ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದ ಸುಳಿಯಲ್ಲಿ ಮುದ್ರಣಾಲಯ ಉದ್ಯಮ- ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಮನವಿ

Last Updated 8 ಜೂನ್ 2021, 2:53 IST
ಅಕ್ಷರ ಗಾತ್ರ

ಚಿಂತಾಮಣಿ: ಕೋವಿಡ್ ಎರಡನೇ ಅಲೆಯ ಸುಮಾರು ಎರಡು ತಿಂಗಳ ಲಾಕ್‌ಡೌನ್‌ನಿಂದ ಎಲ್ಲ ಉದ್ದಿಮೆಗಳು ನೆಲಕಚ್ಚಿವೆ. ನಗರದಲ್ಲಿರುವ ಮುದ್ರಣಾಲಯಗಳು ಯಾವುದೇ ಕಾರ್ಯವಿಲ್ಲದೆ, ಮಾಲೀಕರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಕೊರೊನಾ ಮೊದಲ ಅಲೆಯ ಲಾಕ್‌ಡೌನ್‌ನಿಂದ ನಗರದ ಸುಮಾರು 40 ಮುದ್ರಣಾಲಯಗಳು ಸ್ಥಗಿತ
ಗೊಂಡಿದ್ದವು. ಅವುಗಳನ್ನೇ ನಂಬಿ ಬದುಕುತ್ತಿದ್ದ ಮಾಲೀಕರು ಹಾಗೂ ನೂರಕ್ಕೂ ಹೆಚ್ಚು ಕಾರ್ಮಿಕರು ಆರ್ಥಿಕ ಸಂಕಷ್ಟದಿಂದ ತತ್ತರಿಸುವಂತಾಗಿತ್ತು. ಸೋಂಕು ಕಡಿಮೆಯಾಗಿ ಮುದ್ರಣಾಲಯಗಳು ಕೆಲಸ ಆರಂಭಿಸಿ ಚೇತರಿಸಿಕೊಳ್ಳುತ್ತಿರುವಾಗಲೇ ಎರಡನೇ ಅಲೆಯ ಲಾಕ್ ಡೌನ್ ಘೋಷಣೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುದ್ರಣಾಲಯಗಳು ಸೀಜನ್‌ನಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುತ್ತವೆ. ಪ್ರತಿ ವರ್ಷ ಮಾರ್ಚಿ, ಏಪ್ರಿಲ್, ಮೇನಲ್ಲಿ ಮದುವೆ, ದ್ಯಾವರ, ಜಾತ್ರೆಗಳು ನಡೆಯುತ್ತವೆ. ಮದುವೆಗಳಿಗೆ ಹೆಣ್ಣು ಮತ್ತು ಗಂಡಿನ ಕಡೆಯವರು ಪ್ರತ್ಯೇಕವಾಗಿ ವಿವಾಹ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಿದ್ದರು. ಬಂಡಿದ್ಯಾವರಗಳ, ಜಾತ್ರೆಗಳ ಆಹ್ವಾನ ಪತ್ರಗಳ ಮುದ್ರಣ, ಕರಪತ್ರಗಳ ಮುದ್ರಣ ಹೀಗೆ ಬಿಡುವಿಲ್ಲದ ಕೆಲಸ ನಡೆಯುತ್ತಿತ್ತು.

ಈ ವರ್ಷವೂ ಸೀಜನ್ ಪ್ರಾರಂಭವಾಗುತ್ತಿದ್ದಂತೆ ಕೊರೊನಾ ಎರಡನೇ ಅಲೆಯ ಕಾರಣದಿಂದ ಲಾಕ್ ಡೌನ್ ಘೋಷಣೆಯಾಯಿತು. ಮದುವೆಗಳು ಮುಂದಕ್ಕೆ ಹೋದವು. ಹಗಲು ರಾತ್ರಿ ಟಿಕ್ ಟಿಕ್ ಸದ್ದು ಮಾಡುತ್ತಿದ್ದ ಮುದ್ರಣ ಯಂತ್ರಗಳು ಸ್ಥಗಿತಗೊಂಡವು. ಭರ್ಜರಿ ವ್ಯಾಪಾರ ನಡೆಸುತ್ತಿದ್ದ ಮುದ್ರಣಾಲಯಗಳ ಮಾಲೀಕರು ಕೈಸುಟ್ಟುಕೊಂಡು ಮನೆಯಲ್ಲಿ ಕೂರಬೇಕಾಯಿತು. ಪ್ರಿಟಿಂಗ್, ಬೈಡಿಂಗ್, ಥ್ರೆಡ್ಡಿಂಗ್, ಪ್ಯಾಕಿಂಗ್, ಡಿಟಿಪಿ, ಪೇಜ್ ಮೇಕಿಂಗ್ ಹೀಗೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸ, ವೇತ ವಿಲ್ಲದೆ ಬೀದಿಪಾಲಾದರು.

ಸಾಮಾನ್ಯವಾಗಿ ಯುಗಾದಿ ನಂತರ ತಾಲ್ಲೂಕಿನಾದ್ಯಂತ ಜಾತ್ರೆಗಳು ನಡೆಯುತ್ತಿದ್ದವು. ಜಾತ್ರೆಗಳ ಅಂಗವಾಗಿ ಗ್ರಾಮಗಳಲ್ಲಿ ನಾಟಕಗಳ ಪ್ರದರ್ಶನಗಳು ಜರುಗುತ್ತಿದ್ದವು. ನಾಟಕದ ತಂಡಗಳು ಬಣ್ಣ ಬಣ್ಣದ ಬೃಹತ್ ಗಾತ್ರದ ನಾಟಕದ ಕರಪತ್ರಗಳನ್ನು ಮುದ್ರಿಸುತ್ತಿದ್ದರು. ನಿತ್ಯ ಸಾವಿರಾರು ರೂಪಾಯಿ ಸಂಪಾದನೆ ಗಳಿಸುತ್ತಿದ್ದರು. ಸೀಜನ್ ವ್ಯಾಪಾರವನ್ನು ವರ್ಷವೆಲ್ಲ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ಸತತವಾಗಿ 2 ವರ್ಷಗಳು ಕೊರೊನಾ ಕರಿನೆರಳು ಮುದ್ರಣಾಲಯಗಳ ಮೇಲೆ ವ್ಯಾಪಿಸಿದೆ.

ಮುದ್ರಣಾಲಯಗಳ ಮಾಲೀಕರು ತಲೆ ಮೇಲೆ ಕೈಹೊತ್ತು ಚಿಂತಾಕ್ರಾಂತರಾಗಿದ್ದಾರೆ. ಕೆಲಸವಿಲ್ಲದೆ ಮುದ್ರಣ ಯಂತ್ರಗಳು ತುಕ್ಕು ಹಿಡಿಯತೊಡಗಿವೆ. ಮಾಲೀಕರು ಬಾಡಿಗೆ, ವಿದ್ಯುತ್ ಬಿಲ್ ಮೊದಲಾದ ವೆಚ್ಚಗಳಿಗೆ ಹಣ ಹೊಂದಿಸಲಾರದೆ ಪರದಾಡುತ್ತಿದ್ದಾರೆ. ಇತ್ತ ಸ್ವಾಭಿಮಾನದಿಂದ ಬೇರೆಯವರನ್ನು ಕೇಳಲಾಗದೆ ಅತ್ತ ಸಂಪಾದಿಸಿ ಬದುಕಲಾಗದೆ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ. ಇನ್ನು ಕಾರ್ಮಿಕರಿಗೆ ಎಲ್ಲಿಂದ ವೇತನ ನೀಡುತ್ತಾರೆ. ಕಾರ್ಮಿಕರಂತೂ ಬೀದಿಗೆ ಬಂದಿದ್ದಾರೆ.

‘ಮುದ್ರಕರ ಕ್ಷೇಮಾಭಿವೃದ್ಧಿ ಸಂಘವು ಹಿಂದೆ ಪ್ರಧಾನ ಮಂತ್ರಿಗಳು ಭೂಕಂಪ ಪರಿಹಾರ ನಿಧಿ, ಬೆಳಗಾವಿ ಮತ್ತು ಕೊಡಗಿನ ಪ್ರವಾಹ ಸಂತ್ರಸ್ಥರಿಗೆ ಸಹಾಯಹಸ್ತ ನೀಡಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು ಕೊರೊನಾ ಮಾರಿಯಿಂದ ಮುದ್ರಕರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ರಾಜ್ಯ ಸರ್ಕಾರ ಹಲವಾರು ಕ್ಷೇತ್ರಗಳ ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಮುದ್ರಣಾಲಯಗಳ ನೌಕರರನ್ನು ಮರೆತಿದೆ. ಮುದ್ರಣ ಉದ್ದಿಮೆಗೂ ಸಹಾಯ ಹಸ್ತ ಚಾಚಬೇಕು’ ಎನ್ನುತ್ತಾರೆ ಚಿಂತಾಮಣಿ ತಾಲ್ಲೂಕು ಮುದ್ರಕರ ಕ್ಷೇಮಾಭಿವೃದ್ಧಿ ಸಂಘದ ವಾಸವಿ ಸುರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT