ಶನಿವಾರ, ಜನವರಿ 25, 2020
22 °C
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದ ಪ್ರಮುಖ ರಸ್ತೆಗಳ ವಿಸ್ತರಣೆ ಯೋಜನೆ; ಸವಾರರು, ಪಾದಚಾರಿಗಳಿಗೆ ನಿತ್ಯ ತಪ್ಪದ ಕಿರಿಕಿರಿ

ಚಿಕ್ಕಬಳ್ಳಾಪುರ| ‘ಅರಣ್ಯರೋದನ’ದಂತಾದ ಸವಾರರ ಗೋಳು

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕೋಲಾರದಿಂದ ಪ್ರತ್ಯೇಕಗೊಂಡು ಜಿಲ್ಲೆಯಾಗಿ 12 ವರ್ಷಗಳು ಉರುಳಿದರೂ ನಗರಕ್ಕೆ ಈವರೆಗೆ ಜಿಲ್ಲಾ ಕೇಂದ್ರದ ‘ಚಹರೆ’ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಿಷ್ಕಿಂಧೆಯಂತಹ ರಸ್ತೆಗಳನ್ನು ಒಂದು ಸುತ್ತು ಹಾಕಿದರೆ ಪಾದಚಾರಿಗಳನ್ನು, ಸವಾರರನ್ನು ಅಣಕಿಸಿ, ಹೈರಾಣಾಗಿಸುವ ಚಿತ್ರಣ ಕರುಳು ಹಿಂಡುತ್ತದೆ.

ದಶಮಾನೋತ್ಸವ ಪೂರೈಸಿದ ಜಿಲ್ಲಾ ಕೇಂದ್ರದ ಗಲ್ಲಿಗಲ್ಲಿಗಳನ್ನು ಹೊಕ್ಕು ನೋಡಿದರೆ ಸಂಚಾರ ವ್ಯವಸ್ಥೆಗೆ ಬಡಿದ ‘ಗ್ರಹಣ’ ಡಾಳವಾಗಿ ಗೋಚರಿಸುತ್ತದೆ. ನಗರದ ಪ್ರಮುಖ ರಸ್ತೆಗಳಾದ ಬಿ.ಬಿ. ರಸ್ತೆ, ಎಂ.ಜಿ.­ರಸ್ತೆ, ಗಂಗ­ಮ್ಮ­ಗುಡಿ ರಸ್ತೆ, ಬಜಾರ್‌ ರಸ್ತೆ ಸೇರಿದಂತೆ ಯಾವೊಂದು ರಸ್ತೆ ಕೂಡ ಸವಾರರು ಮತ್ತು ಪಾದಚಾರಿಗಳಿಗೆ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿದ್ದು ಕಾಣುವುದಿಲ್ಲ.

ಬೆಳಿಗ್ಗೆ, ಸಂಜೆ ಹೊತ್ತು ನಗರದ ಮುಖ್ಯರಸ್ತೆಗಳಲ್ಲಿ ಅಡಿಗಡಿಗೆ ಎದುರಾಗುವ ಕಿರಿಕಿರಿ ನಡುವೆ ಹಿಡಿಶಾಪ ಹಾಕುತ್ತ, ಜೀವ ಹಿಡಿ ಮಾಡಿಕೊಂಡು ಸಾಗುವ, ಸಂಚರಿಸುವವರನ್ನು ನೋಡಿದಾಗ ಎಂದಪ್ಪಾ ಈ ಗೋಳಿಗೆ ಪರಿಹಾರ ಎಂಬ ಉದ್ಗಾರ ನಿಟ್ಟುಸಿರಾಗಿ ಹೊರಬರುತ್ತದೆ. ಹಬ್ಬ, ಉತ್ಸವಗಳ ಹೊತ್ತಿನಲ್ಲಂತೂ ನಗರದೊಳಗಿನ ಸಂಚಾರ ನರಕ ಸದೃಶ್ಯವಾಗಿರುತ್ತದೆ.

ಜಿಲ್ಲೆಯಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ, ಚಿಂತಾಮಣಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಈಗಾಗಲೇ ರಸ್ತೆ ವಿಸ್ತರಣೆ ಕಾರ್ಯಗಳು ನಡೆದು ನಗರಗಳು ಹೊಸ ಕಳೆಯಲ್ಲಿ ನಳನಳಿಸುತ್ತಿವೆ. ಸೋಜಿಗವೆಂದರೆ ಜಿಲ್ಲಾ ಕೇಂದ್ರವಾದ ನಗರವೇ ಮಾರಕ ಕಾಯಿಲೆಯಿಂದ ನರಳುವ ರೋಗಿಯಂತೆ ಗೋಚರಿಸುತ್ತಿದೆ ಎನ್ನುವುದು ಸ್ಥಳೀಯ ಪ್ರಜ್ಞಾವಂತರ ಬೇಸರ.

ನನೆಗುದಿಗೆ ಬಿದ್ದ ಯೋಜನೆ

2015ರ ಫೆಬ್ರವರಿ 26ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಂಗಮ್ಮ ಗುಡಿ, ಬಜಾರ್ ರಸ್ತೆ, ಚಿಕ್ಕಬಳ್ಳಾಪುರದಿಂದ ನೆಲಮಂಗಲಕ್ಕೆ ಹೋಗುವ ರಾಜ್ಯ ಹೆದ್ದಾರಿ, ಚಿಕ್ಕಬಳ್ಳಾಪುರದಿಂದ ನಾಮಗೊಂಡ್ಲು ಕೇತೇನಹಳ್ಳಿಗೆ ಹೋಗುವ ಜಿಲ್ಲಾ ಮುಖ್ಯರಸ್ತೆಗಳಲ್ಲಿ ವರ್ತಕರು ಮಾಡಿಕೊಂಡಿರುವ ಅನಧಿಕೃತ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಲೋಕೋಪಯೋಗಿ, ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಈ ರಸ್ತೆಗಳ ಒತ್ತುವರಿದಾರರ ಪಟ್ಟಿ ನೀಡುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದ್ದ ಜಿಲ್ಲಾಧಿಕಾರಿ ಅವರು, ವಿಸ್ತರಣೆಗೆ ಒಳಗಾಗುವ ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್, ಬಿಎಸ್‌ಎನ್‌ಎಲ್ ಇಲಾಖೆ ಕಂಬಗಳು, ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಬೆಸ್ಕಾಂ, ಬಿಎಸ್‌ಎಸ್‌ಎನ್‌ಎಲ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನಗರಸಭೆ ವ್ಯಾಪ್ತಿಯ ಕೆಲ ರಸ್ತೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಯೋಜನಾ ನಿರ್ದೇಶಕರಿಂದ ಪ್ರಸ್ತಾವ ಬರುತ್ತಿದ್ದಂತೆಯೇ ಪ್ರಮುಖ ರಸ್ತೆಗಳ ವರ್ತಕರ ವಲಯದಲ್ಲಿ ಸಂಚಲನ ಕಾಣಿಸಿಕೊಂಡಿತ್ತು. ವಿಸ್ತರಣೆಗೆ ಒಂದಿಷ್ಟು ಮಂದಿ ಪರವಾಗಿಯೂ ಮತ್ತೊಂದಿಷ್ಟು ಮಂದಿ ವಿರೋಧಿಸಿಯೂ ಧ್ವನಿ ಎತ್ತಿದ್ದರು.

ಅಷ್ಟಕ್ಕೆ ಸುಮ್ಮನಾಗದೆ ಕೆಲವರು ಇಡೀ ಪ್ರಕ್ರಿಯೆಯನ್ನು ತಡೆಯುವುದಕ್ಕೆ ಲೆಕ್ಕಾಚಾರ ಹಾಕಿ ಇಂತಿಷ್ಟು ಅಡಿ ಮಾತ್ರ ರಸ್ತೆ ವಿಸ್ತರಣೆ ಆಗಬೇಕು. ಇಲ್ಲದಿದ್ದರೆ ಅವಕಾಶವೇ ನೀಡಬಾರದು ಎಂದು ಸಹಿ ಸಂಗ್ರಹ ಮಾಡಿ, ನ್ಯಾಯಾಲಯದ ಮೊರೆ ಹೋದರು. ಹೀಗಾಗಿ, ವಿಸ್ತರಣೆ ಯೋಜನೆ ನನೆಗುದಿಗೆ ಬಿದ್ದಿತು.

ನಗರದ ಒಳಗಿನ ಸಂಚಾರ ಸಮಸ್ಯೆ ಜನರನ್ನು ಹೈರಾಣು ಮಾಡುತ್ತಿದ್ದರೆ, ಅಧಿಕಾರಿಗಳು ಜನಪ್ರತಿನಿಧಿಗಳು ಮಾತ್ರ ಏನೂ ನಡೆದಿಲ್ಲ ಎನ್ನುವಂತೆ ಜಾಣ ಕುರುಡು ಪ್ರದರ್ಶನದಲ್ಲೇ ದಿನದೂಡುತ್ತ ಬರುತ್ತಿದ್ದಾರೆ.

ಚಿಕ್ಕಬಳ್ಳಾಪುರವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡುತ್ತೇನೆ ಎನ್ನುವ ರಾಜಕಾರಣಿಗಳು ಕೂಡ ಆ ಕಾರ್ಯದತ್ತ ಗಮನಹರಿಸುವ ಬದಲು, ವರ್ತಕ ಸಮೂಹದ ‘ರಹಸ್ಯ ಸಭೆ’ಗಳನ್ನು ನಡೆಸಿ ನನ್ನ ಅವಧಿಯಲ್ಲಿ ರಸ್ತೆ ವಿಸ್ತರಣೆಗೆ ಕೈ ಹಾಕುವುದಿಲ್ಲ ಎಂಬ ವಚನ ನೀಡುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರು ಗೋಳು ಕೇಳುವವರಿಲ್ಲದಂತಾಗಿದೆ ಎನ್ನುವುದು ಪ್ರಜ್ಞಾವಂತರ ಆರೋಪ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು