ಬಾಗೇಪಲ್ಲಿ: ತಾಲ್ಲೂಕಿನ ದೇವರೆಡ್ಡಿಪಲ್ಲಿ ಸೋಮವಾರ ಹಾಡುಹಗಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಗೆ ನುಗ್ಗಿ, ಬೀರುವನಲ್ಲಿದ್ದ ₹1.40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರೆಡ್ಡಿಪಲ್ಲಿ ಗ್ರಾಮದ ರೈತ ನರಸಿಂಹರೆಡ್ಡಿ ಚಿನ್ನಾಭರಣ ಕಳ್ಳತನ.
ತೋಟದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹರೆಡ್ಡಿ ಅವರಿಗೆ ಇವರ ಪತ್ನಿ ಊಟ ತೆಗೆದುಕೊಂಡು ಮನೆಯಿಂದ ಹೊರ ಹೋಗಿದ್ದ ವೇಳೆ ಕಳ್ಳರು ಬೀಗ ಹೊಡೆದು ನುಗ್ಗಿದ್ದಾರೆ.
ಮನೆಯ ಬೀರುವಿನಲ್ಲಿದ್ದ ಚಿನ್ನದ ನೆಕ್ಲೆಸ್, ಓಲೆ, ಮಾಟಿ ಮತ್ತು ಬೆಲೆ ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿದ್ದಾರೆ ಎಂದು ರೈತ ನರಸಿಂಹರೆಡ್ಡಿ ದೂರು ನೀಡಿದ್ದಾರೆ.
ಬಾಗೇಪಲ್ಲಿಯ ಕ್ರೈಂ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಮುನಿರತ್ನ ಹಾಗೂ ಅಪರಾಧ ವಿಭಾಗದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ತಂಡದವರು ಪರಿಶೀಲಿಸಿದ್ದಾರೆ.