ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಸಂಸ್ಕರಣೆಗೆ ಸಹಾಯಧನ

ಪಿಎಂಎಫ್‌ಎಂಇ ಯೋಜನೆಗೆ ಅವಿಭಜಿತ ಜಿಲ್ಲೆ ಆಯ್ಕೆ
Last Updated 3 ಫೆಬ್ರುವರಿ 2021, 2:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣೆ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯನ್ನು ಜಾರಿಗೆ ತಂದಿದ್ದು, ಒಂದು ಜಿಲ್ಲೆಗೆ ಒಂದು ಉತ್ಪನ್ನ ಅಥವಾ ಬೆಳೆ ಕಾರ್ಯಕ್ರಮದಡಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆ ಆಯ್ಕೆಯಾಗಿದೆ.

ಟೊಮೆಟೊ ಬೆಳೆಯು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ರೈತರಿಗೆ ಪ್ರಮುಖ ಬೆಳೆಯಾಗಿದ್ದು, ಚಿಕ್ಕಬಳ್ಲಾಪುರದಲ್ಲಿ ಅಂದಾಜು 5,332 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆಯುತ್ತಿದ್ದು, 2,78,364 ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಅಂದಾಜು 19,147.46 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆಯುತ್ತಿದ್ದು, 7,97,184.86 ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಏರಿಳಿತಗಳು ಕಂಡು ಬಂದಲ್ಲಿ ರೈತರಿಗೆ ನಷ್ಟ ಉಂಟಾಗುವ ನಿಟ್ಟಿನಲ್ಲಿ ಸದರಿ ಕಾರ್ಯಕ್ರಮದಡಿ ಟೊಮೆಟೊ, ಪ್ಯೂರಿ, ಕೆಚಫ್, ಸಾಸ್, ಜಾಮ್ ಮತ್ತು ಉಪ್ಪಿನಕಾಯಿ ಮುಂತಾದ ಉಪ ಉತ್ಪನ್ನಗಳನ್ನು ತಯಾರಿಸಲು ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದು ಮುಖ್ಯ ಉದ್ದೇಶವಾಗಿದೆ.

ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ/ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತರು, ಉದ್ದಿಮೆದಾರರು, ರೈತ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಗುಂಪು ಮತ್ತು ಉತ್ಪಾದಕ ಸಹಕಾರಿ ಸಂಘಗಳಿಗೆ ಪ್ರೋತ್ಸಾಹ ನೀಡಿ, ಉತ್ಪನ್ನದ ಮೌಲ್ಯವರ್ಧನೆ ಮತ್ತು ಸರಪಳಿ ಕೊಂಡಿ
ಯೊಂದಿಗೆ ಉತ್ತೇಜನ ನೀಡಲಾಗುವುದು.

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಅದರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಪ್ರೋತ್ಸಾಹದ ಸಲುವಾಗಿ ಉತ್ಪನ್ನದ ತಯಾರಿಕೆ, ಮಾರುಕಟ್ಟೆ ಮೌಲ್ಯವರ್ಧನೆ ಬ್ರಾಂಡಿಂಗ್ ಗೆ ಆದ್ಯತೆ ನೀಡಿ ಉದ್ಯಮದ ಉನ್ನತಿಗೆ ಪ್ರೋತ್ಸಾಹ ನೀಡಲಾಗುವುದು.

ಸಂಸ್ಕರಣಾ ಘಟಕದ ಒಟ್ಟು ವೆಚ್ಚದ ಶೇ 35ರ ಸಹಾಯಧನ ಅಥವಾ ಗರಿಷ್ಠ ₹10 ಲಕ್ಷಗಳನ್ನು ಬ್ಯಾಂಕ್ ಸಾಲದ ಆಧಾರದ ಮೇಲೆ ನೀಡಲಾಗುವುದು. ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಕನಿಷ್ಠ ವಿದ್ಯಾರ್ಹತೆ 7ನೇ ತರಗತಿ ಪಾಸಾಗಿರಬೇಕು. ಅಭ್ಯರ್ಥಿಯು ಬ್ಯಾಂಕ್ ಸಾಲ ಪಡೆಯಲು ಮತ್ತು ಕನಿಷ್ಠ ಶೇ 10ರಷ್ಟು ಮೊತ್ತ ಸ್ವಂತ ಪಾಲನ್ನು ಭರಿಸಲು ಸಿದ್ಧರಾಗಿರಬೇಕು. ಯಾವುದೇ ಉದ್ಯಮದಲ್ಲಿ ತೊಡಗಿರುವ ವ್ಯಕ್ತಿ, ಸ್ವ-ಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಒಕ್ಕೂಟಗಳು ಸಹಕಾರಿ ಸಂಸ್ಥೆಗಳು ಮತ್ತು ಇತರೆ ಕಿರು ಉದ್ದಿಮೆದಾರರು ಹೊಸದಾಗಿ ಸಂಸ್ಕರಣಾ ಘಟಕಗಳು ಮಾರಾಟ ಮತ್ತು ರಪ್ತು ಘಟಕಗಳನ್ನು ಸ್ಥಾಪಿಸುವವರಿಗೆ ಈ ಯೋಜನೆಯಡಿ ಸಹಾಯಧನ ಒದಗಿಸಲಾಗುವುದು.

ಅಗತ್ಯ ತಾಂತ್ರಿಕ ಹಾಗೂ ಸಂಶೋಧನಾ ಬೆಂಬಲವನ್ನು ಕೇಂದ್ರೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಮೈಸೂರು ಮತ್ತು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಗಳ ನೆರವನ್ನು ಫಲಾನುಭವಿಗಳಿಗೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಅವರನ್ನು ಸಂಪರ್ಕಿಸಬಹುದು. 9448999215, 9945389926.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT