ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದಾಹ ತಣಿಸುವ ನಲ್ಲಿ ಮಡಕೆ

ಕುಂಬಾರರಿಗೆ ಜೇಡಿಮಣ್ಣಿನ ಕೊರತೆ
Last Updated 9 ಮಾರ್ಚ್ 2021, 3:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕೊರೊನಾ ಭಯದಿಂದ ಬಿಸಿನೀರು ಕುಡಿಯುತ್ತಿದ್ದ ಬಹುತೇಕರು ಇದೀಗ ಹಗಲಿನಲ್ಲಿ ತಾಪಮಾನ ಏರುತ್ತಿರುವ ಕಾರಣ ತಂಪು ನೀರಿನತ್ತ ಕೈಚಾಚುವಂತಾಗಿದೆ.

ಬೇಸಿಗೆ ಧಗೆಗೆ ಬಾಯಾರಿಕೆ ಹೆಚ್ಚು. ಬಿಸಿಲಿನ ಝಳಕ್ಕೆ ಒತ್ತರಿಸಿ ಬರುವ ಬೆವರು ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದೇಹ ಹೆಚ್ಚು ನೀರನ್ನು ಬೇಡುತ್ತದೆ. ಬಹುತೇಕರಿಗೆ ಫ್ರಿಡ್ಜ್‌ ನೀರು ಒಗ್ಗದು. ತಂಪೆನಿಸುವ ನೀರು ಮಾತ್ರ ದಾಹ ತೀರಿಸಬಲ್ಲುದು ಎನ್ನುವ ಕಾರಣಕ್ಕೆ ಅನೇಕರು ಇದೀಗ ಮಣ್ಣಿನ ಮಡಕೆಗಳಿಗೆ ಮನಸೋಲುತ್ತಿದ್ದಾರೆ.

ನಗರದ ಕುಂಬಾರಪೇಟೆಯಲ್ಲಿ ದುಂಡನೆಯ ಮಡಕೆಗಳಿಗೆ ನಲ್ಲಿ ಅಳವಡಿಸಿ ಮಾರಲಾಗುತ್ತಿದೆ. ಮಡಕೆಗಳನ್ನು ಹೇಗೆ ತಯಾರಿಸಿರುವರೆಂದರೆ ಬೇಕಿದ್ದರೆ ಶುದ್ಧೀಕರಿಸಿರುವ ನೀರನ್ನು ತುಂಬಿಸುವ 25 ಲೀಟರ್ ಕ್ಯಾನ್‌ ಅನ್ನು ಅದರ ಮೇಲೆ ಬೋರಲು ಸಹ ಹಾಕಬಹುದು. ಇಲ್ಲವಾದರೆ ಅದರಲ್ಲಿ ನೀರು ತುಂಬಿಸಿ ಮಣ್ಣಿನಲ್ಲಿ ತಯಾರಿಸಿದ ಮುಚ್ಚಳವನ್ನು ಮುಚ್ಚಬಹುದಾಗಿದೆ.

‘ದಿನ ಕಳೆದಂತೆ ಮಾರುಕಟ್ಟೆಗೆ ತರಹೇವಾರಿ ಮಣ್ಣಿನ ಮಡಕೆಗಳು ಬರುತ್ತಿವೆ. ಗಾತ್ರ, ವಿನ್ಯಾಸ, ಚೆಂದ, ವೈವಿಧ್ಯದ ಮಡಕೆಗಳಿಗೆ ಈ ಕಾಲದಲ್ಲಿ ಬೇಡಿಕೆಯೂ ಹೆಚ್ಚು. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆಂದಷ್ಟೇ ಅಲ್ಲ, ಅಡುಗೆ ಪದಾರ್ಥಗಳು ಹಾಳಾಗದಂತೆ ಇಡುವ ಸಲುವಾಗಿಯೂ ಅನೇಕರು ಮಡಕೆಯನ್ನು ಬಳಸುತ್ತಾರೆ. ಮಡಕೆಯಲ್ಲಿ ಮಾಡುವ ಅಡುಗೆ ರುಚಿಕರವೂ ಹೌದು’ ಎಂದು ಕುಂಬಾರಪೇಟೆಯ ಮಡಕೆಗಳನ್ನು ಮಾರುವ ಪ್ರದೀಪ್ ತಿಳಿಸಿದರು.

‘ಮೊದಲಿನ ಕಾಲದ ಮಡಕೆಗಳಿಗೂ ಇಂದಿನ ಮಡಕೆಗಳಿಗೂ ಹೋಲಿಕೆ ಮಾಡುವಂತೆಯೇ ಇಲ್ಲ. ಯಾಕೆಂದರೆ ಅಂದಿನ ಮಣ್ಣಿನ ಗುಣಮಟ್ಟ ಉತ್ತಮವಾಗಿತ್ತು. ಮಡಕೆಗೆ ಉತ್ತಮವಾದ ಜೇಡಿಮಣ್ಣಿನ ಕೊರತೆ ಇದೆ. ಕೆರೆಗಳು ಇಲ್ಲ. ಇರುವ ಕೆರೆಗಳಲ್ಲಿ ನೀರು ಬತ್ತಿದೆ. ಮೊದಲು ಕೆರೆಯ ಮಧ್ಯದಿಂದ ಜೇಡಿಮಣ್ಣು ಸಂಗ್ರಹ ಮಾಡಿ ಮಡಕೆ ಮಾಡುತ್ತಿದ್ದರು. ಈಗ ಕೆರೆಯ ಬದಿಗೆ ಇರುವ ಮಣ್ಣನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಅವುಗಳಲ್ಲಿ ಕೇವಲ ಜೇಡಿಮಣ್ಣು ಬಿಟ್ಟು ಮರಳು, ಕಲ್ಲು, ಇತರೆ ಮಣ್ಣು ಸೇರಿರುತ್ತದೆ. ಅವುಗಳಲ್ಲೇ ಆದಷ್ಟು ಶುದ್ಧಗೊಳಿಸಿ ಮಡಕೆ ತಯಾರಿಸಲಾಗುತ್ತದೆ. ಗೃಹೋಪಯೋಗಿ ಮಡಕೆಗಳಿಗೆ ಉತ್ತಮ ಮಣ್ಣು ಬೇಕು. ಉಳಿಕೆ ಮಣ್ಣನ್ನು ಹೂಕುಂಡಗಳನ್ನು ಮಾಡಲು ಬಳಸಲಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ.

ಸಂದರ್ಭಕ್ಕೆ ಅನುಗುಣವಾಗಿ ಮಣ್ಣಿನಿಂದ ಮಾಡಿದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ದೀಪಾವಳಿಯಲ್ಲಿ ದೀಪ, ಮಳೆಗಾಲದಲ್ಲಿ ಹೂಕುಂಡ, ಬೇಸಿಗೆಯಲ್ಲಿ ನೀರು ಶೇಖರಿಸುವ ಮಡಕೆಗಳನ್ನು ಜನರು ಹೆಚ್ಚಾಗಿ ಖರೀದಿಸುತ್ತಾರೆ. ನಾವು ಹೊಸಕೋಟೆ, ದೇವನಹಳ್ಳಿ, ವಿಜಯಪುರ ಸುತ್ತಮುತ್ತಲಿನ ಕುಂಬಾರರ ಬಳಿ ಕೊಂಡು ತಂದು ಮಾರುತ್ತೇವೆ. ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ವ್ಯಾಪಾರವೇ ಇಲ್ಲವಾಗಿತ್ತು. ಆಗ ತಂದಿದ್ದನ್ನೇ ಈಗ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಅವರು.

ಮಡಕೆ ಚೆನ್ನಾಗಿದೆಯೇ ಇಲ್ಲವೇ ಎಂದು ನೋಡಲು ಅದನ್ನು ನಿಧಾನವಾಗಿ ಬಡಿದು ನೋಡುವುದೊಂದೇ ಉಪಾಯ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.

ಪೊಳ್ಳು ಅಥವಾ ಒಡೆದಿದೆ ಎಂದಾದರೆ ಆಗ ಬರುವ ಶಬ್ದವೇ ಬೇರೆ. ಬೆರಳಿನಿಂದ ಬಡಿದು ನೋಡಿದಾಗ ಕಂಚಿನ ಪಾತ್ರೆಯಂತೆ ಟಣ್‌ ಎನ್ನುವ ಶಬ್ದ ಬಂದರೆ ಮಡಕೆ ಚೆನ್ನಾಗಿದೆ ಎಂದು ಅರ್ಥ. ಶಬ್ದದಲ್ಲಿ ತುಸು ವ್ಯತ್ಯಾಸವಾದರೂ ಸಮಸ್ಯೆ ಇದೆ ಎಂದುಕೊಳ್ಳಬಹುದು. ಶಬ್ದ ಕೇಳಿ ಮಡಕೆ ಚೆನ್ನಾಗಿದೆಯೇ ಎಂದು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ ನೀರು ತುಂಬಿಸಿಯೂ ಪರೀಕ್ಷಿಸಿಕೊಳ್ಳಬಹುದು ಎಂದು ಹೇಳಿದರು.

ಮಡಕೆಯಲ್ಲಿ ಶೇಖರಿಸಿದ ನೀರು ಕೆಲವೊಮ್ಮೆ ಮಣ್ಣಿನ ಕಂಪಾಗುತ್ತದೆ ಎಂಬ ಆರೋಪವೂ ಇದೆ. ಅದಕ್ಕೆ ಮಡಕೆ ನಿರ್ವಹಣೆ ಮಾಡುವ ವಿಧಾನ ತಪ್ಪಾಗಿರುತ್ತದೆಯೇ ಹೊರತು ಮಡಕೆಯಲ್ಲಿ ದೋಷವಿರುವುದಿಲ್ಲ ಎನ್ನುವುದೂ ಮಡಕೆ ವ್ಯಾಪಾರಿಗಳ ಅನುಭವ. ಮಡಕೆ ಖರೀದಿಸಿದ ನಂತರ ಒಂದು ದಿನ ಅದರಲ್ಲಿ ಪೂರ್ತಿಯಾಗಿ ನೀರು ತುಂಬಿ ಹಾಗೆಯೇ ಬಿಡಬೇಕು. ಮರುದಿನ ನೀರನ್ನು ಚೆಲ್ಲಿ ಮಡಕೆಯನ್ನು ಬಿಸಿಲಿನಲ್ಲಿ ಒಣಗಿಸಬೇಕು.

ಆಮೇಲೆ ಅದರಲ್ಲಿ ನೀರನ್ನು ಶೇಖರಿಸಿ ಕುಡಿಯಲು ಬಳಸಿಕೊಳ್ಳಬೇಕು. ಮಡಕೆ ಸ್ವಚ್ಛಗೊಳಿಸಲು ಸ್ಟೀಲ್‌ ನಾರು, ಸೋಪ್‌ಗಳನ್ನು ಬಳಸಲೇಬಾರದು. ತೆಂಗಿನ ನಾರು ಅಥವಾ ಪ್ಲಾಸ್ಟಿಕ್‌ ನಾರಿನಿಂದ ನಿಧಾನವಾಗಿ ಅದರ ಒಳಮೈಯನ್ನು ಸ್ವಚ್ಛ ಮಾಡಬೇಕು. ಇದೇ ವಿಧಾನ ಅನುಸರಿಸಿದರೆ ಮಣ್ಣಿನ ವಾಸನೆಯೂ ಬರುವುದಿಲ್ಲ. ಮಡಕೆಯ ಬಾಳಿಕೆಯೂ ಚೆನ್ನಾಗಿರುತ್ತದೆ. ನೀರು ತಂಪಾಗಿರುತ್ತದೆ. ಆಹಾರ ಪದಾರ್ಥಗಳೂ ಕೆಡುವುದಿಲ್ಲ ಎಂಬ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT