ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬೆಟ್ಟ ಗುಡ್ಡಕ್ಕೆ ಹಾಕುತ್ತಿದ್ದಾರೆ ಬೆಂಕಿ

ಹುಲ್ಲು ಬೆಳೆಯುತ್ತದೆ ಎನ್ನುವ ನಂಬಿಕೆಯಲ್ಲಿ ಕಿಡಿಗೇಡಿಗಳಿಂದ ಕೃತ್ಯ
Last Updated 5 ಮಾರ್ಚ್ 2021, 3:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೇಸಿಗೆ ಆರಂಭವಾಗಿದೆ. ಜಿಲ್ಲೆಯ ಬೆಟ್ಟಗುಡ್ಡಗಳಿಗೆ ಬೆಂಕಿ ಹಚ್ಚುವ ಪ್ರಕ್ರಿಯೆಯೂ ಹೆಚ್ಚಿದೆ. ಹೌದು, ಜಿಲ್ಲೆಯಲ್ಲಿ ಪ್ರತಿ ಬೇಸಿಗೆ ಆರಂಭದಲ್ಲಿ ಕಾಡಿಗೆ ಬೆಂಕಿ ಹಚ್ಚುವ ದುಷ್ಕೃತ್ಯಗಳು ಕಿಡಿಗೇಡಿಗಳಿಂದ ಪ್ರತಿ ವರ್ಷ ನಡೆಯುತ್ತಿವೆ. ಈ ಬೆಂಕಿ ಹಚ್ಚುವ ಪ್ರಕ್ರಿಯೆ ಸಾಮಾನ್ಯ ಎನ್ನುವ ಮಟ್ಟದಲ್ಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಟ್ಟಗುಡ್ಡಗಳ ಸಾಲು ಹೆಚ್ಚಿದೆ. ಕುರುಚಲ ಕಾಡೂ ಇದೆ. ಚಾರಣಕ್ಕೆ ಬರುವ ಮತ್ತು ಬೆಂಕಿ ಹಚ್ಚಿದರೆ ಹಳೇ ಹುಲ್ಲು ನಾಶವಾಗಿ ಹೊಸ ಹುಲ್ಲು ಬರುತ್ತದೆ ಎನ್ನುವ ನಂಬಿಕೆ ಕಾರಣದಿಂದ ಸ್ಥಳೀಯರು, ಕುರಿಗಾಹಿಗಳು ಅರಣ್ಯ ಪ್ರದೇಶಗಳಿಗೆ, ಬೆಟ್ಟಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ಕೃತ್ಯದಿಂದ ಪರಿಸರ ಮತ್ತು ಪ್ರಾಣಿ ಸಂಕುಲಕ್ಕೆ ಕುತ್ತು ಎದುರಾಗುತ್ತಿದೆ.

ಪ್ರತಿ ವರ್ಷದ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಈ ಬೆಂಕಿ ಹಚ್ಚುವ ಪ್ರಕ್ರಿಯೆ ಹೆಚ್ಚು ನಡೆಯುತ್ತಿದೆ. ಗುರುವಾರ ಸಹ ಬಾಗೇಪಲ್ಲಿ, ಜಾಲರಿ ನರಸಿಂಹಸ್ವಾಮಿ ದೇವಾಲಯದ ಬಳಿ ಬೆಂಕಿ ಹಚ್ಚಲಾಗಿದೆ. ಕಳೆದ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ
100ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಹಚ್ಚಲಾಗಿತ್ತು. ಬೇಸಿಗೆಯ ಅವಧಿಯಲ್ಲಿ ಸರಾಸರಿ ದಿನಕ್ಕೆ ಎರಡು ಬೆಂಕಿ ಪ್ರಕರಣವಾದರೂ ಇರುತ್ತವೆ ಎಂದು ಜಿಲ್ಲಾ ಅರಣ್ಯ ಇಲಾಖೆ ಮೂಲಗಳು ತಿಳಿಸುತ್ತವೆ.

ಜಿಲ್ಲೆಯ ಕುರುಚಲು ಕಾಡುಗಳಲ್ಲಿ ಸಣ್ಣ ಪ್ರಾಣಿಗಳೇ ಪ್ರಮುಖವಾಗಿವೆ. ಕರಡಿ, ನರಿ, ಮೊಲ, ಚಿಪ್ಪು ಹಂದಿ, ಉಡ ಹೆಚ್ಚಿವೆ. ಕಾಡುಗಳಿಗೆ ಬೆಂಕಿ ಹಚ್ಚಿದರೆ ಇವು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವ ಸಾಧ್ಯತೆ ಕಡಿಮೆ. ಬೆಂಕಿಗೆ ಆಹುತಿ ಆಗುವ ಸಂಭವವೇ ಹೆಚ್ಚಿದೆ.

ಇಸ್ರೊದ ನೆರವು: ಜಿಲ್ಲೆಯಲ್ಲಿ ಒಟ್ಟು 46 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಬೆಂಗಳೂರಿನ ಅರಣ್ಯ ಇಲಾಖೆಯ ಕಚೇರಿಯಲ್ಲಿರುವ ಕಂಟ್ರೋಲ್ ರೂಂ ನಿಂದ ಅರಣ್ಯಕ್ಕೆ ಬೆಂಕಿ ಬೀಳುವ ಬಗ್ಗೆ ನಿಗಾ ಇಡಲಾಗುತ್ತದೆ. ಇದಕ್ಕೆ ಇಸ್ರೊದ ನೆರವು ಸಹ ಪಡೆಯಲಾಗುತ್ತದೆ. ಈ ಸ್ಯಾಟಲೈನ್‌ನಲ್ಲಿ ಯಾವ ಪ್ರದೇಶಕ್ಕೆ ಬೆಂಕಿ ಬಿದ್ದಿದೆ ಎನ್ನುವುದನ್ನು ತಿಳಿದು ತಕ್ಷಣವೇ ಜಿಲ್ಲಾ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಲಾಗುತ್ತದೆ.

ಏಳೆಂಟು ವರ್ಷಗಳ ಮಾಹಿತಿ ಆಧರಿಸಿ ಯಾವ ಪ್ರದೇಶದಲ್ಲಿ ಹೆಚ್ಚು ಬೆಂಕಿ ಹಚ್ಚಲಾಗುತ್ತದೆ ಎನ್ನುವುದನ್ನು ಇಲಾಖೆ ಗುರುತಿಸಿದೆ. ಜಿಲ್ಲೆಯ ಬ್ರಹ್ಮಗಿರಿ, ಚನ್ನಗಿರಿ, ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ಸಾಗುವ ಕಣಿವೆ ಪ್ರದೇಶ, ಜಾಲಾರಿ ನರಸಿಂಹ ಸ್ವಾಮಿ ಬೆಟ್ಟದ ಪ್ರದೇಶದಲ್ಲಿ ಹೀಗೆ ಬೆಂಕಿ ಹಚ್ಚುವ ಪ್ರಕ್ರಿಯೆ ಹೆಚ್ಚು ಎಂದು ಸ್ಯಾಟಲೈಟ್ ಮಾಹಿತಿ ನೀಡಿದೆ.

ತಿಳಿವಳಿಕೆ: ‘ಕಾಡಗಳಿಗೆ, ಬೆಟ್ಟ ಗುಡ್ಡಗಳಿಗೆ ಬೆಂಕಿ ಹಚ್ಚಬಾರದು ಎಂದು ನಾವು ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಕಾಡಂಚಿನ ಗ್ರಾಮಗಳ ಜನರಲ್ಲಿ, ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳುವವರಿಗೆ ತಿಳಿವಳಿಕೆ ಮೂಡಿಸುತ್ತಿದ್ದೇವೆ. ಒಂದು ವೇಳೆ ಬೆಂಕಿ ಹಚ್ಚಿದರೆ ಎದುರಿಸಬೇಕಾದ ಕಾನೂನು ಸಂಕಷ್ಟಗಳ
ಬಗ್ಗೆಯೂ ಮಾಹಿತಿ ನೀಡುತ್ತಿದ್ದೇವೆ‘ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಅರಸಲನ್ ’ಪ್ರಜಾವಾಣಿ‘ಗೆ ತಿಳಿಸಿದರು.

’ಪ್ರತಿ ಬೇಸಿಗೆಯಲ್ಲಿ ಬೆಂಕಿ ನಂದಿಸುವ ಉದ್ದೇಶದಿಂದಲೇ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದುಕೊಳ್ಳುತ್ತೇವೆ. ಕಾಡಂಚಿನಲ್ಲಿ ಫೈರ್‌ಲೈನ್ ಸಹ ರೂಪಿಸುತ್ತೇವೆ’ ಎಂದರು.

‘ಸ್ಕಂದಗಿರಿಗೆ ಚಾರಣಕ್ಕೆ ಬರುವವರ ಜತೆ ನಮ್ಮ ಗೈಡ್‌ಗಳೂ ತೆರಳುವರು. ಆದ್ದರಿಂದ ಅಲ್ಲಿ ಬೆಂಕಿ ಹಚ್ಚಲು ಸಾಧ್ಯವಿಲ್ಲ. ನಂದಿ ಬೆಟ್ಟದ ಮೇಲೆ ತೋಟಗಾರಿಕೆ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದಾರೆ. ಕೆಳಗಿನ ಪ್ರದೇಶದ ಬಗ್ಗೆ ನಾವು ಗಮನ ಇಟ್ಟಿದ್ದೇವೆ’ ಎಂದು ಹೇಳಿದರು.

ಗರಿಷ್ಠ ಆರು ತಿಂಗಳು ಜೈಲು
ಕಾಡಿಗೆ ಬೆಂಕಿ ಹಚ್ಚಿದ ಆರೋಪಿಗೆ ಕಾನೂನು ಪ್ರಕಾರ ಗರಿಷ್ಠ ಆರು ತಿಂಗಳ ಜೈಲು ಶಿಕ್ಷೆ ಇದೆ. ದಂಡವನ್ನೂ ವಿಧಿಸಬಹುದು. ಎಷ್ಟು ಹಾನಿ ಮಾಡಿದ್ದಾರೆಯೋ ಅದನ್ನು ಹಾನಿ ಮಾಡಿದವರಿಂದಲೇ ವಸೂಲಿ ಮಾಡಲಾಗುತ್ತದೆ. ಕಳೆದ ವರ್ಷ ಸ್ಕಂದಗಿರಿಗೆ ಬೆಂಕಿ ಇಟ್ಟ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಅರಸಲನ್ ತಿಳಿಸಿದರು.

ಮೋಜಿಗೆ ಬರುವವರ ಕೃತ್ಯ
ಚಾರಣಕ್ಕೆ ಜಿಲ್ಲೆಯ ಬೆಡ್ಡಗುಡ್ಡಗಳು ಪ್ರಾಶಸ್ತವಾಗಿವೆ. ಈ ಕಾರಣದಿಂದಲೇ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯ ಜನರು ಚಾರಣಕ್ಕಾಗಿ ಬರುವರು. ವಾರಾಂತ್ಯದ ಮೋಜಿಗೂ ಜಿಲ್ಲೆಯ ಬೆಟ್ಟಗುಡ್ಡಗಳಿಗೆ ಜನರು ಎಡತಾಕುತ್ತಾರೆ. ಹೀಗಿ ಬರುವ ಕೆಲವರು ಕಾಡಿಗೆ ಬೆಂಕಿ ಹಚ್ಚಿದ ಪ್ರಸಂಗಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT