ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್‌ಗೆ ಸ್ಟಿಕರ್‌ ಅಂಟಿಸಿದ್ದೇ ಬಿಜೆಪಿ ಸಾಧನೆ: ಎಚ್‌.ಎಂ.ರೇವಣ್ಣ ಆರೋಪ

ಕೋವಿಡ್‌ 19 ಕಾಂಗ್ರೆಸ್‌ ಕಾರ್ಯಪಡೆ
Last Updated 19 ಏಪ್ರಿಲ್ 2020, 12:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ನೀಡಲಿದೆ. ಆದರೆ, ಸಂಕಷ್ಟದ ಸಮಯದಲ್ಲಿ ಬಿಜೆಪಿಯವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ‘ ಎಂದು ಕೋವಿಡ್‌ 19 ಕಾಂಗ್ರೆಸ್‌ ಕಾರ್ಯಪಡೆಯ ಬೆಂಗಳೂರು ವಿಭಾಗದ ಅಧ್ಯಕ್ಷ ಎಚ್‌.ಎಂ.ರೇವಣ್ಣ ಆರೋಪಿಸಿದರು.

ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ’ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಸಲಹೆ ನೀಡಿದರೆ ಅವರನ್ನೇ ಅವಹೇಳನ ರೀತಿಯಲ್ಲಿ ಬಿಂಬಿಸಿ ಬಿಜೆಪಿ ರಾಜಕೀಯ ಮಾಡುತ್ತಿದೆ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಭಾಷಣಕಾರ ಹೊರತು ಒಳ್ಳೆಯ ಕಾರ್ಯಕ್ರಮ ಕೊಡುವವರು ಅಲ್ಲ. ಭಾವನಾತ್ಮಕವಾಗಿ ಮಾತನಾಡುತ್ತಾರೆ. ವಿದೇಶದಿಂದ ವಿಮಾನದಲ್ಲಿ ಬಂದವರನ್ನು ವಿಮಾನ ನಿಲ್ದಾಣದಲ್ಲೇ ಕ್ವಾರಂಟೈನ್‌ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ‘ ಎಂದು ಹೇಳಿದರು.

‘ಕಡುಬಡವರಿಗೆ ರಾಜ್ಯ ಸರ್ಕಾರ, ದಾನಿಗಳು ನೀಡುತ್ತಿರುವ ದಿನಸಿ ಕಿಟ್‌ಗಳ ಮೇಲೆ ಬಿಜೆಪಿ ಕಾರ್ಪೋರೇಟ್‌ಗಳು, ಶಾಸಕರು ತಮ್ಮ ಫೋಟೊ ಹಾಕಿಕೊಂಡು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ಸರ್ಕಾರವೆಂದರೆ ಕೇವಲ ಒಂದು ಪಕ್ಷವಲ್ಲವೆಂಬ ಸಣ್ಣ ವಿಷಯವೂ ಗೊತ್ತಿಲ್ಲದ ಬಿಜೆಪಿ ಸರ್ಕಾರ ಜನರ ಸಂಕಷ್ಟ ಪರಿಹರಿಸಲು ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ನೀಡಿದ ಅನ್ನಭಾಗ್ಯ ಯೋಜನೆ, ಮನಮೋಹನ್‌ ಸಿಂಗ್‌ ಸರ್ಕಾರ ನೀಡಿದ ಉದ್ಯೋಗ ಖಾತ್ರಿ ಯೋಜನೆ, ಖರ್ಗೆ ನೀಡಿದ ಕಾರ್ಮಿಕರ ನಿಧಿ ಯೋಜನೆ. ಈ ಮೂರರಿಂದಾಗಿಜನ ಲಾಕ್‌ಡೌನ್‌ ನಡುವೆ ಬದುಕುವಂತಾಗಿದೆ. ಇವಿಲ್ಲದೇ ಹೋಗಿದ್ದರೆ ಪ‍ರಿಸ್ಥಿತಿ ಇನ್ನೂ ಗಂಭೀರವಾಗುತ್ತಿತ್ತು‘ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಐದು ವಿಭಾಗದಲ್ಲಿ ಸಮಿತಿ ರಚಿಸಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ಚಿಂತಿಸುತ್ತಿದೆ. 11 ಅಂಶಗಳ ಪ್ರಶ್ನೋತ್ತರಗಳನ್ನು ಜನರಿಗೆ ನೀಡಿ ಅಭಿಪ್ರಾಯಗಳನ್ನ ಸಂಗ್ರಹಿಸಲು ಮುಂದಾಗಿದ್ದೇವೆ. ಏ.20ಕ್ಕೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನ ಸರ್ಕಾರದ ಮುಂದೆ ಇಡಲಿದ್ದೇವೆ’ ಎಂದು ತಿಳಿಸಿದರು.

ಕಾಂಗ್ರೆಸ್‌ ಕಾರ್ಯಪಡೆಯ ಕೃಷಿ ವಿಭಾಗದ ಅಧ್ಯಕ್ಷ ಎನ್‌.ಎಚ್‌.ಶಿವಶಂಕರರೆಡ್ಡಿ ಮಾತನಾಡಿ, ‘ಕೊರೊನಾ ಪತ್ತೆ ಪರೀಕ್ಷೆಗಳು ಹೆಚ್ಚೆಚ್ಚು ಮಾಡಬೇಕು. ಆಗ ಮಾತ್ರ ಸೋಂಕು ಸಮುದಾಯದಲ್ಲಿ ಹರಡಿದೆಯೇ ಇಲ್ಲವೇ ತಿಳಿಯುತ್ತದೆ. ಆದರೆ ನಮ್ಮಲ್ಲಿ ಸರ್ಕಾರ ಲಾಕ್‌ಡೌನ್‌ಗೆ ಕೊಟ್ಟ ಆದ್ಯತೆ ಪರೀಕ್ಷೆಗೆ ನೀಡುತ್ತಿಲ್ಲ‘ ಎಂದು ಹೇಳಿದರು.

‘ರಾಜ್ಯದಲ್ಲಿ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಅತ್ಯಾಧುನಿಕ ಪರೀಕ್ಷಾ ಸೌಲಭ್ಯಗಳನ್ನು ಹೊಂದಿವೆ. ಆದ್ದರಿಂದ ಸರ್ಕಾರ ಖಾಸಗಿ ವೈದ್ಯರು, ಪ್ರಯೋಗಾಲಯಗಳ ನೆರವು ಪಡೆಯಬೇಕಿತ್ತು. ಮಾಡಲಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಈವರೆಗೆ ಸೋಂಕು ಪರೀಕ್ಷೆ ಪ್ರಯೋಗಾಲಯಗಳು ಆರಂಭಗೊಂಡಿಲ್ಲ. ತಾಲ್ಲೂಕು ಮಟ್ಟದ ಬಗ್ಗೆ ಮಾತನಾಡುವಂತೆಯೇ ಇಲ್ಲ’ ಎಂದರು.

‘ಕೋವಿಡ್‌ ಕಾಯಿಲೆಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಬರುವ ದಿನಗಳಲ್ಲಿ ಆರ್ಥಿಕತೆಯ ಎಲ್ಲ ಕ್ಷೇತ್ರಗಳಲ್ಲಿ ತೀರಾ ಕುಸಿತವಾಗುವ ಲಕ್ಷಣಗಳು ಕಂಡುಬರುತ್ತಿವೆ. ಇದನ್ನು ಎದುರಿಸಲು ದೂರಗಾಮಿ ಯೋಜನೆಗಳನ್ನು ಎಲ್ಲರ ಸಹಕಾರ ಹಾಗೂ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ರಚನಾತ್ಮಕ ಸಹಕಾರ ನೀಡಲು ಸಿದ್ಧವಿದೆ‘ ಎಂದು ಹೇಳಿದರು.

‘ಕೊರೊನಾ ಸೋಂಕಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವ ಅಗತ್ಯವಿಲ್ಲ. ಮಾಡಲೂ ಬಾರದು. ಆದರೆ ಆಗಿರುವ ನಷ್ಟಕ್ಕೆ, ಆಗಿರುವ ಲೋಪಗಳನ್ನು ಎತ್ತಿ ಹಿಡಿದು ಸರ್ಕಾರದ ಗಮನಕ್ಕೆ ತಂದು ಸೋಂಕು ನಿಯಂತ್ರಿಸಲು ನಮ್ಮ ಸಮಿತಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿವೆ‘ ಎಂದು ತಿಳಿಸಿದರು.

ಶಾಸಕ ವಿ.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಲಿಂಗಪ್ಪ, ಮಾಜಿ ಸಂಸದ ಚಂದ್ರಪ್ಪ, ಕಾರ್ಯಪಡೆ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಚ್‌.ನಾಗರಾಜ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ನಂದಿ ಆಂಜನಪ್ಪ, ಯಲುವಹಳ್ಳಿ ರಮೇಶ್‌, ಕೆ.ವಿ.ನವೀನ್‌ ಕಿರಣ್, ಎಸ್‌.ಎಂ.ಮುನಿಯಪ್ಪ, ಜಯರಾಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT