ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐ ವಿವರಣೆಗೆ ಕಾಯುತ್ತಿರುವ ಎಸ್ಪಿ

ಟೈರ್‌ ಕಳ್ಳತನ ಪ್ರಕರಣದಲ್ಲಿ ಕರ್ತವ್ಯಲೋಪ ಪ್ರಕರಣ: ಮೇ 12ರ ನಂತರ ಶಿಸ್ತುಕ್ರಮ ಜರುಗಿಸುವ ಸಾಧ್ಯತೆ
Last Updated 9 ಮೇ 2020, 2:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಟೈರ್‌ ಕಳ್ಳರ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಪ್ರಕರಣ ಕುರಿತಂತೆ ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಚೇತನ್‌ಗೌಡ ಸೇರಿದಂತೆ ನಾಲ್ವರು ಸಿಬ್ಬಂದಿಗೆ ದೋಷಾರೋಪಣ ಪತ್ರವನ್ನು (ಚಾರ್ಜ್ ಮೆಮೊ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಜಾರಿಗೊಳಿಸಿದ್ದಾರೆ. ಈ ನೋಟಿಸ್‌ಗೆ ಉತ್ತರ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಟೈರ್‌ ಕಳ್ಳರ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 5ರಂದು ಡಿವೈಎಸ್‌ಪಿ ತನಿಖೆ ನಡೆಸಿ ನಾಲ್ಕು ಸಿಬ್ಬಂದಿ ವಿರುದ್ಧ ವರದಿ ನೀಡಿದ್ದಾರೆ’ ಎಂದು ತಿಳಿಸಿದರು.

‘ಅದೇ ದಿನ ಗ್ರಾಮಾಂತರ ಠಾಣೆ ಎಸ್‌ಐ ಚೇತನ್‌ ಗೌಡ ಸೇರಿದಂತೆ ನಾಲ್ವರು ಸಿಬ್ಬಂದಿಗೆ ಚಾರ್ಜ್ ಮೆಮೊ ನೀಡಿದ್ದೇನೆ. ಅದಕ್ಕೆ ಉತ್ತರಿಸಲು 7 ದಿನ ಕಾಲಾವಕಾಶವಿರುತ್ತದೆ. ಉತ್ತರ ಪಡೆದ ಬಳಿಕ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಐಜಿಪಿಗೆ ದೂರು:ಈ ನಡುವೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ಪಿ.ಎನ್.ಮುನೇಗೌಡ, ಅಡ್ಡಗಲ್ ಶ್ರೀಧರ್, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್‌ ಸೇರಿದಂತೆ ಕೆಲವರು ಗ್ರಾಮಾಂತರ ಠಾಣೆ ಎಸ್‌ಐ ಚೇತನ್ ಗೌಡ ಮತ್ತು ಕಾನ್‌ಸ್ಟೆಬಲ್‌ಗಳಾದ ರಮಣಾ ರೆಡ್ಡಿ, ಹರೀಶ್‌ ವಿರುದ್ಧ ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ ಚಂದ್ರ ಅವರಿಗೆ ದೂರು ನೀಡಿದ್ದಾರೆ. ಆ ದೂರಿನ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸೂಲಕುಂಟೆ ಗ್ರಾಮದ ರೈತ ಪ್ರಕಾಶ್ ಎಂಬುವವರ ಮರಳು ಸಾಗಣೆ ಟ್ರಾಕ್ಟರ್ ಜಪ್ತಿಮಾಡಿ, ನಿರ್ಜನ ಪ್ರದೇಶದಲ್ಲಿ ಕೂಡಿ ಹಾಕಿ ಲಕ್ಷಾಂತರ ರೂಪಾಯಿ ಲಂಚ ಪಡೆದು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಸರ್ಕಲ್‌ ಇನ್‌ಸ್ಪೆಕ್ಟರ್ ಪ್ರಕರಣ ದಾಖಲಿಸಿ, ಡಿವೈಎಸ್‌ಪಿಗೆ ವರದಿ ನೀಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ವಾಹನಗಳಲ್ಲಿ ಜಪ್ತಿ ಮಾಡಿದ ಮರಳನ್ನು ನಗರ ಠಾಣೆ ಆವರಣದಲ್ಲಿ ಸಂಗ್ರಹಿಸಿ ಖಾಸಗಿಯವರಿಗೆ ಮಾರಿ ಹಣ ಪಡೆದಿದ್ದಾರೆ. ತಾಲ್ಲೂಕಿನ ಮೋಟ್ಲೂರು ಗ್ರಾಮದಲ್ಲಿ ಮಧು ಎಂಬುವರನ್ನು ಬೆದರಿಸಿ ಅವರಿಂದ 25 ನಾಟಿ ಕೋಳಿ ತೆಗೆದುಕೊಂಡು ಬಂದಿದ್ದಾರೆ’ ಎಂದು ದೂರಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಕೊರೊನಾ ಸೋಂಕು ಹರಡಿದ ಬಳಿಕ ಹಳ್ಳಿಗಳಲ್ಲಿ ಚಿಲ್ಲರೆ ಅಂಗಡಿಗಳ ಮೇಲೆ ದಾಳಿಮಾಡಿ ನಗದು ಹಣ, ಲಕ್ಷಾಂತರ ಮೌಲ್ಯದ ಸಿಗರೇಟ್‌, ಗುಟ್ಕಾ ವಶಪಡಿಸಿಕೊಂಡರೂ ಪ್ರಕರಣ ದಾಖಲಿಸಿಲ್ಲ’ ಎಂದು ದೂರಿನಲ್ಲಿ ಹೇಳಲಾಗಿದೆ.

‘ಈ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಬೇಕು. ಜತೆಗೆ ಈ ಸಿಬ್ಬಂದಿ ಇಲಾಖೆ ಸೇರುವ ಮೊದಲು ಮತ್ತು ಈಗ ಹೊಂದಿರುವ ಆಸ್ತಿ, ಸ್ನೇಹಿತರ ಹೆಸರಿನಲ್ಲಿ ಹೊಂದಿರುವ ಬೇನಾಮಿ ಆಸ್ತಿಗಳ ಬಗ್ಗೆ ತನಿಖೆ ಮಾಡಿಸಿ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಲಾಗಿದೆ.

***

ಟೈರ್ ಕಳ್ಳತನ ಪ್ರಕರಣ ಮೊದಲು ಹೊರಗೆ ತಂದದ್ದೇ ನಾವು. ಆರೋಪಿಗಳನ್ನು ರಕ್ಷಣೆ ಮಾಡುವ ಮಾತೇ ಇಲ್ಲ
-ಜಿ.ಕೆ.ಮಿಥುನ್ ಕುಮಾರ್, ಎಸ್ಪಿ

***
‘ಎಸ್‌ಐ ಸಂಬಂಧಿಯಲ್ಲ’

‘ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಚೇತನ್‌ಗೌಡ ನನ್ನ ಸಂಬಂಧಿಯಲ್ಲ. ಜತೆಗೆ, ಕಾನ್‌ಸ್ಟೆಬಲ್‌ಗಳಾದ ರಮಣಾ ರೆಡ್ಡಿ, ಟಿ.ಎ.ಹರೀಶ್‌, ಅಂಬರೀಶ್‌ ವರ್ಗಾವಣೆಗೂ ಟೈರ್‌ ಕಳ್ಳರನ್ನು ಬಂಧಿಸಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದೆ ಬಿಟ್ಟು ಕಳುಹಿಸಿದ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಒಂದು ವರ್ಷದ ಹಿಂದಿನ ಎರಡ್ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವರ್ಗಾವಣೆ ಮಾಡಲಾಗಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದರು.

ಮತ್ತೆ ದೂರುದಾರರ ವಿಚಾರಣೆ

‘ಗ್ರಾಮಾಂತರ ಠಾಣೆಗೆ ಈ ಹಿಂದೆ ಟೈರ್‌ ಕಳ್ಳತನ ಪ್ರಕರಣದಲ್ಲಿ ದೂರು ನೀಡಿದವರು, ಲಾರಿ ಮಾಲೀಕರನ್ನು ಮತ್ತೆ ವಿಚಾರಣೆ ನಡೆಸುತ್ತೇವೆ. ಅವರು ದೂರು ನೀಡಲು ಬಯಸಿದರೆ, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ. ಇಡೀ ಪ್ರಕರಣದ ವಿಚಾರಣೆ ಬಳಿಕ ನಾವು ಎಲ್ಲ ಮಾಹಿತಿ ಬಹಿರಂಗಪಡಿಸುತ್ತೇವೆ’ ಎಂದು ಎಸ್ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT