ಬುಧವಾರ, ಜನವರಿ 20, 2021
17 °C
ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆ ಪ್ರಚಾರಕ್ಕೆ ಚಾಲನೆ

ಪಿಂಚಣಿ ಯೋಜನೆ ಪ್ರಯೋಜನ ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಯನ್ನು ಅಧಿಕಾರಿಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಜತೆಗೆ ಈ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್. ಲತಾ ಹೇಳಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಪಿಂಚಣಿ ಯೋಜನೆ ಕುರಿತು ಅರಿವು ಮೂಡಿಸುವ ಸಂಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಹಮಾಲಿಗಳು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ಆಟೊ ಚಾಲಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಈ ಯೋಜನೆಯು 18 ರಿಂದ 40 ವರ್ಷದವರಿಗೆ ಮಾತ್ರ ಅನ್ವಯವಾಗುತ್ತದೆ. ₹ 55 ರಿಂದ ₹ 200 ಪ್ರತಿ ತಿಂಗಳು ವಂತಿಗೆ ಪಾವತಿಸಬೇಕು. ಒಬ್ಬ ವ್ಯಕ್ತಿ 30 ವರ್ಷವಾಗಿದ್ದರೆ ತಿಂಗಳಿಗೆ ₹ 100 ಪಾವತಿಸಬೇಕು. ಆತ 60 ವರ್ಷವಾದಾಗ ಪ್ರತಿವರ್ಷ ₹ 36 ಸಾವಿರ ಪಿಂಚಣಿ ಬರಲಿದೆ. ಒಂದು ವೇಳೆ ಪಿಂಚಣಿ ಪಡೆಯುವ ವ್ಯಕ್ತಿ ಮೃತಪಟ್ಟರೆ ಆತನ ಪತ್ನಿಗೆ ಶೇಕಡ 50ರಷ್ಟು ಪಿಂಚಣಿ ಸಿಗಲಿದೆ. ಹೀಗಾಗಿ ಅಸಂಘಟಿತ ಕಾಮಿರ್ಕಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

‘ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಯೋಜನೆಯ ಪ್ರಮುಖ ಅಂಶಗಳನ್ನೊಳಗೊಂಡ ಭಿತ್ತಿಪತ್ರಗಳು, ಬ್ಯಾನರ್‌ಗಳನ್ನು ಪ್ರತಿ ಇಲಾಖೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಗಮನಕ್ಕೆ ಬರುವಂತೆ ಹಾಕಬೇಕು. ಅಲ್ಲದೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಕಾರ್ಮಿಕ ಅಧಿಕಾರಿ ವರಲಕ್ಷ್ಮೀ ಮಾತನಾಡಿ, ‘ತಿಂಗಳಿಗೆ ₹15,000 ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿದವರು ಈ ಯೋಜನೆಗೆ ಅರ್ಹರು. ಫಲಾನುಭವಿಗಳು ಬ್ಯಾಂಕ್ ಉಳಿತಾಯ ಖಾತೆ ಹಾಗೂ ಆಧಾರ್ ಸಂಖ್ಯೆ ಹೊಂದಿರಬೇಕು. ಅರ್ಹ ಫಲಾನುಭವಿಗಳು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳ ವಿವರಗಳನ್ನು ಎಲ್‌ಐಸಿ ಶಾಖೆಗಳು, ಕಾರ್ಮಿಕ ಇಲಾಖೆ ಕಚೇರಿಗಳು, ಭವಿಷ್ಯನಿಧಿ ಇಲಾಖೆ ಕಚೇರಿ ಅಥವಾ http://locator.csccloud.in ಜಾಲತಾಣದಲ್ಲಿ ಪಡೆಯಬಹುದು’ ಎಂದರು.

‘ಯೋಜನೆಗೆ ನೋಂದಾಯಿತ ಫಲಾನುಭವಿಯ ವಯಸ್ಸು 60 ಪೂರ್ಣಗೊಂಡ ನಂತರ ತಿಂಗಳಿಗೆ ₹3000 ಖಚಿತ ಕನಿಷ್ಠ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಚಂದಾದಾರರು 10 ವರ್ಷದ ಒಳಗೆ ಯೋಜನೆಯಿಂದ ನಿರ್ಗಮಿಸಿದಲ್ಲಿ, ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಆ ಅವಧಿಗೆ ಉಳಿತಾಯ ಖಾತೆಗೆ ಪಾವತಿಸಲಾಗುವ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ’ ಎಂದು ಹೇಳಿದರು.

ಕಾರ್ಮಿಕ ನಿರೀಕ್ಷಕರಾದ ಮಂಜುಳಾ, ಕಲಾವಾಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು