ಭಾನುವಾರ, ಜುಲೈ 25, 2021
22 °C
ತಾಲ್ಲೂಕು ಕಚೇರಿ ಎದುರು ಕರ್ನಾಟಕ ಅಂಗವಿಕಲರ ಸಂಘಟನೆ ಪದಾಧಿಕಾರಿಗಳು, ಫಲಾನುಭವಿಗಳ ಪ್ರತಿಭಟನೆ

ಚಿಕ್ಕಬಳ್ಳಾಪುರ: ಮಾಸಾಶನ ಸಮಸ್ಯೆ ಸರಿಪಡಿಸುವಂತೆ ವಿಕಲಾಂಗರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವಿವಿಧ ಪಿಂಚಣಿ ಯೋಜನೆಗಳ ಮಾಸಾಶನ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ಅಂಗವಿಕಲರ ಸಂಘಟನೆ (ಕೆವಿಎಸ್‌) ಪದಾಧಿಕಾರಿಗಳು ಮತ್ತು ಫಲಾನುಭವಿಗಳು ತಾಲ್ಲೂಕು ಕಚೇರಿ ಎದುರು ‘ನಮ್ಮ ಪಿಂಚಣಿ ನಮ್ಮ ಹಕ್ಕು’ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕೆವಿಎಸ್‌ ಕಾರ್ಯದರ್ಶಿ ಬಿ.ಕಿರಣ್ ನಾಯಕ್, ‘ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಅಂಗವಿಕಲರು, ಹಿರಿಯ ನಾಗರಿಕರು, ವಿಧವೆಯರು, ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಸರಿಯಾಗಿ ಮಾಸಾಶನ ತಲುಪದೆ ಸಂಕಷ್ಟದಲ್ಲಿದ್ದಾರೆ’ ಎಂದು ಹೇಳಿದರು.

‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮಾಸಾಶನ ಸಿಗದೆ ಇರುವುದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಸುಮಾರು 50 ಸಾವಿರ ಫಲಾನುಭವಿಗಳಿಗೆ ಎರಡು ತಿಂಗಳಿಂದ ಪಿಂಚಣಿ ನೀಡದೆ ಸರ್ಕಾರ ಅಸಹಾಯಕ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಬಡ ಫಲಾನುಭವಿಗಳು ಮಾಸಾಶನಕ್ಕಾಗಿ ಕಚೇರಿಗಳಿಗೆ ಅಲೆದು ಬೇಸತ್ತು ಹೋಗಿದ್ದಾರೆ’ ಬೇಸರ ವ್ಯಕ್ತಪಡಿಸಿದರು.

‘ಅನೇಕ ಹಿರಿಯ ನಾಗರಿಕರು, ಅಸಹಾಯಕರು ಮಾಸಾಶನ ನೆಚ್ಚಿಕೊಂಡು ಬದುಕುತ್ತಾರೆ.‌ ಅನೇಕ ಅನಾರೋಗ್ಯ ಪೀಡಿತರಿಗೆ ಔಷಧಿ, ಮಾತ್ರೆ ಖರೀದಿಗೆ ಹಣವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಪಿಂಚಣಿ ನೆಚ್ಚಿಕೊಂಡಿರುವವರು ಅಂಚೆ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.

‘ಕೋವಿಡ್‌ ಕಾರಣಕ್ಕೆ ವಿವಿಧ ವರ್ಗಗಳ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್‌ಗಳಲ್ಲಿ ಅಂಗವಿಕಲರನ್ನು ನಿರ್ಲಕ್ಷಿಸಲಾಗಿದೆ. ಇನ್ನಾದರೂ, ವಿಶೇಷ ಪ್ಯಾಕೇಜ್ ಘೋಷಿಸಿ ಕಷ್ಟದಲ್ಲಿರುವವರ ಕೈ ಹಿಡಿಯುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿರುವ ಎಲ್ಲಾ ಅಂಗವಿಕಲರಿಗೆ ಕಡ್ಡಾಯವಾಗಿ ಪ್ರತಿ ತಿಂಗಳು ಆಯಾ ತಿಂಗಳೇ ಮಾಸಾಶನ ನೀಡಬೇಕು. ಫೋಸ್ಟ್‌ಮೆನ್‌ಗಳು ಸರಿಯಾಗಿ ಮಾಸಾಶನ ವಿತರಿಸುವಂತೆ ನಿಗಾ ವಹಿಸಬೇಕು. ರದ್ದಾಗಿರುವ ಎಲ್ಲಾ ಪಿಂಚಣಿದಾರರಿಗೆ ತಹಶೀಲ್ದಾರ್ ಕಚೇರಿಯಲ್ಲೇ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು’ ಆಗ್ರಹಿಸಿದರು.

ಪ್ರತಿಭಟನಾಕಾರರು ಈ ವೇಳೆ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘಟನೆಯ ಗೌರವ ಅಧಕ್ಷ ಪಿ.ವಿ.ಕುಶಕುಮಾರ್, ಅಧ್ಯಕ್ಷ ಕೆ.ಜಿ. ಸುಬ್ರಮಣ್ಯಂ, ಉಪಾಧ್ಯಕ್ಷ ಜಿ.ವಿ.ವೆಂಕಟಶಿವಪ್ಪ, ಮಹಿಳಾ ಸಂಚಾಲಕಿ ಕೆ.ಸಿ. ಮಮತಾ, ಖಜಾಂಚಿ ಸೌಭಾಗ್ಯಮ್ಮ, ಸಂಚಾಲಕರಾದ ಸುಶೀಲಮ್ಮ, ನರಸಿಂಹಮೂರ್ತಿ, ಆರ್.ಚಂದ್ರ ಶೇಖರ್, ಎಚ್.ಎಸ್.ಕೃಷ್ಣಪ್ಪ, ಮಂಜುನಾಥ್, ರಾಘವೇಂದ್ರ, ಸುಭಾನ್‌, ನಾಗೇಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು