ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರಂಪರಿಕ ಕಟ್ಟಡ ಹೋಟೆಲ್‌ ಆಗಲಿ’

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಲಹೆ
Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ ಪಾರಂಪರಿಕ ಕಟ್ಟಡಗಳನ್ನು ಹೋಟೆಲ್‌, ರೆಸ್ಟೊರೆಂಟ್‌ಗಳನ್ನಾಗಿ ಪರಿವರ್ತಿಸುವ ಕಡೆಗೆ ಗಮನ ಹರಿಸಬೇಕಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಲಹೆ ನೀಡಿದರು.

ಭಾರತೀಯ ರಾಷ್ಟ್ರೀಯ ಕಲೆ ಮತ್ತು ಪರಂಪರೆ ಟ್ರಸ್ಟ್‌ (ಇಂಟ್ಯಾಕ್‌) ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ನಗರ ಪಾರಂಪರಿಕ ಆರ್ಥಿಕತೆ: ಸಂರಕ್ಷಣೆ, ಸಮಸ್ಯೆ ಹಾಗೂ ಅವಕಾಶಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರಾಜಸ್ಥಾನದಲ್ಲಿರುವ ಹಳೆಯ ಬಂಗಲೆಗಳನ್ನು ಹೋಟೆಲ್‌, ರೆಸ್ಟೊರೆಂಟ್‌ಗಳನ್ನಾಗಿ ಪರಿವರ್ತಿಸಲಾಗಿದೆ. ನಗರದ ಮಲ್ಲೇಶ್ವರದಲ್ಲಿದ್ದ ಹಳೆಯ ಮನೆಯೊಂದನ್ನು ‘ವಿಲ್ಲಾ ಪೊಟ್ಟಿಪಾಟಿ’ ಎಂಬ ಹೋಟೆಲ್‌ ಆಗಿ ಮಾರ್ಪಡಿಸಲಾಗಿದೆ. ಇದೇ ಮಾದರಿಯಲ್ಲಿ ಪುರಾತನ ಮನೆಗಳನ್ನು ನವೀಕರಿಸಿ, ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಇದರಿಂದ ಆರ್ಥಿಕವಾಗಿಯೂ ಲಾಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಖಾಸಗಿ ಅಥವಾ ಸರ್ಕಾರಿ ಪಾರಂಪರಿಕ ಕಟ್ಟಡಗಳನ್ನು ನವೀಕರಿಸುವುದರಿಂದ ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆ ಬರುತ್ತದೆ ಎಂದು ಕೆಲವರು ದೂರುತ್ತಾರೆ. ಆದರೆ, ಹಾಗೇ ಬಿಟ್ಟರೆ ಅವು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ವಾಣಿಜ್ಯೀಕರಣದ ಮೂಲಕ ಅವುಗಳನ್ನು ಸಂರಕ್ಷಿಸಬಹುದು ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಿದ್ಧಪಡಿಸಿರುವ ಪರಿಷ್ಕೃತ ಮಹಾ ಯೋಜನೆ 2031 ಕರಡಿನಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.

ಇಂಟ್ಯಾಕ್‌ ಹೆರಿಟೇಜ್‌ ಅಕಾಡೆಮಿಯ ಮುಖ್ಯಸ್ಥ ನವೀನ್‌ ಪಿಪ್ಲಾನಿ, ‘ಪುರಾತನ ಕಟ್ಟಡಗಳ ನಿರ್ವಹಣೆ ಕೊರತೆ ಹಾಗೂ ಆರ್ಥಿಕವಾಗಿ ಲಾಭವಿರದ ಕಾರಣ ಮಾಲೀಕರು ಅವುಗಳನ್ನು ನೆಲಸಮಗೊಳಿಸುವುದು ಸಾಮಾನ್ಯ. ಕೆಲವರು ಈಗಲೂ ಹಳೆಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹವರಿಗೆ ಸರ್ಕಾರವು ಆರ್ಥಿಕ ನೆರವು ನೀಡಬೇಕು. ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಕಲ್ಪಿಸಬೇಕು. ಪಾರಂಪರಿಕ ನಿಧಿ ಸ್ಥಾಪಿಸಿ, ಪುರಾತನ ಕಟ್ಟಡಗಳನ್ನು ಸಂರಕ್ಷಿಸಬೇಕು’ ಎಂದು ಸಲಹೆ ನೀಡಿದರು.

ಅಹಮದಾಬಾದ್‌ ಹೆರಿಟೇಜ್‌ ಫೌಂಡೇಷನ್‌ನ ಸಹ ಸಂಸ್ಥಾಪಕ ರಾಜೀವ್‌ ಪಟೇಲ್‌, ‘ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣಕ್ಕೆ ಹೂಡಿಕೆ ಮಾಡುವ ಬದಲು, ಅದೇ ಹಣದಲ್ಲಿ ಪಾರಂಪರಿಕ ಕಟ್ಟಡಗಳನ್ನು ಖರೀದಿಸಿದ್ದೆವು. ಅವುಗಳನ್ನು ಪುನರುಜ್ಜೀವನಗೊಳಿಸಿ ಸಾಂಸ್ಕೃತಿಕ ಕೇಂದ್ರ, ಹೋಟೆಲ್‌, ಚಿತ್ರೀಕರಣದ ತಾಣಗಳನ್ನಾಗಿ ರೂಪಿಸಿದ್ದೆವು. ಇದರಿಂದ ಹಾಕಿದ ಬಂಡವಾಳ ವಾಪಸ್‌ ಬಂದಿದೆ’ ಎಂದರು.

ಬಿಲ್ಡರ್‌ಗಳು, ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ಸಂಸ್ಕೃತಿಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
***
‘ಪಾರಂಪರಿಕ ಕಟ್ಟಡ ಖಾಸಗೀಕರಣ ತಪ್ಪಲ್ಲ’
‘ವೆಂಕಟಪ್ಪ ಆರ್ಟ್‌ ಗ್ಯಾಲರಿಯ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡುವುದಕ್ಕೆ ಕೆಲವರು ವಿರೋಧಿಸಿದ್ದರು. ಖಾಸಗಿಯವರಿಗೆ ವಹಿಸಿದ ಮಾತ್ರಕ್ಕೆ ಅದರ ಮಾಲೀಕತ್ವಕ್ಕೆ ಧಕ್ಕೆ ಬರುತ್ತದೆ ಎಂಬ ತಪ್ಪುಕಲ್ಪನೆ ಕೆಲವರಲ್ಲಿದೆ. ಸರ್ಕಾರಿ ಅಥವಾ ವ್ಯಕ್ತಿಗಳ ಹೆಸರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಖಾಸಗೀಕರಣಗೊಳಿಸುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ’ ಎಂದು ನಗರ ಯೋಜನಾ ತಜ್ಞ ವಿ.ರವಿಚಂದರ್‌ ಅಭಿಪ್ರಾಯಪಟ್ಟರು.
**
ಪಾರಂಪರಿಕ ವಸ್ತುಗಳಿಗೆ ಮಾರುಕಟ್ಟೆ ಸೃಷ್ಟಿಯಾಗಲಿ: ರಘು ಸಲಹೆ
‘ರೈಲ್ವೆ ಇಲಾಖೆಗೆ ಸೇರಿದ ಹಳೆಯ ಸಿಗ್ನಲ್‌ ಕಂಬಗಳು, ಬೀದಿ ದೀಪಗಳು ಸೇರಿದಂತೆ ಅನೇಕ ಪುರಾತನ ವಸ್ತುಗಳನ್ನು ಗುಜರಿಗೆ ಹಾಕುತ್ತಾರೆ. ಅವುಗಳನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಮಾರಾಟ ಮಾಡುವುದಿಲ್ಲ. ಅದೇ ರೀತಿ, ಪುರಾತನವಾಗಿರುವ ಎಲ್ಲ ವಸ್ತುಗಳಿಗೆ ಪ್ರತ್ಯೇಕ ಮಾರುಕಟ್ಟೆ ಸೃಷ್ಟಿಯಾಗಬೇಕು. ಇಂಗ್ಲೆಂಡ್‌ನಲ್ಲಿ ಇಂತಹ ಮಾರುಕಟ್ಟೆ ವ್ಯವಸ್ಥೆ ಇದೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ರಘು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT