ಭಾನುವಾರ, ಸೆಪ್ಟೆಂಬರ್ 15, 2019
30 °C
ಕೈವಾರ ಸಮೀಪ ಇತ್ತೀಚೆಗೆ ಉಗ್ರರು ದುಷ್ಕೃತ್ಯಕ್ಕಾಗಿ ತಂದಿದ್ದ ಕಾರು ಬಿಟ್ಟು ಪರಾರಿ ಎಂಬ ವದಂತಿಗೆ ಬೆಚ್ಚಿದ ಜನ

ಚಿಕ್ಕಬಳ್ಳಾಪುರ: ಆತಂಕ ಮೂಡಿಸಿದ ಅಪಘಾತದ ಕಾರು

Published:
Updated:
Prajavani

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕೈವಾರ ಸಮೀಪ ಇತ್ತೀಚೆಗೆ ಉಗ್ರರು ದುಷ್ಕೃತ್ಯಕ್ಕಾಗಿ ತಂದಿದ್ದ ಕಾರು ಅಪಘಾತಕ್ಕೆ ಈಡಾಗಿದೆ ಎಂಬ ವದಂತಿ ಶನಿವಾರ ಕೆಲ ವಾಹಿನಿಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿತು. ಆದರೆ ಇದನ್ನು ಎಸ್ಪಿ ಕೆ.ಸಂತೋಷ್ ಬಾಬು ಅವರು ಅಲ್ಲಗಳೆದರು.

ಆಗಸ್ಟ್‌ 12 ರಂದು ಕೈವಾರದ ಬಳಿ ಅಪಘಾತಕ್ಕೆ ಈಡಾದ ಸ್ಕೋಡಾ ಕಾರಿನಲ್ಲಿ ಉರ್ದು ಮಾತನಾಡುತ್ತಿದ್ದ ಇಬ್ಬರು ಇದ್ದರು. ಅಪಘಾತವಾದ ಬಳಿಕ ಅವರು ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಾರನ್ನು ಗುಪ್ತಚರ ಇಲಾಖೆ ಐಜಿಪಿ, ಕೇಂದ್ರ ವಲಯ ಐಜಿ, ಉಗ್ರ ನಿಗ್ರಹ ದಳ ಅಧಿಕಾರಿಗಳು ಮಹಜರು ಮಾಡಿಕೊಂಡು ಹೋಗಿದ್ದಾರೆ. ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿದ ಶಂಕಿತರ ರೇಖಾಚಿತ್ರಗಳು ಕಾರಿನಲ್ಲಿ ಇದ್ದವರಿಗೆ ಹೋಲಿಕೆಯಾಗಿವೆ ಎಂದು ವಾಹಿನಿಯೊಂದು ವರದಿ ಮಾಡಿತು.

ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಣೆ ಬೆನ್ನಲ್ಲೇ ಈ ವದಂತಿ ಜಿಲ್ಲೆಯ ಜನರಲ್ಲಿ ಕಳವಳ ಉಂಟು ಮಾಡಿತ್ತು. ಈ ಕುರಿತು ಎಸ್ಪಿ ಕೆ.ಸಂತೋಷ್ ಬಾಬು ಅವರನ್ನು ವಿಚಾರಿಸಿದರೆ, ‘ಉಗ್ರರು ಬಳಸುತ್ತಿದ್ದ ಕಾರು ಅಪಘಾತ ಎಂಬುದು ಸುಳ್ಳು ಸುದ್ದಿ. ಕಾರು ಬೆಂಗಳೂರಿನ ಥಣಿಸಂದ್ರದ ಪ್ರವೀಣಗೌಡ (30) ಎಂಬುವರಿಗೆ ಸೇರಿದೆ. ಅವರು ಇತ್ತೀಚೆಗೆ ಕೈವಾರಕ್ಕೆ ಮದುವೆ ಸಮಾರಂಭವೊಂದಕ್ಕೆ ಬಂದಾಗ ಅಪಘಾತ ನಡೆದಿತ್ತು’ ಎಂದು ಹೇಳಿದರು.

‘ಥಣಿಸಂದ್ರದ ನಿವಾಸಿ, ಸ್ನೇಹಿತ ಸಂಜಯ್ (32) ಜತೆ ಪ್ರವೀಣಗೌಡ ತಮ್ಮ ಸ್ಕೋಡಾ ಕಾರಿನಲ್ಲಿ ಆ.11ರಂದು ಕೈವಾರಕ್ಕೆ ಮದುವೆಗೆ ಬಂದಿದ್ದರು. ಆ.12ರಂದು ರಾತ್ರಿ ಸಂಜಯ್‌ ಟಿ–ಸಿಗರೇಟ್‌ಗಾಗಿ ಕಾರು ತೆಗೆದುಕೊಂಡು ಕೈವಾರ ಕ್ರಾಸ್‌ನತ್ತ ಹೋಗಿದ್ದರು. ವಾಪಸ್‌ ಬರುವಾಗ ನಸುಕಿನ 3 ಗಂಟೆಗೆ ಸುಮಾರಿಗೆ ಕಾರು ಬನಹಳ್ಳಿ ಬಳಿ ಅಪಘಾತಕ್ಕೆ ಈಡಾಗಿತ್ತು’ ಎಂದು ತಿಳಿಸಿದರು.

‘ಮದುವೆ ಗದ್ದಲದಲ್ಲಿದ್ದ ಪ್ರವೀಣಗೌಡ ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದ ಸ್ನೇಹಿತನಿಗೆ ಬೈದಿದ್ದ. ಇದ್ದರಿಂದ ಬೇಸರಗೊಂಡು ಸಂಜಯ್‌ ಅಪಘಾತದ ಸ್ಥಳದಲ್ಲಿಯೇ ಕಾರು ಬಿಟ್ಟು ಹೋಗಿದ್ದರು. ಆ ಬಳಿಕ ಯಾರು ಕೂಡ ಕಾರು ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಹೀಗಾಗಿ ಆ ಕಾರನ್ನು ಕೈವಾರ ಹೊರ ಠಾಣೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು’ ಎಂದರು.

‘ಕಾರಿನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಕೆಲವರು ನೀಡಿದ ತಪ್ಪು ಮಾಹಿತಿಯಿಂದಾಗಿ ವದಂತಿ ಸೃಷ್ಟಿಯಾಗಿದೆ. ಸದ್ಯ ಪ್ರವೀಣಗೌಡ ಮತ್ತು ಸಂಜಯ್‌ ಅವರು ಕಾರು ಪಡೆದುಕೊಳ್ಳಲು ಬರುತ್ತಿದ್ದಾರೆ’ ಎಂದು ಹೇಳಿದರು.

Post Comments (+)