ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲಿ ಗಿಮಿಕ್ ಇನ್ಮೇಲೆ ನಡೆಯೊಲ್ಲ

ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪರ ಪ್ರಚಾರ ಸಭೆಯಲ್ಲಿ ಮುಖಂಡ ಕೆ.ವಿ.ನವೀನ್ ಕಿರಣ್ ಟೀಕೆ
Last Updated 30 ನವೆಂಬರ್ 2019, 15:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಧಿಕಾರದ ಆಸೆಗೆ ಅಮಾಯಕ ಜನರಿಗೆ, ಮಹಿಳೆಯರಿಗೆ ಮಿಕ್ಸಿ, ಕುಕ್ಕರ್, ಸೀರೆ ಹಂಚಿ, ರಂಗೋಲಿ ಸ್ಪರ್ಧೆ ಏರ್ಪಡಿಸುವ ಮೂಲಕ ಗಿಮಿಕ್ ಮಾಡಿ ಶಾಸಕರಾಗುವ ಸುಧಾಕರ್ ಅವರ ಗಿಮಿಕ್ ಇನ್ನು ಮುಂದೆ ನಡೆಯುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಕೆ.ವಿ.ನವೀನ್ ಕಿರಣ್ ಹೇಳಿದರು.

ತಾಲ್ಲೂಕಿನ ಮಂಡಿಕಲ್ ಹೋಬಳಿಯ ಗುಂಡ್ಲ ಮಂಡಿಕಲ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರ ಪರ ಶನಿವಾರ ಪ್ರಚಾರ ನಡೆಸಿದ ಅವರು, ‘ಹಿಂದೆಲ್ಲ ಸುಧಾಕರ್ ಅವರು ಸಂಕ್ರಾಂತಿ ಸುಗ್ಗಿಗೆ ರಂಗೋಲಿ ಹಾಕ್ಸಿದ್ದೇನು?, ಮಿಕ್ಸಿ, ಕುಕ್ಕರ್, ಸೀರೆ ಹಂಚಿದ್ದೇನು? ಆದರೆ ಈ ಬಾರಿ ಹಬ್ಬನೂ ಇಲ್ಲ, ರಂಗೋಲಿ ಸ್ಪರ್ಧೆನೂ ಇಲ್ಲ. ಮತ ದೋಚುವ ಆಸೆಗೆ ಕುಟಿಲ ತಂತ್ರಗಳನ್ನು ಬಳಸುವ ಮೋಸಗಾರ, ನಯವಂಚಕ ಸುಧಾಕರ್ ಅವರಿಗೆ ದಯಮಾಡಿ ಯಾರೂ ಮತ ನೀಡಬಾರದು’ ಎಂದು ತಿಳಿಸಿದರು.

‘ಅಂಜನಪ್ಪ ಅವರು ಕೆಲ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಜನತೆಗೆ ನ್ಯಾಯಬೆಲೆ ಅಂಗಡಿ ಮೂಲಕ ಉಚಿತವಾಗಿ ಅಕ್ಕಿ, ಗೋಧಿ, ಸಕ್ಕರೆ ನೀಡಿ ಜನರನ್ನು ಬರಗಾಲದ ದವಡೆಯಿಂದ ಕಾಪಾಡಿದ್ದಾರೆ. ಹೀಗಾಗಿ, ಅವರನ್ನು ಇಂದಿಗೂ ಜನ ಅಕ್ಕಿ ಅಂಜನಪ್ಪ ಎಂದೇ ಗುರುತಿಸುತ್ತಾರೆ. ಅಂತಹ ಜನಪರ ಕಾಳಜಿ ಉಳ್ಳ ಅಂಜನಪ್ಪ ಅವರನ್ನು ಬೆಂಬಲಿಸುವ ಮೂಲಕ ಮತದಾರರು ಅಭಿವೃದ್ಧಿಯ ಪರವಾಗಿರುವ ಸಂದೇಶ ರವಾನಿಸಬೇಕು’ ಎಂದು ಮನವಿ ಮಾಡಿದರು.

ಎಂ.ಅಂಜನಪ್ಪ ಅವರ ಪತ್ನಿ ಡಾ.ಜಯಂತಿ ಮಾತನಾಡಿ, ‘ನಿಮ್ಮ ಕಷ್ಟ ಕಾಲದಲ್ಲಿ ಆಂಜಿನಪ್ಪ ಅವರು ಸಹಾಯ ಮಾಡಿದ್ದಾರೆ. ಹಾಗೆಯೇ ಇಂದು ನಾವು ನಿಮ್ಮ ಮತ ಸಹಾಯ ಕೋರಿ ಬಂದಿದ್ದೇವೆ. ನಿಮ್ಮ ಅಮೂಲ್ಯವಾದ ಮತವನ್ನು ಅಂಜನಪ್ಪ ಅವರಿಗೆ ನೀಡುವ ಮೂಲಕ ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡಲು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಕೋಚಿಮುಲ್ ನಿರ್ದೇಶಕ ಸಿ.ಎನ್.ವೆಂಕಟೇಶ್‌ ಮಾತನಾಡಿ, ‘ಈ ಹಿಂದೆಲ್ಲ ಶಾಸಕರಾಗಿ ಆಯ್ಕೆಯಾದವರು ಮರಣ ಹೊಂದಿದಾಗ ಮಾತ್ರ ಉಪ ಚುನಾವಣೆ ಬರುತ್ತಿತ್ತು. ಆದರೆ ಇಂದು ಕೆಲವರ ಸ್ವಾರ್ಥಕ್ಕಾಗಿ ಉಪ ಚುನಾವಣೆ ಬಂದಿದೆ. ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಸುಧಾಕರ್ ಅವರು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಜನರ, ಪಕ್ಷದ ಸ್ವಾಭಿಮಾನವನ್ನು ಕೋಟಿ, ಕೋಟಿಗೆ ಮಾರಿದ್ದಾರೆ. ಅಂತಹ ಪಕ್ಷದ್ರೋಹಿ, ಜನದ್ರೋಹಿಯನ್ನು ಸೋಲಿಸಬೇಕು’ ಎಂದು ಹೇಳಿದರು.

ಮುಖಂಡರಾದ ಮುನೇಗೌಡ, ಅಡಿಗಲ್ ಶ್ರೀಧರ್, ಸುಬ್ಬರಾಯಪ್ಪ, ಗೋವಿಂದಪ್ಪ, ರಾಜೇಶ್, ಆವಲಕೊಂಡರೆಡ್ಡಿ, ಬೈರಪ್ಪ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT