ಬುಧವಾರ, ಮೇ 27, 2020
27 °C
ಪತ್ರಿಕಾಗೋಷ್ಠಿ ಮೂಲಕ ಶಾಸಕ ಕೆ.ಆರ್.ರಮೇಶ್‌ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವರ ಬೆಂಬಲಿಗರು

ಸುಧಾಕರ್ ನಿಂದಿಸಿದರೆ ಉಗ್ರ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಶಾಸಕ ಕೆ.ಆರ್.ರಮೇಶ್‌ ಕುಮಾರ್ ಅವರು ಸದನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ. ಇಂತಹ ಘಟನೆ ಮರುಕಳುಹಿಸಿದರೆ ಸುಧಾಕರ್‌ ಅವರ ಬೆಂಬಲಿಗರು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಬಿಜೆಪಿ ಮುಖಂಡ ಮರುಳುಕುಂಟೆ ಕೃಷ್ಣಮೂರ್ತಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿರಿಯ ರಾಜಕಾರಣಿಯಾದ ರಮೇಶ್‌ ಕುಮಾರ್ ಅವರು ಕಿರಿಯರನ್ನು ಪ್ರೋತ್ಸಾಹಿಸುವ ಜತೆಗೆ ಮಾರ್ಗದರ್ಶನ ನೀಡಬೇಕು. ಆದರೆ, ಸದನದಲ್ಲಿ ಸುಧಾಕರ್ ಅವರು ಮಾತನಾಡುವ ಸಂದರ್ಭದಲ್ಲಿ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ವೈಯಕ್ತಿಕ ಟೀಕೆಗೆ ಇಳಿದಿದ್ದು ಬೇಸರ ತಂದಿದೆ. ಅದು ಸಾಲದು ಎಂಬಂತೆ ಅವರ ಬೆಂಬಲಿಗರು ಸುಧಾಕರ್ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವ ವಿಚಾರವಲ್ಲ’ ಎಂದು ತಿಳಿಸಿದರು.

‘ಸುಧಾಕರ್ ಅವರು ತಮ್ಮದೇ ಆದ ಗೌರವ ಹೊಂದಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಸತತ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಸುಧಾಕರ್ ಅವರ ರಾಜಕೀಯ ಏಳಿಗೆ ಸಹಿಸದೆ ರಮೇಶ್ ಕುಮಾರ್‌ ಅವರು ಅವರನ್ನು ಅನರ್ಹಗೊಳಿಸುವ ಮೂಲಕ ರಾಜಕೀಯವಾಗಿ ಮುಗಿಸಲು ನೋಡಿದರು. ಅದು ಕೈಗೂಡದಿದ್ದಾಗ ಸದನದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ಸುಧಾಕರ್ ಅವರ ವಿರುದ್ಧ ಟೀಕೆಗೆ ಮುಂದಾಗಿರುವುದು ದುರದೃಷ್ಟ. ಇನ್ನಾದರೂ ಅವರು ಸದನದ ಗೌರವ ಎತ್ತಿ ಹಿಡಿಯುವ ರೀತಿ ನಡೆದುಕೊಳ್ಳಲಿ’ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್‌ ಮಾತನಾಡಿ, ‘ರಮೇಶ್ ಕುಮಾರ್ ಅವರು ಸ್ಪೀಕರ್ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಅನೇಕ ಶಾಸಕರ ಭವಿಷ್ಯ ಹಾಳು ಮಾಡಲು ಪ್ರಯತ್ನಿಸಿದರು. ಆದರೆ ಮತದಾರರು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಸುಧಾಕರ್ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕೈಬಲಪಡಿಸಿದರು. ಸಚಿವರ ವಿರುದ್ಧ ರಮೇಶ್‌ ಕುಮಾರ್ ಅವರ ಬೆಂಬಲಿಗರು ನಿಂದನೆ ಮಾಡುವುದು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ದ್ಯಾವಣ್ಣ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ತಿರುಮಳಪ್ಪ, ಮುಖಂಡರಾದ ಮುನಿಕೃಷ್ಣ, ಮಂಜುನಾಥ್, ಮೊಹನ್, ಕೆ.ಸಿ.ವೆಂಕಟೇಶ್, ರಾಜೇಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು