ಬುಧವಾರ, ಆಗಸ್ಟ್ 4, 2021
20 °C
ಚನ್ನರಾಯನಬೆಟ್ಟದಲ್ಲಿ 125 ಎಕರೆಯಲ್ಲಿ ಮೈದಳೆಯುತ್ತಿರುವ ಕಾಡು, ಬರಿದಾಗಿದ್ದ ಬೆಟ್ಟವೀಗ ಪಶು ಪಕ್ಷಿಗಳ ಆವಾಸ ಸ್ಥಾನ

ಚಿಕ್ಕಬಳ್ಳಾಪುರ | ಬೋಳು ಗುಡ್ಡದ ಮೇಲೆ ಹಸಿರ ಲಾಸ್ಯ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಹಿಂದೆಲ್ಲ ಪಾಳು ಬಿದ್ದು ಬಿರು ಬೇಸಿಗೆಯಲ್ಲಿ ರಣ ಭೀಕರ ಧಗೆ ಹೊರಹಾಕುತ್ತಿದ್ದ ತಾಲ್ಲೂಕಿನ ಚನ್ನರಾಯನಬೆಟ್ಟ ಇದೀಗ ಹಸಿರುಡುಗೆ ಉಟ್ಟು, ನಳನಳಿಸುತ್ತ ಆಹ್ಲಾದಕರ ತಂಗಾಳಿ ಸೂಸುತ್ತ ಪಶು–ಪಕ್ಷಿಗಳ ತಾಣವಾಗಿ ಪರಿವರ್ತನೆಯಾಗುತ್ತಿದೆ.

ಈ ಹಿಂದಿನ ವರ್ಷದ ವರೆಗೆ ಬೋಳು ಬೋಳಾಗಿದ್ದ, ಅಲ್ಲಲ್ಲಿ ಕುರುಚಲು ಗಿಡಗಳನ್ನಷ್ಟೇ ಕಾಣಬಹುದಾಗಿದ್ದ, ಸುತ್ತಲೂ ಆವರಿಸಿದ ಗಣಿಗಳು, ಕ್ರಷರ್‌ಗಳ ಧೂಳಿನಿಂದ ಆವೃತ್ತವಾಗಿರುತ್ತಿದ್ದ ಬೆಟ್ಟ, ಈಗ ಹಸಿರ ಹೊದ್ದು, ಕಣ್ಣಿಗೆ ಮುದ ನೀಡುವ ಜತೆಗೆ ಸುತ್ತಲಿನ ಪರಿಸರದಲ್ಲಿ ಜೀವಕಳೆ ವೃದ್ಧಿಸುತ್ತಿದೆ.

ಈ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಅವರು ಜಿಲ್ಲೆಯಲ್ಲಿ ನೀರು ಸಂರಕ್ಷಣೆ ನಿಟ್ಟಿನಲ್ಲಿ ಕಾಳಜಿಯಿಂದ ಕೈಗೊಂಡ ಹಲವು ಕ್ರಮಗಳಲ್ಲಿ ಬರಡು ಬೆಟ್ಟದಲ್ಲಿ ಹಸಿರು ಮೂಡಿಸುವ ಈ ಕಾರ್ಯವೂ ಒಂದಾಗಿತ್ತು. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಜಿಲ್ಲಾ ಖನಿಜ ನಿಧಿಯ ಸಹಾಯದಿಂದ ನಡೆಸಿದ ಪರಿಸರ ರಕ್ಷಿಸುವ ಈ ಕಾರ್ಯ ಇದೀಗ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ತಾಲ್ಲೂಕಿನ ಕಣಿವೆ ನಾರಾಯಣಪುರ ಗ್ರಾಮದ ಸರ್ವೇ ನಂಬರ್ 17ರಲ್ಲಿರುವ ಸೆಕ್ಷನ್ 4 ಅರಣ್ಯ ಪ್ರದೇಶ ಚನ್ನರಾಯನಬೆಟ್ಟದಲ್ಲಿ ಸುಮಾರು 125 ಎಕರೆಯಲ್ಲಿ (50 ಹೆಕ್ಟೇರ್) ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ವರ್ಷದ ಜೂನ್‌ ತಿಂಗಳಲ್ಲಿ ಸುಮಾರು 10 ಸಾವಿರ ಸಸಿಗಳನ್ನು ನಾಟಿ ಮಾಡಿದ್ದರು. ಶೇ 100 ರಷ್ಟು ಗಿಡಗಳೂ ಬದುಕಿಳಿದು ಹಸಿರು ಮುಕ್ಕಳಿಸುತ್ತಿವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಚನ್ನರಾಯನಬೆಟ್ಟದಲ್ಲಿ ನೆಟ್ಟ ನೇರಳೆ, ಅತ್ತಿ, ಆಲ, ಹೊಂಗೆ, ಕಮರ, ಕಾಡು ಬಾದಾಮಿ, ಹಿಪ್ಪುನೆರಳೆ, ಕಾಡು ನೇರಳೆ, ಕರಿ ಮತ್ತಿ ಹೀಗೆ ಹತ್ತಾರು ಜಾತಿಯ ಕಾಡು ಗಿಡಗಳ ತೊನೆದಾಟಕ್ಕೆ ಬೀಸುವ ತಂಗಾಳಿ ಸಮೀಪದ ಮುದ್ದೇನಹಳ್ಳಿ ವಿಟಿಯು ಸ್ನಾತಕೋತ್ತರ ಕೇಂದ್ರದ ಪರಿಸರದಲ್ಲಿ ಹೊಸ ಚೈತನ್ಯ ತಂದಿದೆ.

ಜಿಲ್ಲಾ ಖನಿಜ ನಿಧಿನಿಂದ ನೀಡಿದ ಸುಮಾರು ₹16 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ಈ ಯೋಜನೆಯಿಂದ ಜೀವವೈವಿಧ್ಯಕ್ಕೆ ಮಹದುಪಕಾರ ಮಾಡಿದಂತಾಗಿದೆ. ದಿನೇ ದಿನೇ ಬೆಳೆಯುತ್ತಿರುವ ನೆಡುತೋಪು ಕರಡಿ, ನರಿ, ಚಿರತೆ, ನವಿಲು, ಜಿಂಕೆ, ವಿವಿಧ ಜಾತಿಯ ಪಕ್ಷಿಗಳಿಗೆ ಆವಾಸ ಸ್ಥಾನವಾಗಿ ಬದಲಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಗಣಿಗಳು, ಕ್ರಷರ್‌ಗಳ ಧೂಳಿನಿಂದ ಉಂಟಾಗುವ ದುಷ್ಪರಿಣಾಮ ತಡೆಗಟ್ಟಲು ವಿಧಿಸುವ ತೆರಿಗೆ ಹಣ ಇಲ್ಲಿ ಅಕ್ಷರಶಃ ಅರ್ಥಪೂರ್ಣವಾಗಿ ಬಳಕೆಯಾಗಿದ್ದು, ಇದೇ ಮಾದರಿಯಲ್ಲಿ ಇನ್ನೂ ಸುಮಾರು 125 ಎಕರೆ ನೆಡುತೋಪು ರೂಪಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿರುವುದು ಪರಿಸರ ಪ್ರಿಯರಲ್ಲಿ ಸಂತಸ ತಂದಿದೆ.

ಈಗಾಗಲೇ ಸುಮಾರು ಆರು ಅಡಿಗಳಿಗಿಂತಲೂ ಹೆಚ್ಚು ಎತ್ತರಕ್ಕೆ ಸಸಿಗಳು ಬೆಳೆದು ಗಿಡಗಳಾಗಿ ರೂಪು ತಳೆದಿದ್ದು, ಒಂದು ಕಾಲದಲ್ಲಿ ಬೋಳು ಗುಡ್ಡವಾಗಿದ್ದ ಚನ್ನರಾಯನಬೆಟ್ಟ ಇನ್ನು ಕೆಲವೇ ವರ್ಷಗಳಲ್ಲಿ ಮಲೆನಾಡ ಪರಿಸರ ನೆನಪಿಸುವಂತೆ ಅಭಿವೃದ್ಧಿಯಾಗಲಿದೆ ಎನ್ನುವ ಆಶಾವಾದ ಅಧಿಕಾರಿಗಳದ್ದು.

ಜಿಲ್ಲೆಯ ಪ್ರವಾಸಿ ತಾಣ ನಂದಿ ಬೆಟ್ಟದ ವಾಯುವ್ಯಕ್ಕೆ ಇರುವ ಚನ್ನರಾಯನನ ಬೆಟ್ಟದಲ್ಲಿ ಇದೀಗ ಎರಡನೇ ಮುಂಗಾರಿಗೆ ಮೈಒಡ್ಡಿ ಚಿಗುರಿನೊಂದಿಗೆ ಗರಿಗೆದರುತ್ತಿರುವ ಸಾವಿರಾರು ಗಿಡಗಳ ಹಸಿರ ವನರಾಶಿ ಬೆಟ್ಟಕ್ಕೆ ಹೊಸ ಕಳೆ ತರುತ್ತಿದೆ.

‘ಈ ಉಪಕ್ರಮದಿಂದಾಗಿ ಕ್ರಷರ್‌ ಧೂಳಿನ ದುಷ್ಪರಿಣಾಮ, ನೀರಿನ ಮಾಲಿನ್ಯ ಕಡಿಮೆಯಾಗಲಿದೆ. ಜಲ ಸಂರಕ್ಷಣೆ ಸಾಮರ್ಥ್ಯ ಹೆಚ್ಚಳವಾಗಿ ಒಳ್ಳೆಯ ಪರಿಸರ ನಿರ್ಮಾಣವಾಗಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು