ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಂಸತ್ ಪಾತ್ರ ಅಪಾರ

‘ಮಕ್ಕಳ ಸಂಸತ್’ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ.ಅಮರನಾರಾಯಣ್ ಅಭಿಮತ
Last Updated 29 ನವೆಂಬರ್ 2019, 13:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸುಸ್ಥಿರವಾದ ಪ್ರಜಾಪ್ರಭುತ್ವವನ್ನು ನಿರ್ಮಾಣ ಮಾಡುವಲ್ಲಿ ಮಕ್ಕಳ ಸಂಸತ್ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಲಿದೆ. ಇದರಿಂದ ಮಕ್ಕಳಿಗೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕೆ ಸಹಾಯವಾಗುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ.ಅಮರನಾರಾಯಣ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವಕೀಲರ ಸಂಘ, ಗ್ರಾಸ್‍ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್‍ಮೆಂಟ್ (ಗ್ರಾಮ್) ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಕ್ಕಳ ಸಂಸತ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಸೆ-, ಆಕಾಂಕ್ಷೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಕ್ಕೆ ಶಾಲಾ-, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ನಡೆಸುವ ಸಂಸತ್ ಕಾರ್ಯಕ್ರಮ ಮುಖ್ಯವಾದದ್ದು. ಚರ್ಚೆ, ವಾದ-ವಿವಾದ, ಬಹುಮತ ಹಾಗೂ ಸಹಮತ ಇವುಗಳನ್ನು ಅನುಷ್ಠಾನಗೊಳಿಸುವುದೇ ಮಕ್ಕಳ ಸಂಸತ್ ಕಾರ್ಯಕ್ರಮದ ಮೂಲ ಉದ್ದೇಶ’ ಎಂದು ಹೇಳಿದರು.

ಗ್ರಾಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಬಸವರಾಜ್ ಮಾತನಾಡಿ, ‘ಸರ್ಕಾರ ಮತ್ತು ಸಮುದಾಯ ಸಂಸ್ಥೆಗಳು ಬದಲಾಗಬೇಕಾದರೆ ಸರ್ಕಾರದ ಕಾರ್ಯಕ್ರಮಗಳು ಬದಲಾಗಬೇಕು. ದೇಶದ ಕಟ್ಟಕಡೆಯ ಪ್ರಜೆಗೂ ಸರ್ಕಾರದ ಕಾರ್ಯಕ್ರಮಗಳು ತಲುಪಬೇಕು. ಈ ನಿಟ್ಟಿನಲ್ಲಿ ಬಾಲ್ಯದಿಂದಲೇ ಸಂಸತ್‌ ಕಾರ್ಯಕಲಾಪಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ’ ಎಂದರು.

‘ರಾಜ್ಯದಲ್ಲಿ 38 ಶಾಲೆಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಸುಗಮ್ಯ ಶಿಕ್ಷ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಧ್ಯಾ ಶಾಲೆ ಯೋಜನೆ, ಕೌಶಲ ಪ್ರಯೋಗಾಲಯ ಯೋಜನೆ, ಪ್ರೌಢಶಾಲಾ ಮಕ್ಕಳಿಗೆ ಶೈಕ್ಷಣಿಕ ಬೆಂಬಲ ಕಾರ್ಯಕ್ರಮ, ನೈಸರ್ಗಿಕ ಶಕ್ತಿಗಳ ಬಳಕೆ ಸೇರಿದಂತೆ ಒಂಬತ್ತು ಯೋಜನೆಗಳನ್ನು ಸುಗಮ್ಯ ಶಿಕ್ಷ ಕಾರ್ಯಕ್ರಮದಡಿ ನೀಡಲಾಗುತ್ತಿದೆ’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್ ಮಾತನಾಡಿ, ‘ಸರ್ಕಾರ ಹಾಗೂ ವಿವಿಧ ಸಂಸ್ಥೆಗಳು ಮಾಡುವ ಲೋಪದೋಷಗಳು, ನಿರ್ಲಕ್ಷ್ಯಗಳನ್ನು ಎತ್ತಿ ಹಿಡಿಯಲು ಮಕ್ಕಳ ಸಂಸತ್ ಕಾರ್ಯಕ್ರಮ ಉತ್ತಮವಾಗಿದೆ. ಜನ ಸಾಮಾನ್ಯರ ಬದುಕು ಹಸನಾಗಬೇಕಾದರೆ, ಸರ್ಕಾರದ ಕಾರ್ಯಕ್ರಮಗಳು ಸರಿಯಾದ ಸಮಯಕ್ಕೆ ಜನರಿಗೆ ತಲುಪಬೇಕು, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಗಿರಿಜಾ ಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಶ್, ಗೌರಿಬಿದನೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಕೃಷ್ಣಮೂರ್ತಿ, ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಕುಮಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT