ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಂಕ್‌ ಲೂಟಿಕೋರರಿಗೆ ಮೋದಿ ಬೆಂಬಲ’

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಂಕುಗಳಲ್ಲಿ ಸಾರ್ವಜನಿಕರು ಹೂಡಿರುವ ಹಣವನ್ನು ಬಂಡವಾಳಶಾಹಿಗಳು ಲೂಟಿಮಾಡಲು ಮತ್ತು ಅಂತಹವರು ದೇಶದಿಂದ ಪರಾರಿಯಾಗಲು ಪ್ರಧಾನಿ ನರೇಂದ್ರ ಮೋದಿ ಸಹಕರಿಸುತ್ತಿದ್ದಾರೆ’ ಎಂದು ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಣದೀಪ್‌ ಸಿಂಗ್‌ ಸುರ್ಜೆವಾಲ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಬ್ಯಾಂಕ್‌ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದೇಶದಾದ್ಯಂತ ವಿವಿಧೆಡೆ 12 ಬ್ಯಾಂಕುಗಳಲ್ಲಿ ₹ 61,036 ಕೋಟಿ ಮೊತ್ತದಷ್ಟು ಶ್ರೀಸಾಮಾನ್ಯರ ಹಣ ಲೂಟಿಯಾಗಿದೆ. ಸಾಂಸ್ಥಿಕ ಸಂಸ್ಥೆಗಳ ಸಮಗ್ರ ನಿಯಂತ್ರಣ ಪ್ರಾಧಿಕಾರಗಳು ದುರ್ಬಲಗೊಂಡಿವೆ’ ಎಂದು ದೂರಿದರು.

‘ಬ್ಯಾಂಕುಗಳಿಗೆ ವಂಚಿಸುತ್ತಿರುವವರ ಬಗ್ಗೆ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ನಿಗಾ ವಹಿಸದೆ ಮೌನವಾಗಿದ್ದಾರೆ’ ಎಂದೂ ಅವರು ಟೀಕಿಸಿದರು.

ಶಾ ಕಾಲಿಡುವುದು ಬೇಡ: ‘ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಅವರು ಪದೇ ಪದೇ ಕರ್ನಾಟಕಕ್ಕೆ ಬಂದು ಇಲ್ಲಿ ವಾತಾವರಣ ಕೆಡಿಸುತ್ತಿದ್ದಾರೆ. ಆದ್ದರಿಂದ ಕರ್ನಾಟಕಕ್ಕೆ ಬರದಂತೆ ಆಯೋಗವು ಅವರನ್ನು ತಡೆಯಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಆಗ್ರಹಿಸಿದರು.

‘ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತ ರಾಜು ಎಂಬ ಮೃತ ಯುವಕನ ಕುಟುಂಬಕ್ಕೆ ಅಮಿತ್ ಶಾ ಅವರು ಶುಕ್ರವಾರ ₹ 5 ಲಕ್ಷ ನೀಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಅವರು ಈ ರೀತಿ ನಡೆದುಕೊಂಡಿರುವುದು ಕಾನೂನಿಗೆ ವಿರುದ್ಧ. ಈ ಕುರಿತು ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಇಂದೇ (ಶುಕ್ರವಾರ) ದೂರು ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT