ಮಂಗಳವಾರ, ಸೆಪ್ಟೆಂಬರ್ 22, 2020
26 °C

ಬಿಜೆಪಿ ಸೇರಲು ತೆರೆಮರೆಯಲ್ಲಿ ಸಿದ್ಧತೆ: ಕೊನೆಗೂ ‘ಕೈ’ಕೊಟ್ಟ ಶಾಸಕ ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಡಾ.ಕೆ.ಸುಧಾಕರ್ ಅವರು ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರದ ಆರಂಭದಿಂದಲೂ ಇದ್ದ ತಮ್ಮ ಒಳಗಿನ ಮಾನಸಿಕ ತೊಳಲಾಟಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ. 

ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ತಮ್ಮದೇ ಆದ ‘ಪ್ರಭಾವ’ ಗಳಿಸಿಕೊಂಡಿದ್ದ ಸುಧಾಕರ್ ಅವರಿಗೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಎಣ್ಣೆ–ಸೀಗೆಕಾಯಿ ಸಂಬಂಧ ಎನ್ನುವುದು ಆರಂಭದಿಂದಲೇ ಜಗಜ್ಜಾಹೀರಾಯಿತು. 

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸುಧಾಕರ್ ಅವರು ಆರಂಭದಿಂದಲೂ ಸರ್ಕಾರವನ್ನು, ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಟೀಕಿಸುತ್ತಲೇ ತಮ್ಮ ಅಸಮಾಧಾನ ಹೊರಹಾಕುತ್ತ ಬಂದಿದ್ದರು. ಹೀಗಾಗಿ, ಈ ಸರ್ಕಾರ ಅವರ ಪಾಲಿಗೆ ‘ನುಂಗಲಾರದ ಬಿಸಿ ತುಪ್ಪ’ದಂತಾಗಿತ್ತು. ಹೀಗಾಗಿ, ಸುಧಾಕರ್ ಅವರು ಆಗಾಗ ‘ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು. ಯಾವುದನ್ನು ನಿರಾಕರಿಸಲಾಗುವುದಿಲ್ಲ’ ಎಂಬ ಮಾತು ಹೇಳುತ್ತಲೇ ತಮ್ಮ ಆಯ್ಕೆ ಮುಕ್ತವಾಗಿಟ್ಟುಕೊಂಡಿದ್ದರು. 

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನವರಿಗೆ ಹಿನ್ನಡೆಯಾದದ್ದೇ, ರಾಜಕೀಯವಾಗಿ ತುಂಬಾ ಮಹತ್ವಾಕಾಂಕ್ಷಿಯಾಗಿರುವ, ಕ್ಷೇತ್ರದಲ್ಲಿ ತಮ್ಮದೇ ಆದ ‘ಗತ್ತು’ ಕಾಯ್ದುಕೊಂಡಿದ್ದ ಸುಧಾಕರ್ ಅವರ ಕನಸಿಗೆ ಕೊಳ್ಳೆ ಇಟ್ಟಿತ್ತು. ಕುಮಾರಸ್ವಾಮಿ ಅವರ ಆಡಳಿತದಲ್ಲಿ ಹಿಂದಿನ ‘ಪ್ರತಿಷ್ಠೆ’ ಉಳಿಸಿಕೊಳ್ಳಲಾಗದೆ ಹತಾಶೆಗೊಂಡಿದ್ದ ಅವರು ತಮ್ಮ ಒಳಗಿನ ಆಕ್ರೋಶವನ್ನು ಆಗಾಗ ಬಹಿರಂಗವಾಗಿಯೇ ಹೊರಹಾಕುತ್ತಿದ್ದರು. 

ಜಿಲ್ಲೆಯ ಕಾಂಗ್ರೆಸ್‌ ಪಾಳೆಯ, ಜಿಲ್ಲಾ ಪಂಚಾಯಿತಿಯಲ್ಲಿ ಹಿಡಿತ ಸಾಧಿಸುವುದು ಮತ್ತು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ವಿಚಾರದಲ್ಲಿ ತಮ್ಮ ರಾಜಕೀಯ ವೈರಿ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ ಅವರೊಂದಿಗೆ ತೆರೆಮರೆಯ ‘ಜಿದ್ದು’ ಸಾಧಿಸುತ್ತ ಬಂದ ಸುಧಾಕರ್, ಸಮ್ಮಿಶ್ರ ಸರ್ಕಾರದಲ್ಲಿ ಶಿವಶಂಕರರೆಡ್ಡಿ ಅವರು ಸಚಿವರಾಗುತ್ತಿದ್ದಂತೆ ಕುದ್ದು ಹೋಗಿದ್ದರು ಎನ್ನುತ್ತಾರೆ ಸ್ಥಳೀಯ ರಾಜಕಾರಣದ ಆಳ ಅರಿತವರು.

ಸುಧಾಕರ್‌ ಅವರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿತ್ತು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ನಿರಾಕರಿಸಿದ್ದರು. ಇದರಿಂದಾಗಿ ಸುಧಾಕರ್ ಅವರ ಆಕ್ರೋಶ ಮತ್ತಷ್ಟು  ಭುಗಿಲೆದ್ದಿತ್ತು. ಇತ್ತೀಚೆಗಷ್ಟೇ ಸುಧಾಕರ್ ಅವರನ್ನು ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಮುನಿಸು ತಣಿಸುವ ಕೆಲಸ ಮಾಡಲಾಗಿತ್ತು. 

ತಮ್ಮ ವರ್ಚಸ್ಸು ಮತ್ತು ರಾಜಕೀಯ ತಂತ್ರಗಾರಿಕೆ ಮೂಲಕ ಸುಧಾಕರ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ತಂದೆ ಪಿ.ಎನ್.ಕೇಶವರೆಡ್ಡಿ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಆದರೆ ಕೇಶವರೆಡ್ಡಿ ಅವರ ಧೋರಣೆ ವಿರುದ್ಧ ಸಿಡಿದೆದ್ದ ಆಡಳಿತ ಪಕ್ಷದ ಸದಸ್ಯರೇ ಅವರನ್ನು ಕೆಳಗಿಳಿಸಲು ಮುಂದಾದಾಗ ಆ ಸ್ಥಾನವನ್ನು ಶಿವಶಂಕರರೆಡ್ಡಿ ಅವರ ಆಪ್ತ ಎಚ್‌.ವಿ.ಮಂಜುನಾಥ್‌ ಅಲಂಕರಿಸಿದ್ದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಚುಕ್ಕಾಣಿ ಕೂಡ ಶಿವಶಂಕರರೆಡ್ಡಿ ಅವರ ಬಲಗೈ ಬಂಟ ಕೆ.ಎನ್.ಕೇಶವರೆಡ್ಡಿ ಅವರ ಕೈಗೆ ಹೋದಾಗ ಸಹಜವಾಗಿಯೇ ಸುಧಾಕರ್ ಅವರ ಬೆಂಬಲಿಗರು ಒಳಗೊಳಗೆ ವಿಲಗುಟ್ಟಿದ್ದರು. ಸ್ಥಳೀಯ ರಾಜಕಾರಣದಲ್ಲಿ ಹಿಡಿತ ಸಾಧಿಸಬಹುದಾದ ಎಲ್ಲ ಅವಕಾಶಗಳು ಕೈತಪ್ಪಿದ್ದು ಒಂದೆಡೆಯಾದರೂ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ತಮ್ಮ ಮಾತಿಗೆ ಮನ್ನಣೆಯನ್ನೇ ನೀಡುತ್ತಿಲ್ಲ ಎನ್ನುವ ನೋವು ಸುಧಾಕರ್ ಅವರನ್ನು ಪಕ್ಷ ತೊರೆಯುವ ಸ್ಥಿತಿಗೆ ತಂದಿತ್ತು ಎನ್ನುತ್ತಾರೆ ಅವರ ಆಪ್ತರು. 

ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ನಿರ್ಧಾರ ತಳೆದಿದ್ದ ಸುಧಾಕರ್‌ ಅವರು ಅದಕ್ಕಾಗಿ ವೇದಿಕೆ ಸಿದ್ಧಪಡಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಗುರು, ಬಿಜೆಪಿ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ, ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಅನೇಕ ಬಾರಿ ಭೇಟಿ ಆಗಿ ಚರ್ಚೆ ನಡೆಸಿದ್ದರು ಎನ್ನಲಾಗಿದೆ. 

ದಿಢೀರ್‌ ಪಕ್ಷ ತೊರೆಯುವ ತೀರ್ಮಾನ ತೆಗೆದುಕೊಳ್ಳದೆ ಫಲಿತಾಂಶದ ವರೆಗೆ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದ ಸುಧಾಕರ್ ಅವರು, ರಾಜಕೀಯ ಕ್ಷೀಪ್ರ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಎಸ್‌.ಟಿ.ಸೋಮಶೇಖರ್, ಭೈರತಿ ಬಸವರಾಜು ಮತ್ತು ಮುನಿರತ್ನ ಅವರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ, ಮುಂಬೈ ಸೇರುತ್ತಿದ್ದಂತೆ ಕಾಂಗ್ರೆಸ್ ತೊರೆಯುವ ಅಚಲ ನಿರ್ಧಾರಕ್ಕೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. 

ಕಳೆದ ನಾಲ್ಕೈದು ದಿನಗಳಿಂದ ಸುಧಾಕರ್ ಅವರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹರಿದಾಡುತ್ತಲೇ ಇತ್ತು. ಆದರೆ ಈ ಕುರಿತು ಸುಧಾಕರ್ ಅವರು ಯಾವುದೇ ರೀತಿಯ ಸ್ಪಷ್ಟನೆ ನೀಡಿರಲಿಲ್ಲ. ಜತೆಗೆ ಮಂಗಳವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕೂಡ ಹಾಜರಾಗಿರಲಿಲ್ಲ. ಜ್ವರದ ನೆಪದಲ್ಲಿ ದಿನವೀಡಿ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿಯೇ ಉಳಿದು ಕೊನೆಯದಾಗಿ ತಮ್ಮ ಬೆಂಬಲಿಗರಿಂದ ತಮ್ಮ ನಿರ್ಧಾರಕ್ಕೆ ಅಂತಿಮ ಸಹಮತ ಪಡೆದಿದ್ದರು ಎನ್ನಲಾಗಿದೆ. 

ಈ ಕುರಿತು ‘ಪ್ರಜಾವಾಣಿ’ ಮಂಗಳವಾರದ ಸಂಚಿಕೆಯಲ್ಲಿ ‘ಬಿಜೆಪಿ ಹೊಸ್ತಿಲಲ್ಲಿ ಶಾಸಕ ಸುಧಾಕರ್?’ ಎಂಬ ವರದಿಯಲ್ಲಿ ಸುಧಾಕರ್ ಅವರ ರಾಜೀನಾಮೆ ಸುಳಿವು ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು