‘ರ್, ಸಿ.ಎಸ್.ಎನ್ ರಮೇಶ್, ಕೇಶವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT