ಭಾನುವಾರ, ಏಪ್ರಿಲ್ 18, 2021
23 °C
ಮಹಾ ಶಿವರಾತ್ರಿ ಸಡಗರ: ದೇಗುಲಗಳಲ್ಲಿ ರುದ್ರಾಭಿಷೇಕ, ದರ್ಶನಕ್ಕೆ ಸಾಲುಗಟ್ಟಿದ ಭಕ್ತರು

ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲೆಡೆ ಮಹಾಶಿವನ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮಹಾ ಶಿವರಾತ್ರಿ ಪ್ರಯುಕ್ತ ಗುರುವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶಿವ ದೇವಸ್ಥಾನಗಳಲ್ಲಿ ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು. ಶಿವರಾತ್ರಿ ಉಪವಾಸ ನಿರತರು ದೇವಸ್ಥಾನಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ಶಿವ ದೇಗುಲಗಳ ಮುಂದೆ ಭಕ್ತಸಾಗರ ಹೆಚ್ಚಿತ್ತು. ಸಂಜೆ ಮತ್ತು ರಾತ್ರಿ ಈ ಸಂಖ್ಯೆ ಮತ್ತಷ್ಟು ಅಧಿಕವಾಯಿತು. ಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದ ಜತೆಗೆ ಹೂವು, ಬಿಲ್ವಪತ್ರೆಯಿಂದ ವಿಶೇಷ ಅರ್ಚನೆ ಮಾಡಲಾಯಿತು. ಅಭಿಷೇಕ ಪ್ರಿಯ ಶಿವನಿಗೆ ದೇಗುಲಗಳಲ್ಲಿ ರುದ್ರಾಭಿಷೇಕಗಳು ನೆರವೇರಿದವು.

ತಾಲ್ಲೂಕಿನ ನಂದಿಯ ಭೋಗ ನಂದೀಶ್ವರ ಸ್ವಾಮಿ, ನಂದಿ ಗಿರಿಧಾಮದ ಮೇಲಿರುವ ಯೋಗ ನಂದೀಶ್ವರ, ಎಂ.ಜಿ.ರಸ್ತೆಯಲ್ಲಿರುವ ಮರುಳ ಸಿದ್ದೇಶ್ವರ, ಪಾಪಾಗ್ನಿ ಮಠ, ಕೃಷ್ಣ ಚಿತ್ರಮಂದಿರ ರಸ್ತೆಯಲ್ಲಿರುವ ಪ್ರಸನ್ನೇಶ್ವರ ದೇವಸ್ಥಾನ, ಭುವನೇಶ್ವರಿ ವೃತ್ತದಲ್ಲಿರುವ ಗಂಗಾಧರೇಶ್ವರ ಸ್ವಾಮಿ, ಸ್ಥಾನಿಕ ನಂದೀಶ್ವರ ದೇಗುಲದಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಭೇಟಿ ನೀಡಿ ದರ್ಶನ ಪಡೆದರು.

ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು. ರಾತ್ರಿ ಜಾಗರಣೆ ಹಮ್ಮಿಕೊಳ್ಳಲಾಗಿತ್ತು.

ನಗರದ ಶಿವ ದೇವಾಲಯಗಳಲ್ಲಿ ಗುರುವಾರ ರಾತ್ರಿಯಿಡಿ ಜಾಗರಣೆ ನಡೆಯಿತು. ಭೋಗ ನಂದೀಶ್ವರ ದೇವಸ್ಥಾನಕ್ಕೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಚಿಂತಾಮಣಿ, ಶಿಡ್ಲಘಟ್ಟ, ಬೆಂಗಳೂರು ಮಾತ್ರವಲ್ಲದೆ ನೆರೆ ಆಂಧ್ರಪ್ರದೇಶದಿಂದ ಕೂಡ ಭಕ್ತರ ದಂಡು ಬಂದಿತ್ತು. ರಾತ್ರಿ ಶಿವನಾಮ ಸ್ಮರಣೆ ಮಾಡುವುದು, ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತರು ಜಾಗರಣೆ ಮಾಡಿದರು.

ಕಾಶಿ ವಿಶ್ವೇಶ್ವರ ಸ್ವಾಮಿಗೆ ವಿಶೇಷ ಪೂಜೆ: ಚೇಳೂರಿನ ಕಾಶಿ ವಿಶ್ವೇಶ್ವರ ಸ್ವಾಮಿ (ಈಶ್ವರ) ದೇವಾಲಯದಲ್ಲಿ ಮಹಾಶಿವರಾತ್ರಿ ದಿನದ ಅಂಗವಾಗಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.

ಬೆಳಿಗ್ಗೆ 6ರಿಂದ 10ರವರೆಗೆ ವಿಶೇಷ ರುದ್ರಾಭಿಷೇಕ ನಡೆಯಿತು. ರಾತ್ರಿಯಿಡೀ ದೇವಾಲಯದಲ್ಲಿ ಗ್ರಾಮಸ್ಥರಿಂದ ಅಖಂಡ ಭಜನೆ ಮತ್ತು ಸಂಗೀತ ರಸ ಸಂಜೆ ಏರ್ಪಡಿಸಲಾಗಿತ್ತು.

ಕುರ್ರಪಲ್ಲಿ ಬಯ್ಯಪ್ಪ ಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಮಳೆ-ಬೆಳೆ ಚೆನ್ನಾಗಿ ಬರಲಿ, ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಬಯಸಿದರು.

ಬೆಳಿಗ್ಗೆಯಿಂದಲೇ ನೂರಾರು ಭಕ್ತರುಈಶ್ವರ ದೇವರ ದರ್ಶನ ಮಾಡಿದರು. ನಾದಸ್ವರದ ಮಂಗಳ ವಾದ್ಯದೊಂದಿಗೆ ಬೆಳಗಿನ ಪೂಜೆಗಳು ಆರಂಭವಾಯಿತು. ಅಭಿಷೇಕದ ನಂತರ ಸ್ವಾಮಿಗೆ ಹೂಗಳಿಂದ ಮಾಡಿದ ಅಲಂಕಾರ ಭಕ್ತರ ಮನತಣಿಸಿತು.

ದೀಪೋತ್ಸವದ ವಿಶೇಷ ಪೂಜೆಗೆ ಸುತ್ತಮುತ್ತಲಿನ ಭಕ್ತರು ಸೇರಿದಂತೆ ಇತರರು ಪೂಜೆಯಲ್ಲಿ ಭಾಗವಹಿಸಿದ್ದರು. ಚೇಳೂರು ತಾಲ್ಲೂಕಿನ ಪುಲಗಲ್ಲು, ಚಾಕವೇಲು, ಪಾತಪಾಳ್ಯ ಹೋಬಳಿಯ ಬಿಳ್ಳೂರು ಸೋಮನಾಥಪುರ ಮುಂತಾದ ಗ್ರಾಮಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.

ಶಿವ ಮಂದಿರಗಳಲ್ಲಿ ವಿಶೇಷ ಪೂಜೆ: ಗುಡಿಬಂಡೆ ತಾಲೂಕಿನೆಲ್ಲೆಡೆ ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರ ಸಂಭ್ರಮ ಮನೆಮಾಡಿದ್ದು, ಎಲ್ಲಾ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಪೂಜೆ, ಭಜನೆ ಆಯೋಜಿಸಲಾಗಿತ್ತು.

ಮುಂಜಾನೆಯಿಂದ ಪಟ್ಟಣದ ಸುರಸದ್ಮಗಿರಿ ಬೆಟ್ಟದ ರಾಮೇಶ್ವರ, ಮಾರುತಿ ವೃತ್ತದ ಚಂದ್ರಮೌಳೇಶ್ವರ, ಸೋಮೇನಹಳ್ಳಿಯ ಚಿತ್ರಾವತಿ ನದಿ ದಡದಲ್ಲಿರುವ ಚಂದ್ರಮೌಳೇಶ್ವರ, ದಿನ್ನಹಳ್ಳಿಯ ಉದ್ಭವಮೂರ್ತಿ ಪಾತಾಳೇಶ್ವರ, ಸೋಮೇಶ್ವರದ ವಿಭೂದಿನಾದ ಬೃಂಗೇಶ್ವರ, ಚೆಂಡೂರಿನ ಕಾಶಿಲಿಂಗವಾದ ಚಂದ್ರಮೌಳೇಶ್ವರ, ಬೀಚಗಾನಹಳ್ಳಿ ಚಂದ್ರಮೌಳೇಶ್ವರ, ಜಂಗಾಲಹಳ್ಳಿ ಚಂದ್ರಮೌಲೇಶ್ವರ ಸೇರಿದಂತೆ ತಾಲೂಕಿನಾದ್ಯಂತ ರುದ್ರ ದೇವ ಮಾಹಾ ಶಿವನಿಗೆ ಮಹಾ ರುಧ್ರಾಭಿಶೇಕ, ಪಂಚಾಮೃತ ಅಭಿಷೇಕ ಇತ್ಯಾದಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.

ಪಟ್ಟಣದ ಚಂದ್ರಮೌಳೆಶ್ವರ ದೇವಾಲಯಕ್ಕೆ ಮುಂಜಾನೆಯಿಂದ ರಾತ್ರಿಯವರೆಗೆ ಭಕ್ತಾದಿಗಳು ಶಿವನ ದರ್ಶನಕ್ಕೆ ಸಾಲಿಗಟ್ಟಿ ನಿಂತಿದ್ದರು. ವಿವಿಧ ಹೂ, ಹಣ್ಣುಗಳು, ತುಳಸಿ ಮಾಲೆಗಳಿಂದ ಸಿಂಗರಿಸಿದ್ದ ಈಶ್ವರನಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಆರಾದಿಸಿದರು. ಪಟ್ಟಣದ ಗ್ರಾಮ ದೇವತೆ ಏಡುಗರಅಕ್ಕಮ್ಮ ದೇವರನ್ನು ರಾತ್ರಿ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.