ಭಾನುವಾರ, ಸೆಪ್ಟೆಂಬರ್ 15, 2019
30 °C
ಪೊಲೀಸ್ ಇಲಾಖೆ ವತಿಯಿಂದ ಗಣೇಶ ಹಬ್ಬದ ಪೂರ್ವಭಾವಿ ಸಭೆ ಆಯೋಜನೆ

ಶಾಂತಿಯುತ ಹಬ್ಬ ಆಚರಣೆಗೆ ಸಹಕರಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ನಗರದಲ್ಲಿ ಶಾಂತಿಯುತ ಮತ್ತು ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ನಿಟ್ಟಿನಲ್ಲಿ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಪದಾಧಿಕಾರಿಗಳು, ಸಾರ್ವಜನಿಕರು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು. ಜಿಲ್ಲಾಡಳಿತ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಡಿವೈಎಸ್ಪಿ ಪ್ರಭುಶಂಕರ್ ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಗಣೇಶ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕವಾಗಿ ಗಣೇಶ ಮೂರ್ತಿ ಕೂಡಿಸುವವರು ಪೆಂಡಾಲ್ ಹಾಕುವ ಮುಂಚೆ ಸ್ಥಳದ ಮಾಲೀಕರು ಹಾಗೂ ನಗರಸಭೆ, ಬೆಸ್ಕಾಂ, ಪೊಲೀಸ್ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ. ಅದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಅಡಿ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಪರವಾನಗಿ ಕೌಂಟರ್ ತೆರೆಯಲಾಗುತ್ತಿದೆ’ ಎಂದು ತಿಳಿಸಿದರು.

‘ಆ.29 ರಿಂದ ಮೂರು ದಿನ ಸಾರ್ವಜನಿಕವಾಗಿ ಗಣೇಶ ಮೂರ್ತಿ ಕೂಡಿಸುವವರು ಪರವಾನಗಿ ಪಡೆಯಬಹುದು. ಪರವಾನಗಿ ಪಡೆಯುವಾಗಲೇ ಸಂಘಟಕರು ಮೂರ್ತಿಯನ್ನು ಎಷ್ಟು ದಿನಕ್ಕೆ (3,5 ಮತ್ತು 7 ದಿನ) ವಿಸರ್ಜಿಸುತ್ತಾರೆ ಎಂಬುದು ತಿಳಿಸಬೇಕು. ನಿಗದಿತ ದಿನದಂತೆ ಮೂರ್ತಿ ವಿಸರ್ಜನೆ ಕಾರ್ಯ ನಡೆಸಬೇಕು’ ಎಂದರು.

‘ಪ್ರತಿಯೊಬ್ಬರೂ ಮಣ್ಣಿನಿಂದ ತಯಾರಿಸಿದ ‘ಪರಿಸರ ಸ್ನೇಹಿ’ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್’ (ಪಿಒಪಿ) ಮೂರ್ತಿಗಳನ್ನು ಪ್ರತಿಷ್ಠಾಪಿಸಿದವರ ವಿರುದ್ಧ ದೂರು ದಾಖಲಿಸಲಾಗುವುದು. ಸಂಘಟಕರು ಭಕ್ತರಿಗೆ ಪ್ಲಾಸ್ಟಿಕ್ ಬ್ಯಾಗ್‌ ಬಳಸದಂತೆ ಮನವೊಲಿಸುವ ಕೆಲಸ ಮಾಡಬೇಕು. ಜತೆಗೆ ಪ್ರಸಾದ ನೀಡಲು ಪ್ಲಾಸ್ಟಿಕ್ ಉತ್ಪನ್ನ ಬಳಸಬಾರದು’ ಎಂದು ಹೇಳಿದರು.

ಸರ್ಕಲ್ ಇನ್‌ಸ್ಪೆಕ್ಟರ್‌ ಸುದರ್ಶನ್ ಮಾತನಾಡಿ, ‘ನಗರದಲ್ಲಿ ಹಿಂದಿನಿಂದಲೂ ಶಾಂತಿ, ಭಾವೈಕ್ಯದಿಂದ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಅದರಂತೆ ಪ್ರತಿಯೊಬ್ಬರೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಈ ವರ್ಷವೂ ತಿಪ್ಪೇನಹಳ್ಳಿ ಬಳಿ ಇರುವ ಧರ್ಮರಾಯನ ಕೆರೆಯ ಸಮೀಪದಲ್ಲಿರುವ ಜಕ್ಕಲಮಡಗು ನೀರು ಸಂಗ್ರಹಣೆಯ ಹಳೆಯ ಟ್ಯಾಂಕ್‌ನಲ್ಲಿ ಮೂರ್ತಿ ವಿಸರ್ಜನೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಾರ್ವಜನಿಕವಾಗಿ ಗಣೇಶ ಮೂರ್ತಿ ಕೂಡಿಸುವ ಪೆಂಡಾಲ್‌ನಲ್ಲಿ ರಾತ್ರಿ 10ರಿಂದ ಬೆಳಗಿನ 6ರ ವರೆಗೆ ಧ್ವನಿವರ್ಧಕ ಬಳಸಬಾರದು. ಪೆಂಡಾಲ್ ಮತ್ತು ಮೆರವಣಿಗೆಯಲ್ಲಿ ಡಿಜೆ ಹಾಕಬಾರದು. ಅಶ್ಲೀಲ ನೃತ್ಯ ಏರ್ಪಡಿಸಬಾರದು. ಮೂರ್ತಿ ವಿಸರ್ಜಿಸುವವರು ವಿಸರ್ಜನಾ ಹೊಂಡದ ಬಳಿ ಸಂಜೆ 6ರ ಮುಂಚಿತವಾಗಿ ಹಾಜರಿರಬೇಕು’ ಎಂದರು.

ನಗರ ಪೊಲೀಸ್ ಠಾಣೆ ಎಸ್‌ಐ ವರುಣ್‌ಕುಮಾರ್, ನಗರಸಭೆ ಆಯುಕ್ತ ಉಮಾಕಾಂತ್, ಮುಖಂಡ ಮಹಾಕಾಳಿ ಬಾಬು, ಬೆಸ್ಕಾಂ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು, ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Post Comments (+)