ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸರಿ ಫಾರಂಗೆ ವಿದ್ಯಾರ್ಥಿಗಳಿಗೆ ಭೇಟಿ

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ
Last Updated 8 ಮಾರ್ಚ್ 2021, 5:17 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಅಸಮತೋಲನ ಮತ್ತು ಅಕಾಲಿಕ ಘಟನೆಗಳ ನಿವಾರಣೆಗೆ ಕಡ್ಡಾಯವಾಗಿ ಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಮಾರ್ಗವಾಗಿದೆ. ಪರಿಸರ ಸಂರಕ್ಷಣೆಯು ದಿನನಿತ್ಯದ ಚಟುವಟಿಕೆಯಾಗಬೇಕು.ಎಲ್ಲರಲ್ಲಿಯೂ ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂದು ಜೆ. ವೆಂಕಟಾಪುರ ಗ್ರಾಮದ ವಿಎಲ್‌ಪಿ ಯೋಗಿತಾ ನರ್ಸರಿ ಫಾರಂ ನಿರ್ದೇಶಕ ಪಾಪರಾಜು ತಿಳಿಸಿದರು.

ತಾಲ್ಲೂಕಿನ ಜೆ. ವೆಂಕಟಾಪುರ ಗ್ರಾಮದ ವಿಎಲ್‌ಪಿ ಯೋಗಿತಾ ಫಾರಂ ನರ್ಸರಿಗೆ ಭೇಟಿ ನೀಡಿದ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಂದರ್‌ಲಾಲ್ ಬಹುಗುಣ ಇಕೋ ಕ್ಲಬ್‌ನ ಸದಸ್ಯ ಮಕ್ಕಳೊಂದಿಗೆ ಪರಿಸರ ಸಂರಕ್ಷಣೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಪೂರ್ವಜರಿಗೆ ತಾಂತ್ರಿಕತೆಯ ಅರಿವಿಲ್ಲದ್ದರಿಂದ ಪರಿಸರ ಸಂರಕ್ಷಣೆಯ ಜ್ಞಾನ ಹೊಂದಿದ್ದರು. ಬುದ್ಧಿವಂತರಾದಂತೆಲ್ಲಾ ಪರಿಸರದ ಮೇಲಿನ ದಬ್ಬಾಳಿಕೆ ಹೆಚ್ಚುವಂತಾಗಿದೆ. ಪರಿಸರವನ್ನು ದೇವರ ರೂಪದಲ್ಲಿ ನೋಡುತ್ತಿದ್ದ ಪುರಾತನ ಜನರ ಗುಣವು ಅನುಕರಣೀಯವಾದುದು. ದಿನೇ ದಿನೇ ಹೆಚ್ಚುತ್ತಿರುವ ಅರಣ್ಯ ನಾಶದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಪ್ರಾಕೃತಿಕ ವೈಪರೀತ್ಯದಿಂದಾಗಿ ಆಗುತ್ತಿರುವ ವಿಕೋಪಗಳಿಗೆ ಮುಗ್ಧ ಜನರು, ಅನೇಕ ಪ್ರಾಣಿಗಳು ಬಲಿಯಾಗುತ್ತಿವೆ ಎಂದರು.

ಸುಂದರಲಾಲ್ ಬಹುಗುಣ ಇಕೋ ಕ್ಲಬ್‌ನ ಸಂಯೋಜಕ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ಮಾನವನು ಅತಿಯಾಸೆಯಿಂದ ಮಾಡುತ್ತಿರುವ ದುಷ್ಕೃತ್ಯಗಳು ಪ್ರಕೃತಿಯ ಮೇಲೆ ನಡೆಸುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳಾಗಿವೆ. ಅನೇಕ ಪ್ರಾಣಿ, ಪಕ್ಷಿಸಂಕುಲಗಳು ವಿನಾಶದ ಅಂಚಿನಲ್ಲಿವೆ. ಆಮ್ಲಜನಕ, ನೀರನ್ನು ಕೊಂಡು ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಪರಿಸರ ಸಂರಕ್ಷಣೆಗೆ ಗಂಭೀರವಾದ ಯೋಜನೆಗಳನ್ನು ಕಡ್ಡಾಯಗೊಳಿಸಬೇಕಿದೆ ಎಂದು ತಿಳಿಸಿದರು.

ನರ್ಸರಿ ಫಾರಂನ ಸಂಪನ್ಮೂಲ ವ್ಯಕ್ತಿ ಮದನ್ ಮಾತನಾಡಿ, ಮನೆಗಳ ಟೆರಾಸ್ ಮೇಲೆ ಗಿಡಗಳನ್ನು ಬೆಳೆಸಬಹುದು. ಬೇಸಿಗೆ ಹೆಚ್ಚುತ್ತಿರುವುದರಿಂದ ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಗಿಡಗಳನ್ನು ಸ್ವಂತ ಮಕ್ಕಳಂತೆ ಪೋಷಿಸಬೇಕು. ಶುಭ ಸಮಾರಂಭಗಳ ವೇಳೆ ಸಸಿಗಳನ್ನು ನೆಡುವ, ವಿತರಿಸುವ ಹವ್ಯಾಸ ಅನುಸರಣೆಯಾಗಬೇಕು ಎಂದರು.

ವಿವಿಧ ಜಾತಿ, ಪ್ರಭೇದದ ಗಿಡಗಳ ಹೆಸರು, ವೈಜ್ಞಾನಿಕ ಹೆಸರು, ಬೆಳೆಸಿ ಸಂರಕ್ಷಿಸುವ ವಿಧಾನಗಳನ್ನು ವಿವರಿಸಲಾಯಿತು. ವಿದ್ಯಾರ್ಥಿಗಳು ಸ್ಥಳೀಯ ಗೋಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.ಶಿಕ್ಷಕ ಎ.ಬಿ. ನಾಗರಾಜು, ಎಂ.ವೈ. ಲಕ್ಷ್ಮಯ್ಯ, ಶಿಕ್ಷಕಿ ಉಮಾದೇವಿ, ಎಚ್. ತಾಜೂನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT