ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜೋರಾಯಿತು ಮುಂಗಾರು ಚಟುವಟಿಕೆ

ಇಲ್ಲಿಯವರೆಗೆ 1,043 ಹೆಕ್ಟೇರ್‌ನಲ್ಲಿ ಬಿತ್ತನೆ: ಡೀಸೆಲ್ ಬೆಲೆ ಹೆಚ್ಚಳವೂ ಬೀರಿದೆ ಪರಿಣಾಮ
Last Updated 21 ಜೂನ್ 2021, 4:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ಈ ಪರಿಣಾಮ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಗೊಬ್ಬರಕ್ಕಾಗಿ ರೈತರು ಅಂಗಡಿಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳ ಮುಂದೆ ನಿಲ್ಲುತ್ತಿದ್ದಾರೆ. ಈ ಎಲ್ಲದರ ನಡುವೆ ಡೀಸೆಲ್ ಬೆಲೆ ಹೆಚ್ಚಳ ರೈತರಿಗೆ ಮುಂಗಾರು ಕೃಷಿ ಚಟುವಟಿಕೆಯನ್ನು ಬಿಸಿ ಆಗಿಸಿದೆ.‌‌

ಅಲ್ಲದೆ ಜಿಲ್ಲೆಯಲ್ಲಿ ರಾಗಿ ಮಾರಾಟ ಮಾಡಿರುವ 2,400 ರೈತರಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಈ ಹಣ ಬಿಡುಗಡೆಯಾಗದಿರುವುದು ಕೆಲವು ರೈತರು ಮುಂಗಾರು ಚಟುವಟಿಕೆಗಳನ್ನು ಕೈಗೊಳ್ಳಲು ಅಡ್ಡಿಯಾಗಿದೆ. ಲಾಕ್‌ಡೌನ್ ನಿಯಮಗಳು ಸಡಿಲವಾಗುತ್ತಿರುವ ಪರಿಣಾಮ ಮುಂಗಾರು ಚಟುವಟಿಕೆಗಳು ಮತ್ತಷ್ಟು ಸುಗಮವಾಗುತ್ತಿವೆ.

ಕಳೆದ ವರ್ಷಕ್ಕಿಂತ ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆಗೆ ಗುರಿಯನ್ನು ಐದು ಸಾವಿರ ಹೆಕ್ಟೇರ್‌ನಲ್ಲಿ ಹೆಚ್ಚುವರಿ ನಿಗದಿಗೊಳಿಸಲಾಗಿದೆ. ಕಳೆದ ವರ್ಷ 1.40 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಈ ಬಾರಿ 1.45 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಇದೆ. ಲಾಕ್‌ಡೌನ್, ಕೊರೊನಾ ಕಾರಣಕ್ಕೆ ನಗರ ಪ್ರದೇಶಗಳಲ್ಲಿದ್ದ ಜನರು ಹಳ್ಳಿಗಳಿಗೆ ಮರಳಿದ್ದಾರೆ. ಕೃಷಿ ಅವಲಂಬಿಸುತ್ತಿದ್ದಾರೆ. ಈ ಕಾರಣದಿಂದ ಗುರಿಯನ್ನು ಹೆಚ್ಚಿಸಲಾಗಿದೆ ಎನ್ನುತ್ತವೆ ಜಿಲ್ಲಾ ಕೃಷಿ ಇಲಾಖೆ ಮೂಲಗಳು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,043 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಹೈಬ್ರಿಡ್ ಮುಸುಕಿನ ಜೋಳ 184 ಹೆಕ್ಟೇರ್, ಮೇವಿನ ಜೋಳ 40, ರಾಗಿ 24, ಪಾಪ್ ಕಾರ್ನ್ 56, ಜೋಳ 3, ತೊಗರಿ 239, ನೆಲಗಡಲೆ 497 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಕಳೆದ ವರ್ಷಕ್ಕೆ ಈ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಬಿತ್ತನೆ ಆಗಿದೆ.

ಈಗಾಗಲೇ ರೈತರು ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಗೆ ಆ ಮಳಿಗೆಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಜಿಲ್ಲೆಯ ಪ್ರಸಕ್ತ ಮುಂಗಾರು ಬೆಳೆಗಳಿಗೆ 29,000 ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. ಸದ್ಯ 5,530.13 ಟನ್ ರಸಗೊಬ್ಬರ ಲಭ್ಯವಿದೆ. ಡಿಎಪಿ ಗೊಬ್ಬರಕ್ಕಾಗಿ ರೈತರು ಸಹಕಾರಿ ಸಂಘಗಳು, ಗೊಬ್ಬರ ಮಾರಾಟ ಮಳಿಗೆಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳು ಕೃಷಿ ಪರಿಕರ ಮಾರಾಟಗಾರರ ಜತೆ ‌ಸಭೆಗಳನ್ನು ಸಹ ನಡೆಸಿದ್ದಾರೆ.

ಡೀಸೆಲ್ ಬೆಲೆ ಬಿಸಿ: ಈ ಹಿಂದಿನ ರೀತಿಯಲ್ಲಿ ಎತ್ತುಗಳಿಂದ ಜಮೀನು ಉಳುಮೆ ಮಾಡುವವರ ಮತ್ತು ಮಾಡಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. ಟ್ರಾಕ್ಟರ್‌ಗಳಲ್ಲಿಯೇ ಹೆಚ್ಚು ಉಳುಮೆ ನಡೆಯುತ್ತಿದೆ. ಆದರೆ ಡೀಸೆಲ್ ಬೆಲೆ ಹೆಚ್ಚಳ ರೈತರಿಗೂ ಹೊರೆಯಾಗಿದೆ. ಸ್ವಂತ ಟ್ರಾಕ್ಟರ್‌ಗಳನ್ನು ಹೊಂದಿರುವ ರೈತರು ಸಹ ಡೀಸೆಲ್ ಬೆಲೆ ಹೆಚ್ಚಳದಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚು ವೆಚ್ಚವಾಗುತ್ತಿದೆ ಎಂದು ಬೇಸರದಿಂದ ನುಡಿಯುವರು.

ಕಳೆದ ವರ್ಷ ಜಿಲ್ಲೆಯಲ್ಲಿ ಸಾಮಾನ್ಯ ಮಳೆಯಾಗಿದ್ದಾಗಲೇ ದಾಖಲೆಯ ಪ್ರಮಾಣದಲ್ಲಿ ರಾಗಿ ಬೆಳೆಯಲಾಗಿತ್ತು. ಈ ಬಾರಿ ಉತ್ತಮ ಮಳೆ ಆಗುತ್ತಿದೆ. ಈ ಕಾರಣದಿಂದ ಫಸಲೂ ಸಹ ಉತ್ತಮವಾಗಿ ದೊರೆಯುತ್ತದೆ ಎನ್ನುವ ಆಶಾಭಾವ ರೈತರಲ್ಲಿದೆ.

ಚಿಂತಾಮಣಿ: ಮುಂಗಾರು ತಾಲ್ಲೂಕಿನ ರೈತರಲ್ಲಿ ಆಶಾಭಾವ ಮೂಡಿಸಿದೆ. ಅಲ್ಲಲ್ಲಿ ಮಳೆ ಆಗುತ್ತಿದೆ. ಲಾಕ್‌ಡೌನ್ ನಡುವೆಯೂ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಮುಂಗಾರು ಹಂಗಾಮಿಗಾಗಿ ಭೂಮಿ ಹದಗೊಳಿಸುತ್ತಿದ್ದಾರೆ. ಕೆಲವು ಕಡೆ ಬಿತ್ತನೆಯೂ ನಡೆಯುತ್ತಿದೆ.

ಕೃಷಿ ಇಲಾಖೆಯು ಮುಂಗಾರು ಹಂಗಾಮಿಗೆ 30,858 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ.

ತಾಲ್ಲೂಕಿನಲ್ಲಿ ರಾಗಿ, ಶೇಂಗಾ, ತೊಗರಿ, ಪ್ರಮುಖ ಬೆಳೆಗಳಾಗಿವೆ. ಮಳೆ ಮತ್ತು ನೀರಾವರಿ ಆಶ್ರಯದಲ್ಲಿ 1,340 ಹೆಕ್ಟೇರ್ ರಾಗಿ ಸೇರಿದಂತೆ 18,278 ಧಾನ್ಯ ಬೆಳೆಗಳು, 1,500 ಹೆಕ್ಟೇರ್ ತೊಗರಿ ಸೇರಿ 3,210 ಬೇಳೆಕಾಳು, 9,300 ಹೆಕ್ಟೇರ್ ಶೇಂಗಾ ಹಾಗೂ ಇತರೆ ಬೆಳೆಗಳು ಸೇರಿ ಒಟ್ಟು 30,858 ಹೆಕ್ಟೇರ್ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ಇದುವರೆಗೆ ರಾಗಿ 300 ಹೆಕ್ಟೇರ್, ತೊಗರಿ 100 ಹೆಕ್ಟೇರ್, ನೆಲಗಡಲೆ 250 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ತಾಲ್ಲೂಕಿನಲ್ಲಿ ಜನವರಿಯಿಂದ ಜೂ.16 ವರೆಗೆ ವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವುದನ್ನು ಹವಾಮಾನ ಇಲಾಖೆಯ ಅಂಕಿಅಂಶಗಳು ಸಾಬೀತುಪಡಿಸಿವೆ. ಜೂ.16 ರವರೆಗೆ 46.1 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವವಾಗಿ 88.2 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಜೂ.16 ರವರೆಗೆ 159.9 ಮಿ.ಮೀ ಮಳೆಯಾಗಬೇಕಿದ್ದು, 250 ಮಿ.ಮೀ ಮಳೆಯಾಗಿದೆ.

ಕೃಷಿ ಇಲಾಖೆಯು ರಾಗಿ, ಶೇಂಗಾ, ತೊಗರಿ, ಮುಸುಕಿನ ಜೋಳ ಸೇರಿದಂತೆ 1,348.59 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಿದೆ. ಇದುವರೆಗೆ ಒಟ್ಟು 784.45 ಕ್ವಿಂಟಲ್ ಮಂಜೂರಾಗಿದೆ. ಅದರಲ್ಲಿ 340.22 ಕ್ವಿಂಟಲ್ ವಿತರಣೆ ಆಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮುಂಗಾರು ಹಂಗಾಮಿಗೆ ಅಗತ್ಯವಾದ ರಸಗೊಬ್ಬರ, ಬಿತ್ತನೆ ಬೀಜವನ್ನು ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ವಿತರಣೆ ಮಾಡಲಾಗುತ್ತಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆ ಇಲ್ಲ ಎಂದರು.

ಶೇಂಗಾ ಬಿತ್ತನೆಗೆ ಸಿದ್ಧತೆ

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿದೆ. ಶೇಂಗಾ ಸೇರಿದಂತೆ ದವಸಧಾನ್ಯಗಳ ಬಿತ್ತನೆಗೆ ರೈತರು ಭೂಮಿ ಹದ ಮಾಡಿದ್ದಾರೆ. ಇದೀಗ ರೈತರು ಶೇಂಗಾ ಬಿತ್ತನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ 29,735 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ. ಈಗಾಗಲೇ 90 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಇದರಲ್ಲಿ ನೀರಾವರಿ ಜಮೀನಿನಲ್ಲಿ 36, ಖುಷ್ಕಿಯಲ್ಲಿ 54 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ.

ಏಕದಳ ಧಾನ್ಯಗಳಾದ ಭತ್ತ, ರಾಗಿ, ಹೈಬ್ರಿಡ್ ಮುಸಕಿನ ಜೋಳ, ಪಾಪ್ ಕಾರನ್, ಜೋಳ, ತೃಣಧಾನ್ಯಗಳನ್ನು 14,026 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇದೆ. 50 ಹೆಕ್ಟೇರ್ ಬಿತ್ತನೆ ಆಗಿದೆ. ಎಂಟು ಹೆಕ್ಟೇರ್‌ನಲ್ಲಿ ತೊಗರಿ, ಹುರುಳಿ, ಅವರೆ, ಅಲಸಂದೆ, 32 ಹೆಕ್ಟೇರ್‌ನಲ್ಲಿನೆಲಗಡಲೆ, ಸೂರ್ಯಕಾಂತಿ, ಸಾಸಿವೆ, ಎಳ್ಳು, ಹುಚ್ಚೆಳ್ಳು, ಹರಳು ಬಿತ್ತನೆಯಾಗಿದೆ.

ತಾಲ್ಲೂಕಿನಲ್ಲಿ 24 ಬಿತ್ತನೆ ಬೀಜ ವಿತರಕರು, 32 ರಸಗೊಬ್ಬರ ವಿತರಕರು, 38 ಕೀಟನಾಶಕ ವಿತರಕರು ಇದ್ದಾರೆ. 5 ರೈತ ಸಂಪರ್ಕ ಕೇಂದ್ರಗಳಿವೆ. ಇವುಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಬಿತ್ತನೆಬೀಜಗಳು, ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದೆ. ಇದೀಗ ಬೆಳೆಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರು ಬೆಳೆ ವಿಮೆ ಮಾಡಿಸಬೇಕು. ರಾಗಿ ಬೆಳೆಯಲ್ಲಿ ಅವರೆ ಮತ್ತು ತೊಗರಿ, ಶೇಂಗಾ ಮತ್ತು ಮುಸುಕಿನ ಜೋಳದಲ್ಲಿ ತೊಗರಿ ಬೆಳೆಯನ್ನು ಸಾಲು ಪದ್ಧತಿಯಲ್ಲಿ ಮಿಶ್ರ ಬೆಳೆಗಳಾಗಿ ಬಿತ್ತಿದರೆ ಲಾಭವಿದೆ. ಮಣ್ಣಿನ ಫಲವತ್ತತೆ ನಿರ್ವಹಣೆ ಆಗುತ್ತದೆ. ಬಿತ್ತನೆ ಮುನ್ನ ಬಿತ್ತನೆ ಬೀಜಗಳಿಗೆ ಬೀಜೋಪಚಾರ ಮಾಡಬೇಕು. ಇದರಿಂದ ರೋಗಬಾಧೆ ತಡೆಯಬಹುದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್ ತಿಳಿಸಿದ್ದಾರೆ.

ಶಿಡ್ಲಘಟ್ಟ: ಮುಂಬರುವ ಅಮಾವಾಸ್ಯೆಯಿಂದ ಆಷಾಢ ಪ್ರಾರಂಭವಾಗುತ್ತದೆ. ಆದರೆ ಈಗಲೇ ಆಷಾಢದ ಗಾಳಿ ಪ್ರಾರಂಭವಾಗಿದೆ. ಮುಂಗಾರಿನ ಬಿತ್ತನೆಗೆ ಸಿದ್ಧತೆ ನಡೆಸಿರುವ ಮಳೆಯನ್ನು ಎದುರು ನೋಡುತ್ತಿರುವ ರೈತರಿಗೆ ಗಾಳಿಯು ನಿರಾಸೆ ಮೂಡಿಸಿದೆ. ಕೆಲ ರೈತರು ಹೊಲವನ್ನು ಉಳುಮೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಮಳೆಗೆ ಎದುರು ನೋಡುತ್ತಿದ್ದಾರೆ.

ಡಿಎಪಿ ಗೊಬ್ಬರಕ್ಕೆ ತಾಲ್ಲೂಕಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಲಾರಿ ಲೋಡ್ ಬರುತ್ತಿದ್ದಂತೆಯೇ ಖಾಲಿಯಾಗುತ್ತಿದೆ. ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದಂತೆಯೇ ಡಿಎಪಿ ಗೊಬ್ಬರ ಬೇಕೇ ಬೇಕು. ಶೇ 46ರಷ್ಟು ಪಾಸ್ಪರಸ್ ಪೋಷಕಾಂಶವಿರುವ ಡಿಎಪಿ ಎಲ್ಲ ಬೆಳೆಗಳಿಗೂ ಸೂಕ್ತ ಎಂಬ ನಂಬಿಕೆ ರೈತರದ್ದು. ಸಬ್ಸಿಡಿಯಿಂದಾಗಿ ಡಿಎಪಿ ಗೊಬ್ಬರದ ಬೆಲೆ ಚೀಲವೊಂದಕ್ಕೆ ₹ 1,900 ರಿಂದ 1,200ಕ್ಕೆ ಇಳಿದಿದೆ. ಡಿಎಪಿ ಸಿಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಬಹುತೇಕ ರೈತರು ಭೂಮಿ ಉಳುಮೆ ಮಾಡಿಟ್ಟುಕೊಂಡಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳನ್ನು ಕೇಳಿದಾಗ ಬಿತ್ತನೆ ಬೀಜಗಳ ದಾಸ್ತಾನು ಸಮರ್ಪಕವಾಗಿದೆ ಎನ್ನುತ್ತಿದ್ದಾರೆ. ಬಿತ್ತನೆ ಬೀಜ ಮತ್ತು ಗೊಬ್ಬರಗಳಿಗೆ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎನ್ನುವರು ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಒತ್ತಾಯಿಸಿದರು.

ರಸಗೊಬ್ಬರ ಮಾರುವ ಅಂಗಡಿಗಳ ಮೇಲೆ ಬೆಲೆ ತಿಳಿಸುವ ಫಲಕವನ್ನು ಕಡ್ಡಾಯವಾಗಿ ಹಾಕಬೇಕು. ಡಿಎಪಿ ಗೊಬ್ಬರದ ಬೆಲೆ ₹ 700 ಕಡಿಮೆ ಆಗಿದೆ. ಆ ಸಬ್ಸಿಡಿ ಹಣವನ್ನು ಕಂಪನಿಗಳವರಿಗೆ ಸರ್ಕಾರ ನೀಡದಿರುವುದರಿಂದ ಅವರು ಗೊಬ್ಬರವನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎನ್ನಲಾಗಿದೆ. ಕೃಷಿ ಇಲಾಖೆಯ ಸಹಾಯ ನಿರ್ದೇಶಕರನ್ನು ಕೇಳಿದರೆ ಯೂರಿಾ ನಮ್ಮ ಜಿಲ್ಲೆಯಲ್ಲಿ 430 ಟನ್ ದಾಸ್ತಾನಿದೆ ಎನ್ನುತ್ತರೆ. ನಮ್ಮಲ್ಲಿ ಈಗ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಇಲ್ಲವಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳುವರು.

- ಡಿ.ಎಂ.ಕುರ್ಕೆ ಪ್ರಶಾಂತ್,ಡಿ.ಜಿ.ಮಲ್ಲಿಕಾರ್ಜುನ್, ಪಿ.ಎಸ್.ರಾಜೇಶ್, ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT