ಗುರುವಾರ , ಡಿಸೆಂಬರ್ 5, 2019
19 °C
ಕಾಂಗ್ರೆಸ್ ಅಭ್ಯರ್ಥಿ ಮೆರವಣಿಗೆಯಲ್ಲಿ ಶಾಸಕ ಕೃಷ್ಣಬೈರೇಗೌಡ ಮನವಿ

ಪಕ್ಷಾಂತರ ಮಾಡಿದವರಿಗೆ ಪಾಠ ಕಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಗುಜರಾತ್, ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿದವರಿಗೆ ಈಗಾಗಲೇ ಅಲ್ಲಿನ ಜನ ಪಾಠ ಕಲಿಸಿದ್ದಾರೆ. ಜನರ ನಂಬಿಕೆಯನ್ನು ಮಾರಾಟ ಮಾಡಿದಂತಹವರಿಗೆ ಪಾಠ ಕಲಿಸುವುದು ಇಡೀ ದೇಶದಲ್ಲಿ ಶುರುವಾಗಿದೆ. ಅದು ಇವತ್ತು ಚಿಕ್ಕಬಳ್ಳಾಪುರದಲ್ಲೂ ಪ್ರಾರಂಭವಾಗಿದೆ’ ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಯ ಮೆರವಣಿಗೆಯಲ್ಲಿ ಮಾತನಾಡಿದ ಅವರು, ‘ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್‌ನಿಂದ ಎಲ್ಲ ಅಧಿಕಾರ ಅನುಭವಿಸಿ, ಆ ಅಧಿಕಾರದಿಂದ ಇವತ್ತು ಶ್ರೀಮಂತರಾಗಿದ್ದಾರೆ. ಮುಂದೆಯೂ ಸಹ ನಿರಂತರವಾಗಿ ಅಧಿಕಾರ ಅನುಭವಿಸಬೇಕು ಎಂದು ಆಸೆ ಪಟ್ಟು ನಂಬಿಕೆಗೆ ದ್ರೋಹ ಮಾಡಿದ್ದಾರೆ. ಮತದಾರರು ಅವರಿಗೆ ಕಾಂಗ್ರೆಸ್ ಪಕ್ಷದಿಂದ ನಿಮಗೆ ಏನು ಅನ್ಯಾಯವಾಗಿದೆ? ಯಾಕೆ ದ್ರೋಹ ಬಗೆದಿರಿ ಎಂದು ಕೇಳಬೇಕು’ ಎಂದು ತಿಳಿಸಿದರು.

‘ಮೈತ್ರಿ ಸರ್ಕಾರವನ್ನು ಕೆಡವಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಇಲ್ಲಿನ ಅನರ್ಹ ಶಾಸಕರು ಶಪಥ ತೊಟ್ಟು ಕೆಲಸ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ದ್ರೋಹ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೆ ಮಾತು ಕೊಟ್ಟವರು ಆ ಮಾತನ್ನು ಸುಳ್ಳು ಮಾಡಿದ್ದಾರೆ. ಇಂತಹ ದ್ರೋಹಿಗಳಿಗೆ ಪಾಠ ಕಲಿಸಬೇಕಾದ ಸಮಯ ಬಂದಿದೆ’ ಎಂದು ಹೇಳಿದರು.

‘ಅನರ್ಹ ಶಾಸಕರು ಅಧಿಕಾರ, ಹಣಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ. ಅನರ್ಹರು ಎಂದರೆ ನಾಲಾಯಕ್ ಎಂದರ್ಥ. ಸುಧಾಕರ್ ಅವರು ಒಬ್ಬ ನಾಲಾಯಕ್ ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಇಂತವರು ಯಾವುದೇ ಕಾರಣಕ್ಕೆ ಗೆಲ್ಲಬಾರದು. ಇಂತಹವರನ್ನು ಮನೆಗೆ ಕಳುಹಿಸುವ ಮೂಲಕ ಧರ್ಮ ಸ್ಥಾಪನೆ ಮಾಡಬೇಕು. ನಮ್ಮ ಅಭ್ಯರ್ಥಿಯ ಬಳಿ ಹಣ ಇಲ್ಲದೆ ಇರಬಹುದು ಆದರೆ ಧರ್ಮ ಮತ್ತು ಜನಗಳ ಶಕ್ತಿ ಇದೆ’ ಎಂದರು.

ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ‘ರಾಮನ ತಂದೆ ದಶರಥ ಸಮಾಜದಲ್ಲಿ ಎಲ್ಲಿಯೂ ದಶರಥನ ದೇವಸ್ಥಾನವಿಲ್ಲ. ಆದರೆ ರಾಮನ ಬಲಗೈ ಬಂಟ, ಸಮಾಜ ಸೇವಕ ಆಂಜನೇಯನ ಗುಡಿಗಳಿವೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಅವರು ಸಮಾಜ ಸೇವಕ. ಅವರಿಗೆ ಆಶೀರ್ವದಿಸಿ ವಿಧಾನಸೌದಕ್ಕೆ ಕಳುಹಿಸಬೇಕು. ಹಸ್ತದ ಗುರ್ತಿಗೆ ಒತ್ತಿದ ಶಬ್ದ ದೆಹಲಿಯವರೆಗೆ ಕೇಳಿಸಬೇಕು’ ಎಂದು ಹೇಳಿದರು.

ಮೆರವಣಿಗೆಯಲ್ಲಿ ನಂದಿ ಆಂಜನಪ್ಪ ಅವರಿಗೆ ಉಪ ಚುನಾವಣೆ ವೀಕ್ಷಕರು, ಶಾಸಕರಾದ ಎನ್.ಎಚ್‌.ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಮಾಜಿ ಶಾಸಕರಾದ ಎನ್.ಸಂಪಂಗಿ, ಎಸ್.ಎಂ.ಮುನಿಯಪ್ಪ, ಅನಸೂಯಮ್ಮ, ಮುಖಂಡರಾದ ಜಿ.ಎಚ್.ನಾಗರಾಜ್, ಯಲುವಹಳ್ಳಿ ರಮೇಶ್‌, ಕೆ.ವಿ.ನವೀನ್ ಕಿರಣ್, ಗಂಗರೇಕಾಲುವೆ ನಾರಾಯಣಸ್ವಾಮಿ, ರಫಿಕ್, ಬಿ.ಎಸ್.ರಫಿವುಲ್ಲಾ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು.

ಪ್ರತಿಕ್ರಿಯಿಸಿ (+)