ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮತ್ತೆ ನಿಗೂಢ ಸದ್ದು: ಭೂಮಿ ಅದುರಿದ ಅನುಭವ

Last Updated 14 ಡಿಸೆಂಬರ್ 2021, 4:32 IST
ಅಕ್ಷರ ಗಾತ್ರ

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಭಾನುವಾರ ರಾತ್ರಿ ಭಾರಿ ಶಬ್ದ ಕೇಳಿ ಬಂದಿದ್ದು, ಭೂಮಿ ಅದುರಿದ ಅನುಭವವಾಗಿದೆ. ಮನೆಗಳಲ್ಲಿ ಪಾತ್ರೆಗಳು ಉರುಳಿಬಿದ್ದ ನಂತರಭೂಕಂಪ ಆಗಿರಬಹುದು ಎಂದು ಭಾವಿಸಿದ ಗ್ರಾಮಸ್ಥರು ಗಾಬರಿಗೊಂಡು ಮನೆಯಿಂದ ಹೊರ ಬಂದಿದ್ದಾರೆ.

ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಗ್ರಾಮಗಳಲ್ಲಿ ರಾತ್ರಿ 8.45ಕ್ಕೆ ಜೋರಾದ ಶಬ್ದ ಕೇಳಿಸಿದೆ. ಒಂದು ಬಾರಿ ಮಾತ್ರ ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಗೆ ಭಾರಿ ಸದ್ದು ಕೇಳಿ ಬಂದಿದ್ದು, ಕಂಪನದ ಅನುಭವವಾಗಿದೆ.

ವಿಷಯ ತಿಳಿದ ಪೊಲೀಸರು ರಾತ್ರಿ ಈ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.‘ನಾನು ಚುನಾವಣಾ ಕಾರ್ಯದಲ್ಲಿದ್ದ ಕಾರಣ ದಿಬ್ಬೂರಹಳ್ಳಿ ಪೊಲೀಸರನ್ನು ಗ್ರಾಮಗಳಿಗೆ ಕಳಿಸಿಕೊಟ್ಟಿದ್ದೆ. ತಜ್ಞರಿಂದಲೂ ಈ ಬಗ್ಗೆ ಮಾಹಿತಿ ಪಡೆದಿರುವೆ. ಇದು ಕೇವಲ ನೆಲದೊಳಗಿನ ಏರ್‌ ಬ್ಲ್ಯಾಸ್ಟ್‌ ಅಷ್ಟೆ. ಯಾರೂ ಗಾಬರಿಪಡುವ ಅಗತ್ಯವಿಲ್ಲ’ ಎಂದು ತಹಶೀಲ್ದಾರ್‌ ಬಿ.ಎಸ್.ರಾಜೀವ್ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದ್ದಾರೆ.

‘ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿಯ ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಗ್ರಾಮಗಳಲ್ಲಿ ಇತ್ತೀಚಿನ ಮಳೆಗೆ ಕೊಳವೆಬಾವಿಗಳೆಲ್ಲ ಮರುಪೂರಣಗೊಂಡಿವೆ. ಮಳೆಯ ನೀರು ಭೂಮಿಯೊಳಗೆ ಇಂಗುವ ಸಂದರ್ಭದಲ್ಲಿ ಭೂಮಿ ಪದರಗಳ ಮಧ್ಯೆ ಸಾಕಷ್ಟು ಬಿರುಕು ಇರುವುದರಿಂದ ಏರ್‌ ಬ್ಲ್ಯಾಸ್ಟ್‌ ಆಗುವ ಸಾಧ್ಯತೆ ಇರುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಇದೇ ನವೆಂಬರ್‌ನಲ್ಲಿ ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು ಹೋಬಳಿ ವ್ಯಾಪ್ತಿಯ ಮಿಟ್ಟಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತ ಪದೇಪದೇ ಇದೇ ರೀತಿಯ ಶಬ್ದ ಮತ್ತು ಕಂಪನದ ಅನುಭವವಾಗಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ತಜ್ಞರ ತಂಡ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿತ್ತು.

‘ಭೂಮಿ ಕೆಳ ಪದರಗಳಲ್ಲಿ ಭಾರಿ ಪ್ರಮಾಣದ ನೀರು ಹರಿವ ಹಿನ್ನೆಲೆಯಲ್ಲಿ ಈ ರೀತಿಯ ಏರ್‌ ಬ್ಲ್ಯಾಸ್ಟ್‌ ಆಗುತ್ತದೆ. ಏರ್‌ ಬ್ಲ್ಯಾಸ್ಟ್‌ ಸಂದರ್ಭದಲ್ಲಿ ಈ ರೀತಿಯ ಶಬ್ದ ಸಾಮಾನ್ಯ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಜ್ಞರು ವರದಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT