ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್ ರಾಜೀನಾಮೆಗೆ ಆಗ್ರಹ

ಸಚಿವರ ‘ಏಕಪತ್ನಿ ವ್ರತಸ್ಥ’ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Last Updated 28 ಮಾರ್ಚ್ 2021, 5:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದ ಯಾವ ಪಕ್ಷದ ಶಾಸಕರೂ ಏಕಪತ್ನಿ ವ್ರತಸ್ಥರಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರ ಹೇಳಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಸುಧಾಕರ್ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಶಿಡ್ಲಘಟ್ಟ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸುಧಾಕರ್ ನಾಲಾಯಕ್ ಎಂದು ಘೋಷಣೆಗಳನ್ನು ಕೂಗಿದರು. ಶಿಡ್ಲಘಟ್ಟ ವೃತ್ತದಲ್ಲಿ ಸಮಾವೇಶಗೊಂಡರು.

ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಮಾತನಾಡಿ, ‘ಸುಧಾಕರ್ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದು ನಮ್ಮ ದುರದೃಷ್ಟ. ಅವರ ಬೇಜವಾಬ್ದಾರಿ ಹೇಳಿಕೆಯು ಇಡೀ ಕ್ಷೇತ್ರದ ಜನರು ತಲೆ ತಗ್ಗಿಸುವಂತೆ ಮಾಡಿದೆ. ಅವರ ಮಾತುಗಳಿಂದ ನೊಂದಿದ್ದೇವೆ. ಇದು ಎಲ್ಲ ಶಾಸಕರನ್ನು ಅಪಮಾನಿಸಿದ ಹೇಳಿಕೆ’ ಎಂದರು.

ಸುಧಾಕರ್ ಅನಾರೋಗ್ಯ ಮಂತ್ರಿಯಾಗಿದ್ದಾರೆ. ಸಚಿವ ಸಂಪುಟದಿಂದ ಅವರನ್ನು ತಕ್ಷಣವೇ ಮುಖ್ಯಮಂತ್ರಿ ವಜಾ ಮಾಡಬೇಕು. ಚಿಕ್ಕಬಳ್ಳಾಪುರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಲಾಯರ್ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿಯವರು ಜೈಶ್ರೀರಾಮ್ ಎನ್ನುವರು. ಶ್ರೀರಾಮ ಮರ್ಯಾದ ಪುರುಷೋತ್ತಮ. ಶ್ರೀರಾಮನ ಹೆಸರು ಹೇಳಿ ಬಂದ ಸುಧಾಕರ್ ಶಾಸಕಿಯರನ್ನೂ ನಿಂದಿಸಿದ್ದಾರೆ. ಏಕಪತ್ನಿ ವ್ರತಸ್ಥರಲ್ಲ ಎಂದರೆ ಏನರ್ಥ. ಶಾಸಕರಿಗೆ ಇಬ್ಬರು, ಮೂವರು ಹೆಂಡತಿಯರು ಇದ್ದಾರೆ ಎಂದೇ ಎಂದು ಪ್ರಶ್ನಿಸಿದರು.

ಸುಧಾಕರ್ ಅವರ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ. ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಇಂತಹ ಸಚಿವರು, ಶಾಸಕರು ನಿಮ್ಮ ಪಕ್ಷದಲ್ಲಿ ಇರಬೇಕೇ ಎಂದು ಪ್ರಶ್ನಿಸಿದರು.

ಸುಧಾಕರ್ ಸಾಚಾ ಇದ್ದರೆ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ತಡೆ ಹಿಡಿಯುವಂತೆ ನ್ಯಾಯಾಲಯದ ಮೊರೆ ಏಕೆ ಹೋಗುತ್ತಿದ್ದರು. ಇವರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೋನಪಲ್ಲಿ ಕೋದಂಡ, ಅಡ್ಗಲ್ ಶ್ರೀಧರ್, ಎಸ್. ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ಸುರೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮುದಾಸಿರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾವಿತ್ರಮ್ಮ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ಮಮತಾ ಮೂರ್ತಿ, ಪಟ್ರೇನಹಳ್ಳಿ ಕೃಷ್ಣ, ಬಿಂಗಾನಹಳ್ಳಿ ಹರೀಶ್, ಹಮೀಮ್ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT