ಶುಕ್ರವಾರ, ಸೆಪ್ಟೆಂಬರ್ 25, 2020
23 °C
ಬಾಗೇಪಲ್ಲಿ: ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಾ.ಕೆ.ಸುಧಾಕರ್‌

ಸುಬ್ಬಾರೆಡ್ಡಿಗೆ ಧೈರ್ಯದ ಕೊರತೆ, ನನ್ನ ಜತೆ ಬರಲಿಲ್ಲ: ಸಚಿವ ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ‘ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮನಸ್ಸು ಮಾಡಿದ್ದರೆ ಈಗ ಸಚಿವರಾಗಿ ನನ್ನ ಜತೆ ಜನರ ಸೇವೆ ಮಾಡುತ್ತಿದ್ದರು. ಆದರೆ, ಅವರಿಗೆ ಧೈರ್ಯದ ಕೊರತೆ. ಆದ್ದರಿಂದ, ನನ್ನ ಜೊತೆ ಬರಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಜತೆಗೆ ಬರಬಹುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಲೋಕಾರ್ಪಣೆ ಹಾಗೂ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲ್ಲೂಕುಗಳು ಅತಿ ಹಿಂದುಳಿದಿವೆ. ಲಾಕ್‌ಡೌನ್‌ನಿಂದ ಸರ್ಕಾರದ ಆರ್ಥಿಕ ಮಟ್ಟ ಕುಸಿದಿದೆ. ಇದರಿಂದ ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಮೂರು ತಾಲ್ಲೂಕುಗಳಿಗೆ ಶಾಶ್ವತ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಕೈಗಾರಿಕಾ ವಲಯಗಳನ್ನು ಆರಂಭಿಸಲಾಗುವುದು ಎಂದರು.

ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಿದ್ದಾರೆ. ಸಾವಿನ ಸಂಖ್ಯೆ  ಶೇ 1.9ರಷ್ಟು ಕಡಿಮೆ ಆಗಿದೆ. ಕೋವಿಡ್ ಮುಕ್ತ ಭಾರತ ಮಾಡಲು ಹೊರಟಿದ್ದಾರೆ. ಜಿಲ್ಲೆಯಲ್ಲಿ ಸಹ ಅಧಿಕಾರಿಗಳ ಕಾರ್ಯಬದ್ಧತೆಯಿಂದ ಸೋಂಕಿನ ಪ್ರಮಾಣ ಕಡಿಮೆ ಆಗಿದೆ. ಅಧಿಕಾರಿಗಳು ಪ್ರವಾಸ ಮಾಡಿ, ಬೂತ್‌ಮಟ್ಟದಲ್ಲಿ ಯುವಕಾರ್ಯಪಡೆಗಳನ್ನು ರಚಿಸಿ ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಅತಿ ಹಿಂದುಳಿದ ಜಿಲ್ಲೆಯಾದರೂ, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಶ್ರಮಿಸಿರುವ ಜಿಲ್ಲಾ, ತಾಲ್ಲೂಕು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ, ಪೋಷಕರಿಗೆ, ವಿದ್ಯಾರ್ಥಿಗಳಿಗೆ  ಅಭಿನಂದನೆ ಸಲ್ಲಿಸುವೆ ಎಂದರು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ಸದಸ್ಯ ನರಸಿಂಹಪ್ಪ, ಉಪವಿಭಾಗಾಧಿಕಾರಿ ರಘುನಂದನ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಕೆ.ಆರ್.ನರೇಂದ್ರಬಾಬು, ಸರಸ್ವತಮ್ಮ, ಮಂಜುನಾಥಸ್ವಾಮಿ, ತಹಶೀಲ್ದಾರ್ ಎಂ.ನಾಗರಾಜು, ಅಮರನಾಥರೆಡ್ಡಿ, ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು