ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.9ರ ನಂತರ ಸರ್ಕಾರ ಉಳಿಯಲ್ಲ: ಎಚ್‌.ಡಿ ಕುಮಾರಸ್ವಾಮಿ ಭವಿಷ್ಯ

ಚಿಕ್ಕಬಳ್ಳಾಪುರ ಉಪ ಚುನಾವಣೆ: ಶಕ್ತಿ ಪ್ರದರ್ಶನದ ಮೂಲಕ ಪ್ರಮುಖ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
Last Updated 18 ನವೆಂಬರ್ 2019, 13:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು ನಗರದಲ್ಲಿ ಸೋಮವಾರ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಅವರು ಮೆರವಣಿಗೆಯಲ್ಲಿ ಸಾಥ್ ನೀಡಿದರು. ಕಾಂಗ್ರೆಸ್‌ ಅಭ್ಯರ್ಥಿ ನಂದಿ ಆಂಜನಪ್ಪ ಅವರೊಂದಿಗೆ ಶಾಸಕರಾದ ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಎನ್.ಎಚ್.ಶಿವಶಂಕರರೆಡ್ಡಿ, ವಿ.ಮುನಿಯಪ್ಪ ಅವರು ಮೆರವಣಿಗೆಯಲ್ಲಿ ಸಾಗಿದರು.

ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿಗಳಾದ ಕೆ.ಪಿ.ಬಚ್ಚೇಗೌಡ ಮತ್ತು ರಾಧಾಕೃಷ್ಣ ಅವರೊಂದಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರ್ ಮತ್ತು ವಿಧಾನಸಭೆ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಮೆರವಣಿಗೆ ನಡೆಸಿ, ಶಕ್ತಿ ಪ್ರದರ್ಶಿಸುವ ಜತೆಗೆ ಚುನಾವಣೆಗೆ ತಮ್ಮ ಕಾರ್ಯಕರ್ತರನ್ನು ಹುರುದುಂಬಿಸಿದರು.

ಮೆರವಣಿಗೆಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ‘ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಉಪ ಚುನಾವಣೆ ನಡೆಯುವ ಮತದಾನ ಮತ್ತು ಡಿ.9ರ ಫಲಿತಾಂಶದ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಲು ಸಾಧ್ಯವಿಲ್ಲ. ಸರ್ಕಾರ ಬಿದ್ದು ಹೋದರೆ ಚಿಕ್ಕಬಳ್ಳಾಪುರಕ್ಕೆ ಯಾವ ವೈದ್ಯಕೀಯ ಕಾಲೇಜು ತರುತ್ತಾರೆ. ಇದು ಬರೀ ನಾಟಕ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಅವರ ಬಲಗೈ ಬಂಟನಾಗಿದ್ದ ಸುಧಾಕರ್ ಅವರು ಚಿಕ್ಕಬಳ್ಳಾಪುರ ಅಭಿವೃದ್ಧಿ ಮಾಡಿಲ್ಲ. ಈ ಹಿಂದೆ ನಾನು 14 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ನನ್ನ ಬಳಿ ಬಂದು ಕ್ಷೇತ್ರದ ಅಭಿವೃದ್ಧಿ ಕುರಿತು ಎಷ್ಟು ಬಾರಿ ಚರ್ಚಿಸಿದ್ದಾರೆ ಎಂಬುದನ್ನು ಜನತೆ ಪ್ರಶ್ನಿಸಬೇಕು. ಸುಧಾಕರ್ ಅವರು ಸಿದ್ದರಾಮಯ್ಯ ಮತ್ತು ನನಗೂ ಟೋಪಿ ಹಾಕಿದರು. ಯಾವ್ಯಾವ ಸಂದರ್ಭದಲ್ಲಿ ಯಾರಿಗೆಲ್ಲ ಟೋಪಿ ಹಾಕಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಪ್ರಸ್ತಾಪಿಸುವೆ’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಮೆರವಣಿಗೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ನಮ್ಮ ಸರ್ಕಾರದ ಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಋಣವಿದೆ. ಆ ಋಣವನ್ನು ತೀರಿಸಲು ನಾವು ಬದ್ಧರಾಗಿದ್ದೇವೆ. ತೀರಿಸುತ್ತೇವೆ. ಸುಧಾಕರ್ ಅವರನ್ನು ಸಚಿವರನ್ನಾಗಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಕೊಟ್ಟಿದ್ದಾರೆ. ಅದನ್ನು ನಾವು ಈಡೇರಿಸುತ್ತೇವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಮೆರವಣಿಗೆಯಲ್ಲಿ ಮಾತನಾಡಿದ ಶಾಸಕ ಡಿ.ಕೆ.ಶಿವಕುಮಾರ್, ‘ಯಾರಿಗಾದರೂ ದ್ರೋಹ ಮಾಡಿದರೆ ಕ್ಷಮಿಸಬಹುದು. ಆದರೆ ತನ್ನ ಹೆತ್ತ ತಾಯಿಗೆ ದ್ರೋಹ ಮಾಡಿದವರನ್ನು ಕ್ಷಮಿಸಲು ಸಾದ್ಯವಿಲ್ಲ. ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕಾದರೆ ಏನೆಲ್ಲ ನಡೆದಿತ್ತು ಎನ್ನುವ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಇಲ್ಲಿಗೆ ಅವರೇ ಸಾಕಿದ್ದ ಗಿಣಿಯ ಬಗ್ಗೆ ತಿಳಿಸುತ್ತಾರೆ. ಅವರು ತಿಳಿಸದಿದ್ದರೆ ನಾವು ಬಂದು ಅನೇಕ ವಿಚಾರ ತಿಳಿಸುವೆ’ ಎಂದು ಹೇಳಿದರು.

ಉಪ ಚುನಾವಣೆಗೆ ಒಟ್ಟು 15 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT