ಸೋಮವಾರ, ಸೆಪ್ಟೆಂಬರ್ 20, 2021
21 °C

2 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ಕೈಮಗ್ಗದಲ್ಲಿ ನೇಯ್ದ ವೆಂಕಟರವಣ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ವಿವಿಧ ವಿನ್ಯಾಸಗಳಲ್ಲಿ ವರ್ಣರಂಜಿತವಾಗಿ ಕೈಮಗ್ಗದಿಂದ ಮಾಡಿದ ಜರಿ ಸೀರೆಯನ್ನು ನೇಯ್ಗೆ ಮಾಡಿದ ತಾಲ್ಲೂಕಿನ ಬೋಯಿಪಲ್ಲಿ ಗ್ರಾಮದ ವೆಂಕಟರವಣ ಅವರು ಜವಳಿ ಮತ್ತು ಕೈಮಗ್ಗ ಇಲಾಖೆ ನೀಡುವ 2021-22ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಲ್ಲೂಕಿನ ಬಿಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಯಿಪಲ್ಲಿ ನಿವಾಸಿ ವೆಂಕಟರವಣ ಮೂಲತಃ ಪುಲಗಲ್ ಗ್ರಾಮ ಪಂಚಾಯಿತಿಯ ಪುಲಗಂಟಿವಾರಿಪಲ್ಲಿ ಗ್ರಾಮದವರು. 8ನೇ ವರ್ಷದಲ್ಲಿ ಕೋಮಲವಾರಿಪಲ್ಲಿ ಗ್ರಾಮದ ರೈತರೊಬ್ಬರ ಮನೆಯಲ್ಲಿ ಹಸು, ಕುರಿ ಮೇಯಿಸಿ ವರ್ಷಕ್ಕೆ ₹150ಯಂತೆ  6 ವರ್ಷ ಜೀತದಾಳಾಗಿ ಕೆಲಸ ಮಾಡಿದ್ದಾರೆ. 3 ವರ್ಷ ಅರಣ್ಯ ಇಲಾಖೆಯಲ್ಲಿ ಗುಂಡಿ ಹೊಡೆಯುವ ಕೆಲಸ, 2 ವರ್ಷ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿದ್ದಾರೆ.

ಪಕ್ಕದ ಕೊತ್ತೂರು ಗ್ರಾಮದಲ್ಲಿ ಕೈಮಗ್ಗಗಳನ್ನು ಮಾಡುತ್ತಿದ್ದರು. ಮೊದಲಿಗೆ ಬಯಪ್ಪ ಎಂಬುವವರ ಬಳಿ ಕೈಮಗ್ಗ ಕಲಿಯಲು ಪ್ರಾರಂಭಿಸಿದರು. ನಂತರ ಶಿಡ್ಲಘಟ್ಟ ತಾಲ್ಲೂಕಿನ ಬೈಯಪ್ಪಹಳ್ಳಿಯಲ್ಲಿ 10 ವರ್ಷ, ವಿಜಯಪುರದ ವೆಂಕಟಾಪುರ ಗ್ರಾಮದಲ್ಲಿ 2 ವರ್ಷ ಕೈಮಗ್ಗ ಕಲಿತರು.

ಸ್ವಂತ ಕೈಮಗ್ಗ ಹಾಕಲು ಹಣದ ಸಮಸ್ಯೆ ಇತ್ತು. ಹೀಗಾಗಿ ಪರಿಚಯಸ್ಥರೊಬ್ಬರಿಂದ ಕೈ ಮಗ್ಗ ಹಾಕಿಸಿಕೊಂಡರು. 20 ವರ್ಷಗಳಿಂದ ಪ್ರತಿ ತಿಂಗಳು 3-4 ಸೀರೆಗಳನ್ನು ಕೈ ಮಗ್ಗದಿಂದ ನೇಯ್ಗೆ ಮಾಡುತ್ತಿದ್ದಾರೆ.

ಆಂಧ್ರ ಪ್ರದೇಶದ ಧರ್ಮಾವರಂನಿಂದ ರೇಷ್ಮೆ, ಜರಿ ಸೇರಿದಂತೆ ಕಚ್ಚಾ ವಸ್ತುಗಳನ್ನು ಖರೀದಿಸುತ್ತಾರೆ. ಧರ್ಮಾವರಂ ಹಾಗೂ ಬೆಂಗಳೂರಿನ ಮಾರುಕಟ್ಟೆಯಲ್ಲಿ ಸೀರೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದುವರೆಗೂ ವಿವಿಧ ವಿನ್ಯಾಸ, ಬಣ್ಣ ಬಣ್ಣದ ಹೂವುಗಳನ್ನು ನೇಯ್ಗೆ ಮಾಡಿದ 2 ಸಾವಿರ ಸೀರೆ ಮಾರಾಟ ಮಾಡಿದ್ದಾರೆ.

ಬೋಯಿಪಲ್ಲಿ ಗ್ರಾಮದ ವೆಂಕಟರವಣ ಅವರು ನೇಯ್ಗೆ ಮಾಡಿದ ಸೀರೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೈಮಗ್ಗದಲ್ಲಿ ರೇಷ್ಮೆ ಎಂಬೋಜ್ ಬ್ರೋಕೆಡ್ ಕುಟ್ಟು ಸೀರೆಯನ್ನು ನೇಯ್ಗೆ ಮಾಡಿರುವುದಕ್ಕೆ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. 

ಬೆಂಗಳೂರಿನ ವಿಕಾಸಸೌಧದಲ್ಲಿ ಆಗಸ್ಟ್ 7ರಂದು ನಡೆಯುವ ಕಾರ್ಯಕ್ರಮದಲ್ಲಿ ವೆಂಕಟರವಣ ಅವರು ಪ್ರಶಸ್ತಿ ಪಡೆಯಲಿದ್ದಾರೆ. 2019-20ನೇ ಸಾಲಿನ ರಾಷ್ಟ್ರೀಯ ಕೈ ಮಗ್ಗದ ದಿನಾಚರಣೆಯಲ್ಲಿ ಇವರ ಸಾಧನೆಗೆ ಜಿಲ್ಲಾಡಳಿತ ಸನ್ಮಾನಿಸಿತ್ತು.

ಬೋಯಿಪಲ್ಲಿ ವೆಂಕಟರವಣ ಅವರಿಗೆ ಸ್ವಂತವಾಗಿ ಕೈಮಗ್ಗ ಹಾಕಿಕೊಳ್ಳಲು ಹಣ ಇರಲಿಲ್ಲ. ಮನೆಯಲ್ಲಿ ಕಿತ್ತುತಿನ್ನುವ ಬಡತನ, ಗುಡಿಸಲುಮನೆಯಲ್ಲಿ ವಾಸವಿದ್ದಾರೆ. ಸ್ವಂತ ಪರಿಶ್ರಮದಿಂದ ಸೀರೆ ನೇಯ್ಗೆ ಮಾಡಿರುವುದಕ್ಕೆ ಪ್ರಶಸ್ತಿ ನೀಡಿರುವುದು ಗ್ರಾಮದ ಜನರಿಗೆ ಖುಷಿ ತಂದಿದೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ವೆಂಕಟರವಣರಿಗೆ ಮನೆ ಕಟ್ಟಿಸಿಕೊಡಬೇಕು. ಕೈ ಮಗ್ಗಕ್ಕೆ ಮತ್ತಷ್ಟು ಆರ್ಥಿಕ ನೆರವು ನೀಡಬೇಕು ಎಂದು ಬೋಯಿಪಲ್ಲಿ ಗ್ರಾಮದ ಚಂದ್ರಕಲಾ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು