ಬುಧವಾರ, ಜೂನ್ 23, 2021
22 °C

ಚಿಕ್ಕಬಳ್ಳಾಪುರದಲ್ಲಿ ಇನ್ನೂ ಹಳಿಗೆ ಬಾರದ ಹೋಟೆಲ್ ಉದ್ಯಮ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲವಾಗಿ ತಿಂಗಳುಗಳೇ ಕಳೆದರೂ ಜಿಲ್ಲೆಯಲ್ಲಿ ಹೋಟೆಲ್‌ ಉದ್ಯಮ ಮಾತ್ರ ಚೇತರಿಕೆ ಕಂಡಿಲ್ಲ. ಗ್ರಾಹಕರ ಬರ ಎದುರಿಸುತ್ತಿರುವ ಹೋಟೆಲ್‌ಗಳು ಒಂದೆಡೆ ಕಾರ್ಮಿಕರ ಸಮಸ್ಯೆ, ಮತ್ತೊಂದೆಡೆ ನಿರ್ವಹಣಾ ವೆಚ್ಚ ಭರಿಸಲಾಗದೆ ಸಂಕಷ್ಟದ ಸುಳಿಯಲ್ಲಿ ದಿನದೂಡುತ್ತಿವೆ.

ಜಿಲ್ಲೆಯಲ್ಲೂ ಕೋವಿಡ್‌ ಪ್ರಕರಣಗಳು ಉಲ್ಭಣಗೊಂಡಿದ್ದೇ, ಜಿಲ್ಲಾ ಕೇಂದ್ರವಾದ ನಗರ ಮತ್ತು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿರುವ ಹೋಟೆಲ್‌, ದಾಬಾ, ರೆಸ್ಟೋರೆಂಟ್‌ಗಳತ್ತ ಮುಖ ಮಾಡಲು ಗ್ರಾಹಕರು ಅಂಜುತ್ತಿದ್ದಾರೆ.

ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಕೈತೊಳೆಯಲು ಸೋಪ್‌ ಆಯಿಲ್, ಕುಡಿಯಲು, ಕೈತೊಳೆಯಲು ಬಿಸಿನೀರು ವ್ಯವಸ್ಥೆ ಮಾಡುವ ಜತೆಗೆ ಮಾಸ್ಕ್‌ ಕಡ್ಡಾಯಗೊಳಿಸಿದರೂ ಮೊದಲಿನಂತೆ ಗ್ರಾಹಕರು ಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಬಹುಪಾಲು ಹೋಟೆಲ್‌ ಉದ್ಯಮಿಗಳು.

ಹೋಟೆಲ್‌ ಬಾಡಿಗೆ, ಕಾರ್ಮಿಕರ ವೇತನ, ತರಕಾರಿ, ಹಾಲು, ಗ್ಯಾಸ್‌ ಹೀಗೆ, ನಿರ್ವಹಣಾ ವೆಚ್ಚ ಭರಿಸಲಾಗದೆ ಹಲವು ಹೋಟೆಲ್‌ಗಳು, ದಾಬಾಗಳು ಬಾಗಿಲು ತೆರೆದಿಲ್ಲ. ಬೆರಳೆಣಿಕೆ ರೆಸ್ಟೊರೆಂಟ್‌ಗಳು ಮಾತ್ರ ತೆರೆದಿವೆ. ಪರಿಸ್ಥಿತಿ ಸುಧಾರಿಸದೆ ಹೋದರೆ ಅವು ಕೂಡ ಬಾಗಿಲು ಹಾಕುವ ದಿನಗಳು ದೂರವಿಲ್ಲ ಎಂದು ಆತಂಕ ಸಹ ವ್ಯಕ್ತವಾಗುತ್ತಿದೆ.

ಉದ್ಯೋಗಿಗಳು, ಹೊರ ಜಿಲ್ಲೆಗಳಿಂದ ಕೆಲಸದ ನಿಮಿತ್ತ ಬಂದವರು, ಚಿಕಿತ್ಸೆಗೆ ಬಂದಿರುವ ರೋಗಿಗಳ ಸಂಬಂಧಿಗಳು, ಹೀಗೆ ಅನಿವಾರ್ಯವಿದ್ದವರು ಮಾತ್ರ ಹೋಟೆಲ್‌ಗಳಿಗೆ ಬರುತ್ತಿದ್ದಾರೆ. ಕುಟುಂಬ ಸಹಿತ ಭೇಟಿ ನೀಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂಬುದು ಬಹುತೇಕ ಮಾಲೀಕರ ಆತಂಕ.

ಇನ್ನೊಂದೆಡೆ ಕೊರೊನಾ ಭೀತಿ ಹಾಗೂ ಮಳೆಗಾಲದ ಕಾರಣಕ್ಕೆ ಪ್ರವಾಸೋದ್ಯಮ ಕೂಡ ಸಂಪೂರ್ಣ ನೆಲ ಕಚ್ಚಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರ ಸುಳಿವಿಲ್ಲ. ಇದರಿಂದ ಹೋಟೆಲ್‌ ಉದ್ಯಮ ಸಂಪೂರ್ಣ ಸೊರಗಿದೆ.

‘ನನ್ನ ಸಹೋದರ ಸಂಬಂಧಿಯೊಬ್ಬರು ಕೋವಿಡ್‌ ಸಂಕಷ್ಟದಿಂದಾಗಿ ತಮ್ಮ ದಾಬಾ ಮುಚ್ಚಿಯೇ ಬಿಟ್ಟರು. ಇತ್ತೀಚೆಗಷ್ಟೇ ನಾನು ಅದನ್ನೇ ಖರೀದಿಸಿ ಪುನಃ ಆರಂಭಿಸಿದ್ದೇನೆ. ಸ್ಥಳೀಯರಿಗಿಂತಲೂ ಹೊರ ರಾಜ್ಯದ ಪ್ರಯಾಣಿಕರೇ ನಮ್ಮ ಗ್ರಾಹಕರು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಗ್ರಾಹಕರೇ ಬರುತ್ತಿಲ್ಲ’ ಎಂದು ಹೆದ್ದಾರಿ 7ರಲ್ಲಿರುವ ವಿ.ಆರ್.ಕೆ.ದಾಬಾ ಮಾಲೀಕ ಅರುಣ್ ತಿಳಿಸಿದರು.

‘ಆಂಧ್ರಪ್ರದೇಶದ ವಾಹನಗಳು ಬಂದರಷ್ಟೇ ನಮಗೆ ವಹಿವಾಟು. ಮೊದಲೆಲ್ಲ ಆಂಧ್ರದ ನೂರಾರು ಬಸ್‌ಗಳು ಸಂಚರಿಸುತ್ತಿದ್ದವು. ಕೊರೊನಾ ಬಳಿಕ ಬಸ್‌ ಸಂಚಾರ ಅಪರೂಪದಂತಾಗಿದೆ. ಕಾರ್ಮಿಕರನ್ನು ಕೈಬಿಡಬಾರದು ಎಂಬ ಕಾರಣಕ್ಕೆ ಬಾಗಿಲು ಹಾಕುವ ಬದಲು ತೆರೆದುಕೊಂಡು ಇದ್ದೇವೆ. ಬರುವ ಆದಾಯವೂ ಕಾರ್ಮಿಕರ ಸಂಬಳ, ಖರ್ಚಿಗೆ ಸರಿಹೋಗುತ್ತಿದೆ. ಕೆಲ ಬಾರಿ ಸಾಲ ಮಾಡುವ ಸ್ಥಿತಿ ಬಂದಿದೆ’ ಎಂದು ಚದುಲಪುರ ಕ್ರಾಸ್‌ನಲ್ಲಿರುವ ನ್ಯೂ ಚಂದ್ರು ಮಿಲ್ಟ್ರಿ ಹೋಟೆಲ್ ಮಾಲೀಕ ಚಂದ್ರಶೇಖರ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು