ಭಾನುವಾರ, ಸೆಪ್ಟೆಂಬರ್ 19, 2021
29 °C
50 ಎಕರೆ ಜಮೀನು ಪರಿಶೀಲನೆ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಿಗೆ ವರದಿ

ಚಿಕ್ಕಬಳ್ಳಾಪುರ: ಅರಿಕೆರೆಯಲ್ಲಿ ತಲೆ ಎತ್ತಲಿದೆ ಕ್ರೀಡಾಗ್ರಾಮ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಮತ್ತು ರಾಜ್ಯ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಕ್ರೀಡೆಯಲ್ಲಿ ಗುರುತು ಪಡೆಯುವಂತೆ ‌ತಾಲ್ಲೂಕಿನ ಅರಿಕೆರೆ ಗ್ರಾಮದ ಬಳಿ ಕ್ರೀಡಾಗ್ರಾಮ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿವೆ.

ಈ ಕ್ರೀಡಾಗ್ರಾಮದ ಹೆಜ್ಜೆ ಇನ್ನು ಆರಂಭಿಕ ಹಂತದಲ್ಲಿದೆ. ಭವಿಷ್ಯದಲ್ಲಿ ಗ್ರಾಮ ತಲೆ ಎತ್ತುವುದರಿಂದ ಕ್ರೀಡಾಪಟುಗಳಿಗೆ ಹೆಚ್ಚಿನದಾಗಿಯೇ ಅನುಕೂಲವಾಗಲಿದೆ. ಅರಿಕೆರೆ ಗ್ರಾಮದ ಸರ್ವೆ ನಂಬರ್ 10ರಲ್ಲಿ 173.39 ಎಕರೆ ಜಮೀನಿದೆ. ಇದರಲ್ಲಿ 50 ಎಕರೆ ಜಮೀನಿನ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು (ಆಡಳಿತ) ಆದೇಶಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಟೋಟ ತರಬೇತುದಾರ ಪ್ರಭು ನೇತೃತ್ವದಲ್ಲಿ ತರಬೇತುದಾರರನ್ನು ಒಳಗೊಂಡ ತಂಡ ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದಾರೆ.

2020ರ ಸೆಪ್ಟೆಂಬರ್‌ 9ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕ್ರೀಡಾಗ್ರಾಮದ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ 50 ಎಕರೆ ಸ್ಥಳ ಗುರುತಿಸಿ ಪ್ರಸ್ತಾವ ಸಲ್ಲಿಸುವಂತೆ ಸಚಿವರು ಸಹ ಸೂಚಿಸಿದ್ದರು. ಸ್ಥಳ ಗುರುತಿಸಿ ನೀಡುವಂತೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ಅವರಿಗೆ ಕ್ರೀಡಾ ಇಲಾಖೆ ಕೋರಿತ್ತು. ತಹಶೀಲ್ದಾರರು ಅರಿಕೆರೆ ಗ್ರಾಮದ ಬಳಿ 50 ಎಕರೆ ಜಮೀನು ನೀಡುವುದಾಗಿ ತಿಳಿಸಿದ್ದರು.

ನಂತರ ಗ್ರಾಮ ಲೆಕ್ಕಾಧಿಕಾರಿ ದೀಪಾ, ಇಲಾಖೆಯ ತರಬೇತುದಾರ ಮುಸ್ತಾಕ್ ಅಹಮ್ಮದ್ ಅವರ ಜತೆ ಜಿಲ್ಲಾ ಕ್ರೀಡಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರು. ಈ ಪ್ರದೇಶವು ಕಲ್ಲುಬಂಡೆಗಳಿಂದ ಮತ್ತು ತಗ್ಗುದಿನ್ನೆಗಳಿಂದ ಆವೃತವಾಗಿದೆ. ಆಟೋಟ ತರಬೇತುದಾರ ಪ್ರಭು ಅವರು ಸ್ಥಳ ಪರಿಶೀಲಿಸಿ ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಹ ನೀಡುವರು.

ಅಂತರರಾಷ್ಟ್ರೀಯ ಅಂಕಣಗಳು: ಕ್ರೀಡಾ ಗ್ರಾಮ ಅಂದ ಅದು ಪೂರ್ಣವಾಗಿ ಕ್ರೀಡಾ ಚಟುವಟಿಕೆಗಳಿಗೇ ಮೀಸಲಾದ ಸ್ಥಳವಾಗಿರುತ್ತದೆ. ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಅಂಕಗಳು ನಿರ್ಮಾಣವಾಗಲಿವೆ. ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಸಹ ದೊರೆಯಲಿದೆ. ಕ್ರೀಡಾ ಇಲಾಖೆಯು ಅಂದುಕೊಂಡಂತೆ ಆದರೆ ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ‌ಗ್ರಾಮ ಮುಕುಟಮಣಿ ಆಗುವುದು ಖಚಿತ.

ಕ್ರೀಡಾಗ್ರಾಮ ತಲೆ ಎತ್ತುವುದು ಖಚಿತ. ಭವಿಷ್ಯದಲ್ಲಿ ಕ್ರೀಡೆಯ ಬೆಳವಣಿಗೆಯ ದೃಷ್ಟಿಯಿಂದ ಇದು ಉತ್ತಮವಾದ ಯೋಜನೆ. ಇದರಿಂದ ಜಿಲ್ಲೆಯು ಕ್ರೀಡಾಪಟುಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಕ್ರೀಡಾಗ್ರಾಮದಲ್ಲಿ ಸೌಲಭ್ಯಗಳು

ಕ್ರೀಡಾ ಅಂಕಣಗಳು; ಅಂಕಣಗಳ ಸಂಖ್ಯೆ
ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಸಿಂಥೆಟಿಕ್ ಟ್ರ್ಯಾಕ್ 400 ಮೀಟರ್‌; 2
ಒಳಾಂಗಣ ಬ್ಯಾಸ್ಕೆಟ್ ಬಾಲ್ ಅಂಕಣ; 2
ಹಾಕಿ ಅಂಕಣ; 1
ಒಳಾಂಗಣ ಈಜುಕೊಳ 50 ಮೀಟರ್; 1
ಜುಡೋ ಹಾಲ್; 1
ಟೆನ್ನಿಸ್ ಅಂಕಣ; 1
ಕುಸ್ತಿ ಅಂಕಣ; 1
ಅರ್ಚರಿ; 1
ಬಾಕ್ಸಿಂಗ್; 1
ಸೈಕ್ಲಿಂಗ್; 1
ಫೆನ್ಸಿಂಗ್;1
ರೋಯಿಂಗ್; 1 
ಶೂಟಿಂಗ್; 1
ಭಾರ ಎತ್ತುವುದು; 1

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು