ಸೋಮವಾರ, ಡಿಸೆಂಬರ್ 9, 2019
23 °C
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ರಾಜ್ಯ ಕುರಿ ಮತ್ತು ಮೇಕೆ ಅಭಿವೃದ್ಧಿ ಮಂಡಳಿಯ ಮಾಜಿ ಉಪಾಧ್ಯಕ್ಷ ಎನ್‌.ವೆಂಕಟೇಶ್ ಗೌಡ ವಾಗ್ದಾಳಿ

ಸುಧಾಕರ್‌ಗೆ ನಿರಾಸೆ ಕಟ್ಟಿಟ್ಟ ಬುತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಮತದಾರರಿಗೆ ಇಲ್ಲ ಸಲ್ಲದ ಭರವಸೆಗಳನ್ನು ನೀಡುತ್ತಾ ಬೇನಾಮಿಯಾಗಿ ಮತ್ತು ಅಕ್ರಮವಾಗಿ ಸಂಪಾದನೆ ಮಾಡಿರುವಂತಹ ಹಣವನ್ನು ನೀರಿನ ಹೊಳೆಯಂತೆ ಖರ್ಚು ಮಾಡಿ, ಜನಕ್ಕೆ ಟೋಪಿ ಹಾಕಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಅನರ್ಹ ಶಾಸಕ ಸುಧಾಕರ್ ಅವರಿಗೆ ಈ ಉಪಚುನಾವಣೆಯಲ್ಲಿ ನಿರಾಸೆಯಂತೂ ಕಟ್ಟಿಟ್ಟ ಬುತ್ತಿ’ ಎಂದು ರಾಜ್ಯ ಕುರಿ ಮತ್ತು ಮೇಕೆ ಅಭಿವೃದ್ಧಿ ಮಂಡಳಿಯ ಮಾಜಿ ಉಪಾಧ್ಯಕ್ಷ ಎನ್‌.ವೆಂಕಟೇಶ್ ಗೌಡ ಹೇಳಿದರು.

ನಗರದಲ್ಲಿ ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕುರುಬ ಸಮುದಾಯದ ಮತಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ರಾಜಕೀಯ ಮತ್ತು ಹಿರಿತನದ ಘನತೆಗೆ ಗೊತ್ತಿಲ್ಲದ ಕಂದಾಯ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕರೆತಂದು ಕುರುಬ ಸಮುದಾಯದ ಜಾತಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಇವರು ಎರಡು ಅವಧಿ ಅಧಿಕಾರದಲ್ಲಿದ್ದರು ಆಗ ಕುರುಬ ಸಮುದಾಯಕ್ಕೆ ಇವರ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

‘ಸುಧಾಕರ್ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಶಾಸಕರಾಗಿ ಪಕ್ಷಕ್ಕೆ ಹಾಗೂ ಮತದಾರರಿಗೆ ಮೋಸ ಮಾಡಿದ್ದಾರೆ. ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ ಅವರ ವಿಶ್ವಾಸವನ್ನು ಗಳಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಅವರನ್ನು ಕರೆತಂದು ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಬಳಿಕ ಅವರ ಬೆನ್ನಿಗೆ ಚೂರಿ ಹಾಕಿದರಲ್ಲ? ಅವರನ್ನು ನಾವು ನಂಬಬೇಕಾ? ಸಾವಿರಾರು ಕೋಟಿಯ ಕೆ.ಸಿ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳು ನಾನೇ ಮಾಡಿಸಿರುವುದು ಎಂದು ಹೇಳಲು ಸುಧಾಕರ್ ಅವರಿಗೆ ನಾಚಿಕೆಯಾಗುವುದಿಲ್ಲವೆ’ ಎಂದು ಪ್ರಶ್ನಿಸಿದರು.

‘ಕುರುಬ ಸಮುದಾಯದವರು ಕಾಂಗ್ರೆಸ್ ಪರವಾಗಿದ್ದು, ಸಿದ್ದರಾಮಯ್ಯನವರ ಅಭಿವೃದ್ಧಿಯನ್ನು ಮನಗಂಡು ಯಾವುದೇ ಕಾರಣಕ್ಕೂ ಬೇರೆ ಪಕ್ಷಗಳಿಗೆ ಮತ ಹಾಕುವುದಿಲ್ಲ ಎಂದು ನನಗೆ ವಿಶ್ವಾಸವಿದೆ. ಸುಧಾಕರ್ ಅವರು ಏನಾದರೂ ಮಾಡಿ ಗೆಲ್ಲಲೇಬೇಕು ಎಂದು ಹರಸಾಹಸಪಡುತ್ತಿದ್ದಾರೆ. ಆದರೆ ಜನರು ಸ್ವಚ್ಛ ರಾಜಕಾರಣ ಬಯಸುತ್ತಿದ್ದಾರೆ. ಎಂದೂ ಕಂಡರಿಯದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿರುವುದು ದುರಾದೃಷ್ಟವೇ ಸರಿ’ ಎಂದು ಹೇಳಿದರು.

‘ಸುಧಾಕರ್ ಅವರನ್ನು ಉಪ ಮುಖ್ಯಮಂತ್ರಿ, ಸಚಿವರನ್ನಾಗಿ ಮಾಡುತ್ತೇವೆ ಎಂದು ಬಿಜೆಪಿಯವರು ಆಮಿಷ ಒಡ್ಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಭ್ರಷ್ಟ ಕೋಮುವಾದಿ, ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ ಬಿಜೆಪಿಗೆ ಯಾರೂ ಮತ ನೀಡಬಾರದು. ಕಾಂಗ್ರೆಸ್ ಅಭ್ಯರ್ಥಿ ಅಂಜನಪ್ಪ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು. ಉಪಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿದೆ’ ಎಂದರು.

ಕುರುಬ ಸಮುದಾಯದ ಹಿರಿಯ ಮುಖಂಡ ಎಸ್.ವೈ.ಮರಿಯಪ್ಪ, ಕಿಸಾನ್ ಖೇತ್ ಮಜ್ದೂರ್ ಜಿಲ್ಲಾ ಘಟಕ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಸುಮಿತ್ರಾ, ಸಿ.ಪಿ ನಾರಾಯಣಸ್ವಾಮಿ, ಕಲ್ಲಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು