ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಚೇತರಿಕೆ ಹಾದಿಯಲ್ಲಿ ದೇಗುಲ ಆದಾಯ

ಗರಿಷ್ಠ ಆದಾಯಗಳಿಸುವ ವಿದುರ ಅಶ್ವತ್ಥನಾರಾಯಣಸ್ವಾಮಿ, ಭೋಗ ನಂದೀಶ್ವರ ದೇವಾಲಯ
Last Updated 11 ಫೆಬ್ರುವರಿ 2022, 3:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಮುಜುರಾಯಿ ಇಲಾಖೆ ವ್ಯಾಪ್ತಿಯ ವಿದುರಾಶ್ವತ್ಥದ ವಿದುರ ಅಶ್ವತ್ಥನಾರಾಯಣ ಮತ್ತು ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲಗಳಲ್ಲಿ ಆದಾಯ ಸಂಗ್ರಹ ದಿನದಿಂದ ದಿನಕ್ಕೆ ಸಾಮಾನ್ಯ ಸ್ಥಿತಿಗೆ ಬರುತ್ತಿದೆ.

ಜಿಲ್ಲೆಯಲ್ಲಿ ವಾರ್ಷಿಕ ಹೆಚ್ಚು ಆದಾಯಗಳಿಸುವ ದೇಗುಲಗಳು ಎನ್ನುವ ಹಿರಿಮೆಗೆ ಈ ಎರಡೂ ದೇಗುಲಗಳು ಪಾತ್ರವಾಗಿವೆ.ಕೋವಿಡ್ ಕಾರಣದಿಂದ ಇವುಗಳ ಆದಾಯ ಕುಸಿದಿತ್ತು. ಒಂದು ಹಂತದಲ್ಲಿ ಭೋಗ ನಂದೀಶ್ವರ ದೇಗುಲದ ಆದಾಯ ಗಣನೀಯವಾಗಿ ಕುಸಿದಿದ್ದು ‘ಎ’ ಗ್ರೇಡ್‌ನ ಆದಾಯ ಬರುತ್ತಿದ್ದ ದೇಗುಲ ‘ಸಿ’ ಗ್ರೇಡ್ ದೇಗುಲದ ಆದಾಯ ನೋಡುವಂತಾಗಿತ್ತು.

ಕೋವಿಡ್ ಮತ್ತು ನಿರ್ಬಂಧಗಳ ಕಾರಣ ಈ ಎರಡೂ ದೇಗುಲಗಳ ಆದಾಯ ಕುಸಿದಿತ್ತು. ಈಗ ಮತ್ತೆ ದೇಗುಲಗಳಲ್ಲಿ ಆದಾಯ ಯಥಾಸ್ಥಿತಿ ತಲುಪುವ ಹಂತದಲ್ಲಿದೆ.

ವಿದುರ ಅಶ್ವತ್ಥನಾರಾಯಣ ದೇಗುಲದಲ್ಲಿ ಹುಂಡಿಯ ಹಣ ಮತ್ತು ವಿವಿಧ ಸೇವೆಗಳು ಸೇರಿ ವಾರ್ಷಿಕ ₹ 1 ಕೋಟಿಯಿಂದ ₹ 1.50 ಕೋಟಿಯವರೆಗೂ ಆದಾಯ ಸಂಗ್ರಹ ವಾಗುತ್ತಿತ್ತು. ಭೋಗ ನಂದೀಶ್ವರ ದೇಗುಲದಲ್ಲಿ ₹ 40 ಲಕ್ಷದಿಂದ ₹ 50 ಲಕ್ಷದವರೆಗೆ ಆದಾಯ ಸಂಗ್ರಹ ವಾಗುತ್ತಿತ್ತು.ಸಾಮಾನ್ಯವಾಗಿ ಮುಜುರಾಯಿ ದೇಗುಲಗಳಲ್ಲಿ ಸ್ವಚ್ಛತೆಯ ನಿರ್ವಹಣೆ, ಭದ್ರತೆ ಹೀಗೆ ವಿವಿಧ ವೆಚ್ಚಗಳು ತಗಲುತ್ತವೆ. ಕೆಲವು ಕಡೆ ಪ್ರಸಾದ (ಊಟ)ದ ವ್ಯವಸ್ಥೆಯೂ ಇರುತ್ತದೆ.

ವಿದುರ ಅಶ್ವತ್ಥನಾರಾಯಣ ದೇಗುಲಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಷ್ಟೇ ಅಲ್ಲ ರಾಜ್ಯದ ನಾನಾ ಭಾಗಗಳ ಭಕ್ತರು ಬರುತ್ತಾರೆ. ನಾಗಪ್ರತಿಷ್ಠೆ, ಅರ್ಚನೆ, ಅಭಿಷೇಕ, ಸರ್ಪ ಸಂಸ್ಕಾರ, ನವಗ್ರಹ ಶಾಂತಿ ಸೇರಿದಂತೆ ವಿವಿಧ ಸೇವೆಗಳು ಪ್ರಮುಖವಾಗಿ ನಡೆಯುತ್ತವೆ.

ಭೋಗ ನಂದೀಶ್ವರ ದೇಗುಲ ದಲ್ಲಿಯೂ ರುದ್ರಾಭಿಷೇಕ, ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳನ್ನು ಭಕ್ತರು ನೆರವೇರಿಸುತ್ತಾರೆ. ಹುಂಡಿಯ ಹಣಕ್ಕಿಂತ ಈ ಸೇವೆಗಳ ರೂಪದಲ್ಲಿ ಬರುವ ಹಣವೇ ಈ ದೇಗುಲಗಳ ಪ್ರಮುಖ ಆದಾಯದ ಮೂಲವಾಗಿದೆ.ಎರಡು ವರ್ಷಗಳಲ್ಲಿ ಬಂದ ಕೋವಿಡ್ ಮತ್ತು ಲಾಕ್‌ಡೌನ್ ಈ ದೇಗುಲಗಳ ಆದಾಯಕ್ಕೆ ಪೆಟ್ಟು ನೀಡಿತು.

ನಂದಿಗೆ ಪ್ರವೇವಿಲ್ಲದಿದ್ದು ಪೆಟ್ಟು: ಲಾಕ್‌ಡೌನ್ ಸಮಯದಲ್ಲಿ ಪ್ರಸಿದ್ಧ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಲಾಕ್‌ಡೌನ್ ತೆರವಾದ ನಂತರ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿ ಮೂರು ತಿಂಗಳು ಪ್ರವೇಶ ಬಂದ್ ಆಯಿತು. ಆ ನಂತರ ವಾರಾಂತ್ಯದ ನಿಷೇಧಾಜ್ಞೆ ಜಾರಿಯಾಯಿತು. ಈ ಎಲ್ಲ ಕಾರಣಗಳು ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದ ಆದಾಯ ಗಣನೀಯವಾಗಿ ಕುಸಿಯಲು ಕಾರಣವಾಯಿತು.

ಸಾಮಾನ್ಯವಾಗಿ ನಂದಿ ಗಿರಿಧಾಮಕ್ಕೆ ಬರುವ ಪ್ರವಾಸಿಗರು ಐತಿಹಾಸಿಕ ಭೋಗ ನಂದೀಶ್ವರ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ಪರಿಸರವನ್ನು ಆಹ್ಲಾದಿಸುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ದೇಗುಲಗಳಿಗೆ ಪ್ರವೇಶ ನಿರ್ಬಂಧಿಸಲಾಯಿತು. ಸೇವೆಗಳಿಗೆ ಅವಕಾಶವಿಲ್ಲದಂತೆ ಪೂಜೆ, ದರ್ಶನಕ್ಕೆ ಮಾತ್ರ ಅವಕಾಶ ಕೊಡಲಾಯಿತು. ಈ ವೇಳೆ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಭೋಗ ನಂದೀಶ್ವರ ದೇಗುಲ ಖಾಲಿ ಖಾಲಿ ಎನ್ನುವಂತೆ ಇತ್ತು.

ಈಗ ಎರಡೂ ದೇಗುಲಗಳಿಗೆ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಸೇವೆಗಳು ಸಹ ನಡೆಯುತ್ತಿವೆ. ಆದಾಯ ಸಹ ಯಥಾಸ್ಥಿತಿಗೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT